ಕೊರೊನಾ ಎರಡನೇ ಅಲೆಯ ವಿರುದ್ಧ ಹೋರಾಟವೇ ಇನ್ನು ಮುಗಿದಿಲ್ಲ. ಆದರೆ ಅದಾಗಲೇ ಕೇರಳದಲ್ಲಿ ಝಿಕಾ ವೈರಸ್ ಕಾಟ ಶುರುವಾಗಿದೆ. ಮೊನ್ನೆ ಮಹಿಳೆಯೊಬ್ಬರಲ್ಲಿ ಈ ವೈರಸ್ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಇದೀಗ ಕೇರಳದಲ್ಲಿ ಬರೋಬ್ಬರಿ 14 ಝಿಕಾ ವೈರಸ್ ಕೇಸ್ಗಳು ಪತ್ತೆಯಾಗಿವೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಝಿಕಾ ವೈರಸ್ ಗಂಭೀರತೆ ಎಷ್ಟಿದೆ ಎಂಬುದನ್ನು ಪರಿಶೀಲಿಸಲು ಮತ್ತು ರಾಜ್ಯ ಸರ್ಕಾರಕ್ಕೆ ಸಹಾಯ ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದೆ. ಈಗಾಗಲೇ 6 ಜನ ತಜ್ಞರ ತಂಡವನ್ನು ಕೇರಳಕ್ಕೆ ಕಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲವ ಅಗರ್ವಾಲ್, ಏಮ್ಸ್ನ ವೈದ್ಯರು, ತಜ್ಞರ ತಂಡ ಈಗಾಗಲೇ ಕೇರಳಕ್ಕೆ ತೆರಳಿದೆ. ಅಲ್ಲಿನ ಝಿಕಾ ವೈರಸ್ ಪರಿಸ್ಥಿತಿಯ ವರದಿ ನೀಡುವಂತೆ ಹೇಳಲಾಗಿದೆ ಮತ್ತು ಈ ತಜ್ಞರು ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲಿದ್ದಾರೆ ಎಂದೂ ಲವ ಅಗರ್ವಾಲ್ ಹೇಳಿದ್ದಾರೆ.
ಕೇರಳದಲ್ಲಿ ಒಟ್ಟು 14 ಜನರಲ್ಲಿ ಝಿಕಾ ವೈರಸ್ ಕಾಣಿಸಿಕೊಂಡಿದ್ದು, ಅದರಲ್ಲಿ ಒಬ್ಬರು 24ವರ್ಷದ ಗರ್ಭಿಣಿ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಆರೋಗ್ಯ ಸಚಿವರಾದ ವೀಣಾ ಜಾರ್ಜ್, ಈಡಿಸ್ ಸೊಳ್ಳೆಯಿಂದ ಹರಡುವ ಈ ರೋಗ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಪ್ರತಿ ಜಿಲ್ಲೆಗಳಲ್ಲೂ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಏನಿದು ಝಿಕಾ ವೈರಸ್?
ಝಿಕಾ ವೈರಸ್ ಎಂಬುದು ಈಡಿಸ್ ಎಂಬ ಸೊಳ್ಳೆಯಿಂದ ಹುಟ್ಟುವ ಸೋಂಕು ಆಗಿದ್ದು, ಮೊದಲು ಪತ್ತೆಯಾಗಿದ್ದು 1947ರಲ್ಲಿ ಉಗಾಂಡಾದಲ್ಲಿ. ಮೊದಲು ಮಂಗಗಳಲ್ಲಿ ಕಾಣಿಸಿಕೊಂಡ ಕಾಯಿಲೆ ನಂತರ 1952ರಲ್ಲಿ ಉಗಾಂಡಾ ಮತ್ತು ಯುನೈಟೆಡ್ ರಿಪಬ್ಲಿಕ್ ಆಫ್ ಟಾಂಜಾನಿಯಾದಲ್ಲಿ ಮಾನವರಲ್ಲಿಯೂ ಪತ್ತೆಯಾಯ್ತು. 1960ರಿಂದ 1980ರ ಸುಮಾರಿಗೆ ಆಫ್ರಿಕಾ, ಏಷ್ಯಾ, ಅಮೆರಿಕಾಗಳಿಗೆ ಕಾಲಿಟ್ಟಿತು. ಸಾಮಾನ್ಯ ಜ್ವರ, ಮೈಮೇಲೆ ಕೆಂಪು ಕಲೆ, ಕೆಂಪು ಕಣ್ಣುಗಳು, ಸಂಧಿವಾತ, ಸ್ನಾಯು ನೋವು ಇತ್ಯಾದಿಗಳು ರೋಗ ಲಕ್ಷಣಗಳಾಗಿವೆ. ಝಿಕಾ ವೈರಸ್ ದೇಹವನ್ನು ಪ್ರವೇಶಿಸಿದ ಮೂರನೇ ದಿನದಿಂದ 12 ದಿನಗಳಲ್ಲಿ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವರಿಗೆ ಇದು ತೀವ್ರವಾಗಿ ಬಾಧಿಸುವುದಿಲ್ಲ.
ಇದನ್ನೂ ಓದಿ: Karnataka Dams: ಮುಂಗಾರು ಮಳೆ ಮತ್ತೆ ಅಬ್ಬರಿಸತೊಡಗಿದೆ; ರಾಜ್ಯದ 12 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ
(14 Zika virus cases reported in Kerala)