ನವದೆಹಲಿ: 2017ರಿಂದ 2022ರ ಅವಧಿಯಲ್ಲಿ ಅಂದರೆ 5 ವರ್ಷಗಳಲ್ಲಿ 13 ಲಕ್ಷಕ್ಕೂ ಹೆಚ್ಚು ಭಾರತೀಯರು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ ಎಂದು ಶಿಕ್ಷಣ ಸಚಿವಾಲಯ ಕಳೆದ ತಿಂಗಳು ರಾಜ್ಯಸಭೆಗೆ ತಿಳಿಸಿದೆ. ಈ ಮಾಹಿತಿಯನ್ನು ಶಿಕ್ಷಣ ಸಚಿವ ಸುಭಾಷ್ ಸರ್ಕಾರ್ ಹಂಚಿಕೊಂಡಿದ್ದಾರೆ. ಸಂಸತ್ತಿನ ಮೇಲ್ಮನೆಯಲ್ಲಿನ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು ವಿದೇಶಿ ವಿಶ್ವವಿದ್ಯಾಲಯಗಳು ಅಥವಾ ಕಾಲೇಜುಗಳಿಗೆ ದಾಖಲಾದ ಭಾರತೀಯ ವಿದ್ಯಾರ್ಥಿಗಳ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
2022ರ ಅಂಕಿ-ಅಂಶದಂತೆ ಸುಮಾರು 13 ಲಕ್ಷ ಭಾರತೀಯ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಲ್ಲಿ ವಿದೇಶದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಆದರೆ, ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಮಾಡುವ ವೆಚ್ಚದ ಬಗ್ಗೆ ಶಿಕ್ಷಣ ಸಚಿವಾಲಯವು ಯಾವುದೇ ಡೇಟಾವನ್ನು ಸಂಗ್ರಹಿಸಿಲ್ಲ. ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ತೆರಳುತ್ತಿರುವ ಭಾರತೀಯ ವಿದ್ಯಾರ್ಥಿಗಳ ಮೊದಲ ಆದ್ಯತೆ ಅಮೆರಿಕಾ ಆಗಿದೆ.
ಇದನ್ನೂ ಓದಿ: ಬಿಹಾರದ ದಿನಗೂಲಿಯ ಪುತ್ರ ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕಾಗಿ 2.5 ಕೋಟಿ ರೂ ಫೆಲೋಶಿಪ್ ಗಳಿಸಿದ ಕತೆಯಿದು!
ಬೇರೆಲ್ಲ ದೇಶಗಳಿಗಿಂತಲೂ ಅಮೆರಿಕಾದಲ್ಲಿ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ, 4,65,791 ವಿದ್ಯಾರ್ಥಿಗಳು ಅಮೆರಿಕಾಕ್ಕೆ ಹೋಗಿದ್ದಾರೆ. 1,83,310 ವಿದ್ಯಾರ್ಥಿಗಳು ಕೆನಡಾ, ಯುಎಇ (1,64,000), ಆಸ್ಟ್ರೇಲಿಯಾ (1,00,009), ಇಂಗ್ಲೆಂಡ್ (55,465), ಸೌದಿ ಅರೇಬಿಯಾ (65,800), ಕತಾರ್ ( 46,000), ಜರ್ಮನಿ (34,864), ಜಾರ್ಜಿಯಾ (14,000), ಫ್ರಾನ್ಸ್ (10,003), ಬಾಂಗ್ಲಾದೇಶ (9,308), ಅರ್ಮೇನಿಯಾ (8,015) ಮತ್ತು ಚೀನಾದಲ್ಲಿ (6,436) ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಫ್ರಾನ್ಸ್‌ನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ 5 ವರ್ಷಗಳ ಕೆಲಸದ ವೀಸಾ- ಪ್ರಧಾನಿ ಮೋದಿ
ಕಳೆದ ವರ್ಷದ ಬಜೆಟ್ ಪ್ರಸ್ತಾವನೆಯಲ್ಲಿ ಘೋಷಿಸಿದಂತೆ, ವಿಶ್ವ ದರ್ಜೆಯ ವಿದೇಶಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಿಗೆ ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿ (ಗುಜರಾತ್ ಇಂಟರ್‌ನ್ಯಾಶನಲ್ ಫೈನಾನ್ಸ್ ಟೆಕ್-ಸಿಟಿ) ಹಣಕಾಸು ನಿರ್ವಹಣೆ, ಫಿನ್‌ಟೆಕ್, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಕೋರ್ಸ್‌ಗಳನ್ನು ನೀಡಲು ಅನುಮತಿ ನೀಡಲಾಗಿದೆ ಎಂದು ಸರ್ಕಾರ್ ತಿಳಿಸಿದ್ದಾರೆ.