Tamil Nadu: ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಗೆದ್ದ ಖುಷಿಗೆ ದೇಗುಲದ ಮುಂದೆ ಪ್ರಾಣತ್ಯಾಗ ಮಾಡಿದ ಅಭಿಮಾನಿ!

ಶುಕ್ರವಾರ ಆಷಾಡ ಅಮಾವಾಸ್ಯೆ ಆಗಿದ್ದರಿಂದ ಅದೇ ದಿನ ತಮ್ಮ ಹರಕೆ ತೀರಿಸಬೇಕೆಂದು ಉಳಗನಾಥನ್ ಕಾಯುತ್ತಿದ್ದರು. ಅದರಂತೆ, ನಿನ್ನೆ ಮುಂಜಾನೆ ಸ್ನಾನ ಮಾಡಿ, ದೇವರಿಗೆ ನಮಸ್ಕರಿಸಿ, ದೇವಸ್ಥಾನದ ಎದುರು ಬೆಂಕಿಗೆ ಆಹುತಿಯಾಗಿದ್ದಾರೆ.

Tamil Nadu: ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಗೆದ್ದ ಖುಷಿಗೆ ದೇಗುಲದ ಮುಂದೆ ಪ್ರಾಣತ್ಯಾಗ ಮಾಡಿದ ಅಭಿಮಾನಿ!
ಸಂಗ್ರಹ ಚಿತ್ರ

ಚೆನ್ನೈ: ತಮ್ಮ ಮೆಚ್ಚಿನ ನಾಯಕ ಚುನಾವಣೆಯಲ್ಲಿ ಗೆದ್ದು ಬರಲಿ ಎಂದು ಹೋಮ, ಹವನಗಳನ್ನು ಮಾಡುವವರಿದ್ದಾರೆ, ತಮ್ಮ ಫೇವರೆಟ್ ಕ್ರಿಕೆಟ್ ತಂಡ ಜಯಭೇರಿ ಬಾರಿಸಲಿ ಎಂದು ಏನೇನೋ ಹರಕೆಗಳನ್ನು ಕಟ್ಟಿಕೊಳ್ಳುವ ಅಭಿಮಾನಿಗಳೂ ಇದ್ದಾರೆ. ಆದರೆ, ತಮಿಳುನಾಡಿನಲ್ಲಿ ಒಬ್ಬ ವ್ಯಕ್ತಿ ಈ ಬಾರಿ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದರೆ ತನ್ನನ್ನೇ ದೇವರಿಗೆ ಬಲಿ ಕೊಡುತ್ತೇನೆ ಎಂದು ಹರಕೆ ಕಟ್ಟಿಕೊಂಡಿದ್ದರು. ಕಾಕತಾಳೀಯ ಎಂಬಂತೆ ಈ ಬಾರಿ ಡಿಎಂಕೆ ಪಕ್ಷ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತು. ಹೀಗಾಗಿ, ಆ ಅಭಿಮಾನಿ ನಿನ್ನೆ ದೇವರಿಗೆ ಹೇಳಿಕೊಂಡಿದ್ದ ಹರಕೆಯನ್ನು ತೀರಿಸಿದ್ದಾರೆ. ದೇವಸ್ಥಾನದ ಮುಂದೆ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ!

ಹೌದು, ತಮಿಳುನಾಡಿನ ಕರೂರು ಜಿಲ್ಲೆಯ ದೇವಸ್ಥಾನವೊಂದರ ಎದುರು ಶುಕ್ರವಾರ ನಸುಕಿನ ಜಾವ ವ್ಯಕ್ತಿಯೊಬ್ಬರು ಜೀವಂತ ದಹನವಾಗಿದ್ದಾರೆ. ದೇಗುಲದ ಎದುರು ಬೆಂಕಿ ಹೊತ್ತಿ ಉರಿಯುತ್ತಿದ್ದುದನ್ನು ಕಂಡ ಊರಿನವರು ಆ ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ಆ ವ್ಯಕ್ತಿಯ ಶರೀರ ಬೆಂಕಿಯಲ್ಲಿ ಬೆಂದು ಹೋಗಿತ್ತು. ಡಿಎಂಕೆ ಪಕ್ಷದ ಅಭಿಮಾನಿಯಾಗಿದ್ದ 60 ವರ್ಷದ ಉಳಗನಾಥನ್ ಎಂಬುವವರು ದೇವಸ್ಥಾನದ ಮುಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ವ್ಯಕ್ತಿ.

