Morbi Bridge Tragedy: ಮೊರ್ಬಿ ಸೇತುವೆ ಕುಸಿತ ದುರಂತದಲ್ಲಿ ಬಿಜೆಪಿ ಸಂಸದರ ಕುಟುಂಬದ 12 ಮಂದಿ ಸಾವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 31, 2022 | 11:59 AM

ಮೋರ್ಬಿ ಸೇತುವೆ ಕುಸಿತವಾದ ದುರ್ಘಟನೆಯಲ್ಲಿ ನಾನು 5 ಮಕ್ಕಳು ನನ್ನ ಕುಟುಂಬದ 12 ಮಂದಿಯನ್ನು ಕಳೆದುಕೊಂಡಿದ್ದೇನೆ" ಎಂದು ಬಿಜೆಪಿ ಸಂಸದ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ ಮಾಹಿತಿ ನೀಡಿದ್ದಾರೆ.

Morbi Bridge Tragedy: ಮೊರ್ಬಿ ಸೇತುವೆ ಕುಸಿತ ದುರಂತದಲ್ಲಿ ಬಿಜೆಪಿ ಸಂಸದರ ಕುಟುಂಬದ 12 ಮಂದಿ ಸಾವು
ರಾಜ್‌ಕೋಟ್‌ನ ಬಿಜೆಪಿ ಸಂಸದ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ
Follow us on

ಅಹಮದಾಬಾದ್​: ಭಾನುವಾರ ಸಂಜೆ ಗುಜರಾತ್‌ನ ಮೊರ್ಬಿ ಸೇತುವೆ (Mobri Bridge Collapse) ಕುಸಿದು ಸಾವನ್ನಪ್ಪಿದವರ ಸಂಖ್ಯೆ 141ಕ್ಕೆ ಏರಿಕಯಾಗಿದೆ. ಈ ದುರಂತದಲ್ಲಿ ರಾಜ್‌ಕೋಟ್‌ನ ಬಿಜೆಪಿ ಸಂಸದ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ ಅವರ ಕುಟುಂಬದ 12 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಹಲವು ಮಂದಿ ನದಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ. ಈ ದುರಂತದ ತನಿಖೆಗಾಗಿ 5 ಸದಸ್ಯರ ವಿಶೇಷ ಸಮಿತಿಯನ್ನು ಗುಜರಾತ್ ಸರ್ಕಾರ ರಚಿಸಿದೆ.

“ಮೋರ್ಬಿ ಸೇತುವೆ ಕುಸಿತವಾದ ದುರ್ಘಟನೆಯಲ್ಲಿ ನಾನು 5 ಮಕ್ಕಳು ನನ್ನ ಕುಟುಂಬದ 12 ಮಂದಿಯನ್ನು ಕಳೆದುಕೊಂಡಿದ್ದೇನೆ. ನನ್ನ ತಂಗಿಯ ಕುಟುಂಬದ ಸದಸ್ಯರು ಈ ದುರಂತದಲ್ಲಿ ಮೃತಪಟ್ಟಿದ್ದಾರೆ” ಎಂದು ಇಂಡಿಯಾ ಟುಡೇಗೆ ಬಿಜೆಪಿ ಸಂಸದ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ ಮಾಹಿತಿ ನೀಡಿದ್ದಾರೆ.

ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಸ್ಥಳೀಯ ಆಡಳಿತವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಈ ದುರ್ಘಟನೆಯಲ್ಲಿ ಬದುಕುಳಿದ ಎಲ್ಲರನ್ನು ರಕ್ಷಿಸಲಾಗಿದೆ. ನದಿಯಲ್ಲಿದ್ದವರ ಮೃತದೇಹಗಳನ್ನು ಹೊರತೆಗೆಯಲು ಪ್ರಯತ್ನಗಳು ನಡೆಯುತ್ತಿವೆ.

