
ನೆದರ್ಲ್ಯಾಂಡ್ಸ್, ಮೇ 17: ಪ್ರತಿ ಭಾರತೀಯನೂ ಹೆಮ್ಮೆ ಪಡುವಂತಹ ಐತಿಹಾಸಿಕ ಕ್ಷಣವೊಂದಕ್ಕೆ ನೆದರ್ಲ್ಯಾಂಡ್ಸ್ ಸಾಕ್ಷಿಯಾಗಿದೆ. 11ನೇ ಶತಮಾನಕ್ಕೆ ಸೇರಿದ ಪ್ರಸಿದ್ಧ ಚೋಳ ಸಾಮ್ರಾಜ್ಯದ ತಾಮ್ರದ ಶಾಸನಗಳು (Copper Plates) ಸುದೀರ್ಘ ವರ್ಷಗಳ ನಂತರ ನೆದರ್ಲ್ಯಾಂಡ್ಸ್‌ನಿಂದ ಮತ್ತೆ ಭಾರತಕ್ಕೆ ಮರಳುತ್ತಿವೆ. ನೆದರ್ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟೆನ್ ಅವರ ಸಮ್ಮುಖದಲ್ಲಿ ನಡೆದ ಈ ಐತಿಹಾಸಿಕ ಹಸ್ತಾಂತರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸಿದ್ದರು. ಈ ಕುರಿತು ಸಾಮಾಜಿಕ ಜಾಲತಾಣವಾದ ‘X’ ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಇದು ಎಲ್ಲಾ ಭಾರತೀಯರಿಗೂ ಅತ್ಯಂತ ಸಂತೋಷದ ಕ್ಷಣ ಎಂದು ಬರೆದುಕೊಂಡಿದ್ದಾರೆ.
ತಮ್ಮ ಎಕ್ಸ್ ಪೋಸ್ಟ್ನಲ್ಲಿ ಶಾಸನದ ಕುರಿತು ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಶಾಸನಗಳ ಸಂಗ್ರಹದಲ್ಲಿ ಒಟ್ಟು 21 ದೊಡ್ಡ ತಾಮ್ರದ ಫಲಕಗಳು ಮತ್ತು 3 ಸಣ್ಣ ಫಲಕಗಳಿವೆ. ಇವುಗಳನ್ನು ಕಂಚಿನ ಉಂಗುರದಿಂದ ಒಟ್ಟಿಗೆ ಜೋಡಿಸಲಾಗಿದ್ದು, ಅದರ ಮೇಲೆ ಚೋಳ ರಾಜವಂಶದ ರಾಜಮುದ್ರೆ ಇದೆ. ಈ ಶಾಸನಗಳಲ್ಲಿನ ಹೆಚ್ಚಿನ ಬರಹಗಳನ್ನು ವಿಶ್ವದ ಅತ್ಯಂತ ಸುಂದರವಾದ ಭಾಷೆಗಳಲ್ಲಿ ಒಂದಾದ ತಮಿಳು ಭಾಷೆಯಲ್ಲಿ ಕೆತ್ತಲಾಗಿದೆ. ಇದರೊಂದಿಗೆ ಕೆಲವು ಭಾಗಗಳು ಸಂಸ್ಕೃತ ಭಾಷೆಯನ್ನೂ ಒಳಗೊಂಡಿವೆ ಎಂದಿದ್ದಾರೆ.
இந்தியர் அனைவருக்கும் ஒரு மகிழ்ச்சிகரமான தருணம்!
11-ம் நூற்றாண்டைச் சேர்ந்த சோழர்கால செப்பேடுகள், நெதர்லாந்தில் இருந்து இந்தியாவிற்குத் திரும்பவும் கொண்டுவரப்பட இருக்கின்றன. இது தொடர்பான விழாவில் பிரதமர் ராப் ஜெட்டன் அவர்களுடன் இணைந்து பங்கேற்றேன்.
சோழர் கால செப்பேடுகள், 21… pic.twitter.com/af4NWacMwt
— Narendra Modi (@narendramodi) May 16, 2026
ಚೋಳ ಸಾಮ್ರಾಜ್ಯದ ಶ್ರೇಷ್ಠ ದೊರೆ ರಾಜರಾಜ ಚೋಳ I ಅವರು ನೀಡಿದ್ದ ಮೌಖಿಕ ಭರವಸೆಯನ್ನು, ಅವರ ಮಗನಾದ ಸಾಮ್ರಾಟ್ ರಾಜೇಂದ್ರ ಚೋಳ I ಅವರು ಈ ತಾಮ್ರದ ಶಾಸನಗಳ ಮೂಲಕ ಅಧಿಕೃತಗೊಳಿಸಿದ್ದರು. ಇವು ಚೋಳರ ಭವ್ಯ ಸಂಸ್ಕೃತಿ, ಆಡಳಿತ ಮತ್ತು ನೌಕಾಪಡೆಯ ಪರಾಕ್ರಮವನ್ನು ಜಗತ್ತಿಗೆ ಸಾರುತ್ತವೆ ಎಂದು ತಮ್ಮ ಪೋಸ್ಟ್ನಲ್ಲಿ ಮೋದಿ ಬರೆದುಕೊಂಡಿದ್ದಾರೆ.
19ನೇ ಶತಮಾನದ ಮಧ್ಯಭಾಗದಿಂದ (1862) ಈ ಅಮೂಲ್ಯವಾದ ತಾಮ್ರದ ಶಾಸನಗಳನ್ನು ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಿಟ್ಟಿದ್ದ ನೆದರ್ಲ್ಯಾಂಡ್ಸ್ ಸರ್ಕಾರ ಮತ್ತು ವಿಶೇಷವಾಗಿ ಅಲ್ಲಿನ ಲೈಡನ್ ವಿಶ್ವವಿದ್ಯಾಲಯಕ್ಕೆ (Leiden University) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಭಾರತವು ಕಳೆದ 14 ವರ್ಷಗಳಿಂದ ಈ ಶಾಸನಗಳ ವಾಪಸಾತಿಗಾಗಿ ನಿರಂತರ ಪ್ರಯತ್ನ ನಡೆಸುತ್ತಿತ್ತು. ಚೋಳರ ಈ ಸಾಂಸ್ಕೃತಿಕ ಪರಂಪರೆಯು ಭಾರತಕ್ಕೆ ಮರಳುತ್ತಿರುವುದು ದೇಶದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:06 am, Sun, 17 May 26