ಈ ವರ್ಷ ಚುನಾವಣೆಯಲ್ಲಿ ಡಿಎಂಕೆ ಪಕ್ಷದ ಸ್ಥಳೀಯ ಅಭ್ಯರ್ಥಿ ಸೆಂಥಿಲ್ ಬಾಲಾಜಿ ಗೆದ್ದು, ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದರೆ ಪ್ರಾಣತ್ಯಾಗ ಮಾಡುವುದಾಗಿ ಉಳಗನಾಥನ್ ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಈ ಬಾರಿ ಡಿಎಂಕೆ ಪಕ್ಷ ಗೆದ್ದು, ಎಂ.ಕೆ. ಸ್ಟಾಲಿನ್ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದ್ದರು. ತನ್ನ ಬೇಡಿಕೆಗೆ ದೇವರು ತಥಾಸ್ತು ಎಂದಿದ್ದಾನೆ ಎಂದು ಖುಷಿ ಪಟ್ಟ ಉಳಗನಾಥನ್​ಗೆ ಈ ಹಿಂದೆ ದೇವರಿಗೆ ಕಟ್ಟಿಕೊಂಡಿದ್ದ ಹರಕೆ ನೆನಪಾಗಿತ್ತು. ಹೀಗಾಗಿ, ಶುಕ್ರವಾರ ಮುಂಜಾನೆ ದೇವಸ್ಥಾನಕ್ಕೆ ಹೋದ ಉಳಗನಾಥನ್ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಜೀವವನ್ನೇ ಬಲಿ ಕೊಟ್ಟಿದ್ದಾರೆ.

ದೇವಸ್ಥಾನದ ಕಟ್ಟೆಯ ಮೇಲೆ ಇಟ್ಟಿದ್ದ ಸೂಸೈಡ್ ನೋಟ್​ನಿಂದಾಗಿ ಉಳಗನಾಥನ್ ಅವರ ಸಾವಿನ ಕಾರಣ ಬಯಲಾಗಿದೆ. 60 ವರ್ಷದ ಉಳಗನಾಥನ್ ಇತ್ತೀಚೆಗಷ್ಟೆ ಸರ್ಕಾರಿ ಉದ್ಯೋಗದಿಂದ ನಿವೃತ್ತರಾಗಿದ್ದರು. ಡಿಎಂಕೆ ಪಕ್ಷದ ಪಕ್ಕಾ ಅಭಿಮಾನಿಯಾಗಿದ್ದ ಅವರು ಸ್ಥಳೀಯ ನಾಯಕ ಸೆಂಥಿಲ್ ಬಾಲಾಜಿ ಪರವಾಗಿ ಪ್ರಚಾರವನ್ನೂ ಮಾಡಿದ್ದರು. ಚುನಾವಣೆಯಲ್ಲಿ ಸೆಂಥಿಲ್ ದಿಗ್ವಿಜಯ ಸಾಧಿಸಿದ್ದರು. ಶುಕ್ರವಾರ ಆಷಾಡ ಅಮಾವಾಸ್ಯೆ ಆಗಿದ್ದರಿಂದ ಅದೇ ದಿನ ತಮ್ಮ ಹರಕೆ ತೀರಿಸಬೇಕೆಂದು ಉಳಗನಾಥನ್ ಕಾಯುತ್ತಿದ್ದರು. ಅದರಂತೆ, ನಿನ್ನೆ ಮುಂಜಾನೆ ಸ್ನಾನ ಮಾಡಿ, ದೇವರಿಗೆ ನಮಸ್ಕರಿಸಿ, ದೇವಸ್ಥಾನದ ಎದುರು ಬೆಂಕಿಗೆ ಆಹುತಿಯಾಗಿದ್ದಾರೆ.

ಕರೂರು ಪೊಲೀಸರು ಸೂಸೈಡ್ ನೋಟ್ ಅನ್ನು ವಶಕ್ಕೆ ಪಡೆದಿದ್ದು, ಈ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಚುನಾವಣೆಗೂ ಮುನ್ನ ನೀಡಿದ ಭರವಸೆಗಳನ್ನೆಲ್ಲ ಗಾಳಿ ತೂರುವ ರಾಜಕಾರಣಿಗಳ ನಡುವೆ ಒಂದು ಪಕ್ಷಕ್ಕಾಗಿ ತನ್ನ ಪ್ರಾಣವನ್ನೇ ಬಲಿ ಕೊಟ್ಟ ಕಾರ್ಯಕರ್ತನ ವರ್ತನೆ ಅಚ್ಚರಿ ಮತ್ತು ಆಘಾತಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮೇಕೆದಾಟು ಯೋಜನೆ: ಜುಲೈ 12 ರಂದು ಸರ್ವಪಕ್ಷ ಸಭೆಗೆ ಕರೆ ನೀಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್

ಇದನ್ನೂ ಓದಿ: K Annamalai: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನೇಮಕ

Read Full Article

Click on your DTH Provider to Add TV9 Kannada