AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡ ಆಸ್ಟ್ರೇಲಿಯಾದಲ್ಲಿದ್ದಾನೆಂದು 2 ವರ್ಷದಿಂದ ನಂಬಿಸಿದ್ದ ಹೆಂಡತಿ; ದೃಶ್ಯ ಸಿನಿಮಾ ರೀತಿಯೇ ನಡೆದಿತ್ತು ಕೊಲೆ!

ಗುಜರಾತ್‌ನ ಜಾಮ್‌ನಗರದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬನ ಪ್ರಕರಣವು ಆಘಾತಕಾರಿ ತಿರುವು ಪಡೆದುಕೊಂಡಿದ್ದು, ಸುಮಾರು 2 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹದ ಅಸ್ಥಿಪಂಜರವು ಕಾಂಕ್ರೀಟ್ ನೆಲದ ಅಡಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ, ಆಕೆಯ ಪ್ರೇಮಿ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ. ದೃಶ್ಯ ಸಿನಿಮಾದ ರೀತಿಯಲ್ಲೇ ಕೊಲೆ ಮಾಡಿ ಶವವನ್ನು ಹೂತುಹಾಕಿದ್ದ ಮಹಿಳೆ ಈ ಕೃತ್ಯ ಎಸಗಿದ್ದಾರೂ ಏಕೆ? ಎಂಬ ಮಾಹಿತಿ ಇಲ್ಲಿದೆ.

ಗಂಡ ಆಸ್ಟ್ರೇಲಿಯಾದಲ್ಲಿದ್ದಾನೆಂದು 2 ವರ್ಷದಿಂದ ನಂಬಿಸಿದ್ದ ಹೆಂಡತಿ; ದೃಶ್ಯ ಸಿನಿಮಾ ರೀತಿಯೇ ನಡೆದಿತ್ತು ಕೊಲೆ!
Jamnagar Crime NewsImage Credit source: TV9
ಸುಷ್ಮಾ ಚಕ್ರೆ
|

Updated on: Aug 01, 2026 | 7:53 PM

Share

ಜಾಮ್​ನಗರ, ಆಗಸ್ಟ್ 1: ಗುಜರಾತ್‌ನ ಜಾಮ್‌ನಗರದ ಜಿಗ್ನೇಶ್ ಮಾವಡಿಯಾ ಕಳೆದ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದರು. ಅವರು ಕೆಲಸಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಅಲ್ಲಿನ ಕಂಪನಿಯ ನಿಯಮದ ಪ್ರಕಾರ ಯಾರೊಂದಿಗೂ ಫೋನ್ ಸಂಪರ್ಕದಲ್ಲಿಲ್ಲ ಎಂದು ಆತನ ಪತ್ನಿ ಪೃಥ್ವಿ ಸಂಬಂಧಿಕರಿಗೆ ಹೇಳುತ್ತಿದ್ದರು. ಜಿಗ್ನೇಶ್ ಎಲ್ಲಿದ್ದಾರೆ ಎಂದು ಕುಟುಂಬದವರು ಪದೇ ಪದೇ ಕೇಳಿದಾಗಲೆಲ್ಲಾ ಆಕೆ ಒಂದಲ್ಲ ಒಂದು ಸುಳ್ಳು ಕಾರಣಗಳನ್ನು ಹೇಳಿ ಸಾಗಹಾಕುತ್ತಿದ್ದರು. ಆದರೆ, ಆತನನ್ನು ಆಕೆಯೇ ಕೊಲೆ ಮಾಡಿರುವ ಸಂಗತಿ 2 ವರ್ಷಗಳ ನಂತರ ಬೆಳಕಿಗೆ ಬಂದಿದೆ. ದೃಶ್ಯ ಸಿನಿಮಾದ ರೀತಿಯಲ್ಲೇ ಗುಂಡಿಯಲ್ಲಿ ಶವ ಹೂತುಹಾಕಿ, ಅದರ ಮೇಲೆ ಕಾಂಕ್ರೀಟ್ ಹಾಕಿದ್ದರು.

ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆಂದು ಸುಳ್ಳು:

ನನ್ನ ಗಂಡ ಜಿಗ್ನೇಶ್ ಮಾವಡಿಯಾ ಕೆಲಸಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ. ಕಂಪನಿಯ ನಿಯಮಗಳ ಕಾರಣದಿಂದಾಗಿ ಅವರಿಗೆ ಫೋನ್ ಮಾಡಲು ಅನುಮತಿ ಇಲ್ಲ ಎಂದು ಕುಟುಂಬದ ಸದಸ್ಯರಿಗೆ ಹೇಳುವ ಮೂಲಕ ಆರೋಪಿ ಮಹಿಳೆ ಕೊಲೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು. ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ಯೋಚಿಸುತ್ತಿದ್ದ ಸಂಬಂಧಿಕರೊಬ್ಬರು ಜಿಗ್ನೇಶ್ ಅವರ ವಿಳಾಸ ಮತ್ತು ಸಂಪರ್ಕದ ವಿವರಗಳನ್ನು ಕೇಳಿದಾಗ ಜಿಗ್ನೇಶ್ ಅವರ ಪತ್ನಿ ಪೃಥ್ವಿ ಅಲಿಯಾಸ್ ಭೂಮಿಬೆನ್ ವಿವರಗಳನ್ನು ನೀಡಲಿಲ್ಲ. ಇದರಿಂದ ಆಕೆಯ ಗಂಡನ ಕುಟುಂಬಸ್ಥರಿಗೆ ಅನುಮಾನ ಮೂಡಿತು.

ಇದನ್ನೂ ಓದಿ: ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರ ದಾಳಿ; ಓರ್ವ ಸಾವು, ಒಬ್ಬರ ಸ್ಥಿತಿ ಗಂಭೀರ

ಬಳಿಕ, ಜಿಗ್ನೇಶ್ ಅವರ ಸಹೋದರ ಜುಲೈ 26ರಂದು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದರು. ಇದರಿಂದ ಪೊಲೀಸರು ಪ್ರಕರಣವನ್ನು ಮರುಪರಿಶೀಲಿಸಿದರು. ತನಿಖೆಯ ಸಮಯದಲ್ಲಿ, ಅಧಿಕಾರಿಗಳು ಆರೋಪಿಗಳನ್ನು ಪ್ರಶ್ನಿಸಿ ಜಾಮ್‌ನಗರದ ಕೈಗಾರಿಕಾ ಶೆಡ್‌ನಲ್ಲಿ ಶೋಧ ನಡೆಸಿದರು. ಜುಲೈ 30ರಂದು, ಅವರು ಕಾರ್ಖಾನೆಯ ನೆಲದ ಕೆಳಗೆ ಅಗೆದು, ಸುಮಾರು 12 ಅಡಿ ಭೂಮಿಯ ಅಡಿಯಲ್ಲಿ ಹೂತುಹಾಕಿದ್ದ ಜಿಗ್ನೇಶ್ ಅವರ ಅಸ್ಥಿಪಂಜರದ ಅವಶೇಷಗಳನ್ನು ಹೊರತೆಗೆದರು.

ಆಳವಾದ ಗುಂಡಿಯೊಳಗೆ ಆಕೆ ಗಂಡನ ಶವವನ್ನು ಹೂತುಹಾಕಿ, ಮಣ್ಣಿನಿಂದ ಮುಚ್ಚಿ, ನಂತರ ಸುಮಾರು ಒಂದು ಅಡಿ ದಪ್ಪವಿರುವ ಕಾಂಕ್ರೀಟ್ ಪದರದಿಂದ ಸೀಲ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವಶೇಷಗಳನ್ನು ಹೊರತೆಗೆಯುವ ಮೊದಲು ಕಾಂಕ್ರೀಟ್ ಅನ್ನು ಒಡೆಯಲು ವಿದ್ಯುತ್ ಉಪಕರಣಗಳನ್ನು ಬಳಸಲಾಯಿತು.

ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ಕ್ರೂರತೆ; ಅಂಕಿತ್ ಶರ್ಮಾ ಕೊಲೆ ಪ್ರಕರಣದಲ್ಲಿ ಆಪ್ ನಾಯಕ ತಾಹಿರ್ ಹುಸೇನ್​ಗೆ ಜೀವಾವಧಿ ಶಿಕ್ಷೆ

ಪ್ರೇಮ ಕತೆ ಬಯಲು:

ಜಿಗ್ನೇಶ್ ಅವರ ಹೆಂಡತಿ ಪೃಥ್ವಿ ತಮ್ಮ ಮಾಜಿ ಪ್ರೇಮಿ ನೀಲೇಶ್ ಕಚ್ಚಾತಿಯಾ ಅವರೊಂದಿಗೆ ಸೇರಿಕೊಂಡು ಕೊಲೆಗೆ ಸಂಚು ರೂಪಿಸಿದ್ದರು. ಅವರಿಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ. ನಿಲೇಶ್ ತಮ್ಮ ಸ್ನೇಹಿತ ಬಲ್ವೀರ್ ವರ್ಮಾ ಅವರೊಂದಿಗೆ ಸೇರಿಕೊಂಡು, 2024ರ ಮೇ 31ರ ರಾತ್ರಿ ಎಣ್ಣೆ ಪಾರ್ಟಿ ನೆಪದಲ್ಲಿ ಜಿಗ್ನೇಶ್ ಅವರನ್ನು ಶೆಡ್‌ಗೆ ಕರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ಜಿಗ್ನೇಶ್ ಸೈನೈಡ್ ಬೆರೆಸಿದ ಮದ್ಯವನ್ನು ಕುಡಿದು ಮೃತಪಟ್ಟ ನಂತರ, ಅವರು ಸುಮಾರು 12 ಅಡಿ ಆಳದ ಗುಂಡಿಯನ್ನು ಅಗೆದು ಶವವನ್ನು ಹೂತುಹಾಕಿ, ಮಣ್ಣಿನಿಂದ ಮುಚ್ಚಿ ನಂತರ ಆ ಸ್ಥಳವನ್ನು ಸುಮಾರು ಒಂದು ಅಡಿ ದಪ್ಪದ ಕಾಂಕ್ರೀಟ್ ಹಾಕಿ ಮುಚ್ಚಿದ್ದಾರೆ. ಆ ಜಾಗವನ್ನು ಅಗೆಯುವ ಮೊದಲು ಆರೋಪಿಗಳ ಸಮ್ಮುಖದಲ್ಲಿ ಅಪರಾಧದ ಸ್ಥಳವನ್ನು ಮರುಸೃಷ್ಟಿಸಲಾಯಿತು” ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಭಾ ಪಿಟಿಐಗೆ ತಿಳಿಸಿದ್ದಾರೆ.

ಮೃತನ ಗುರುತನ್ನು ಖಚಿತಪಡಿಸಲು ಅವಶೇಷಗಳನ್ನು ವಿಧಿವಿಜ್ಞಾನ ತಜ್ಞರಿಗೆ ಹಸ್ತಾಂತರಿಸಲಾಗಿದೆ ಮತ್ತು ಮೃತನ ಪತ್ನಿ, ಆಕೆಯ ಪ್ರೇಮಿ ಹಾಗೂ ಅವರ ಸಹಚರರಲ್ಲಿ ಒಬ್ಬರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಮೂವರು ಆರೋಪಿಗಳ ವಿರುದ್ಧ ಕೊಲೆ, ಸಾಕ್ಷ್ಯ ನಾಶ ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us