ಇದನ್ನೂ ಓದಿ: ಮೊರ್ಬಿ ಸೇತುವೆ ಕುಸಿತ: ಮೃತರ ಕುಟುಂಬಕ್ಕೆ ತಲಾ 2ಲಕ್ಷ ಪರಿಹಾರ ಘೋಷಣೆ; ದುಃಖ ವ್ಯಕ್ತಪಡಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ

ಗುಜರಾತ್‌ನ ಮೊರ್ಬಿ ನಗರದಲ್ಲಿ ಶತಮಾನಗಳಷ್ಟು ಹಳೆಯದಾದ ಮಚ್ಚು ನದಿಯ ತೂಗು ಸೇತುವೆ ಕುಸಿದು 141 ಜನರು ಮೃತಪಟ್ಟಿದ್ದರು. ಇವರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಎನ್‌ಡಿಆರ್‌ಎಫ್, ಸೇನಾ ಪಡೆ, ಎಸ್‌ಡಿಆರ್‌ಎಫ್ ಮತ್ತು ಸ್ಥಳೀಯ ಆಡಳಿತದ 5 ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ.

ರಾಜ್ಯ ರಾಜಧಾನಿಯಿಂದ ಸುಮಾರು 300 ಕಿಮೀ ದೂರದಲ್ಲಿರುವ ಮೋರ್ಬಿಯಲ್ಲಿ ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಂಘವಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ರಾಜ್ಯ ಸರ್ಕಾರವು ಸೇತುವೆ ಕುಸಿತದ ತನಿಖೆಗಾಗಿ 5 ವಿಶೇಷ ಸದಸ್ಯರ ಸಮಿತಿಯನ್ನು ರಚಿಸಿದೆ. ಎಸ್​ಐಟಿಯ ನೇತೃತ್ವವನ್ನು ಪೌರಾಡಳಿತ ಆಯುಕ್ತ ರಾಜ್‌ಕುಮಾರ್ ಬೇನಿವಾಲ್, ಸಂದೀಪ್ ವಾಸವ, ಪೊಲೀಸ್ ಮಹಾನಿರೀಕ್ಷಕ ಸುಭಾಷ್ ತ್ರಿವೇದಿ ಮತ್ತು ಇಬ್ಬರು ಎಂಜಿನಿಯರ್‌ಗಳು ವಹಿಸಲಿದ್ದಾರೆ.

ಇದನ್ನೂ ಓದಿ: ಗುಜರಾತ್‌ನಲ್ಲಿ ಕೇಬಲ್ ಸೇತುವೆ ಕುಸಿದು ದುರಂತ: ಸಾವಿನ ಸಂಖ್ಯೆ 90ಕ್ಕೆ ಏರಿಕೆ, ಮೋದಿ ರೋಡ್ ಶೋ ಕ್ಯಾನ್ಸಲ್

ಗುಜರಾತ್ ಸರ್ಕಾರವು 4 ಎನ್‌ಡಿಆರ್‌ಎಫ್ ತಂಡಗಳನ್ನು ಹಾಗೂ ರಕ್ಷಣಾ ಸಿಬ್ಬಂದಿಯನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿದೆ. ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಪಕ್ಕದ ಜಿಲ್ಲೆಗಳಿಂದ ಈಜುಗಾರರು ಮತ್ತು ಡೈವರ್‌ಗಳನ್ನು ಸಹ ನಿಯೋಜನೆ ಮಾಡಿದೆ. ಭಾನುವಾರ ಸಂಜೆ 6.30ರ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಈ ವೇಳೆ ಸೇತುವೆ ಮೇಲೆ ಮಕ್ಕಳು, ವೃದ್ಧರೂ ಸೇರಿದಂತೆ 400ಕ್ಕೂ ಹೆಚ್ಚು ಜನರು ನೆರೆದಿದ್ದರು. ಸೇತುವೆ ಕುಸಿತದಿಂದಾಗಿ ಹಲವರು ನದಿಗೆ ಬಿದ್ದಿದ್ದಾರೆ. 250ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಇನ್ನು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:44 am, Mon, 31 October 22