
ಮಥುರಾ: 17 ವರ್ಷದ ಯುವತಿಯನ್ನು ಕಟ್ಟಡದ ಎರಡನೇ ಮಹಡಿಯಿಂದ ಮೂವರು ಸೇರಿ ಕೆಳಗೆ ಎಸೆದಿದ್ದು, ಆಕೆಯೀಗ ಮಥುರಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಈ ಮೂವರು ವ್ಯಕ್ತಿಗಳು ಏಕಾಏಕಿ ಮನೆಯಲ್ಲಿ ನುಗ್ಗಿ, ಯುವತಿಯನ್ನು ಕೆಳಕ್ಕೆ ಎಸೆದಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಘಟನೆ ಸೋಮವಾರ ರಾತ್ರಿ ಉತ್ತರ ಪ್ರದೇಶದ ಮಥುರಾದ ಚಾತಾ ಪ್ರದೇಶದಲ್ಲಿ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಯನ್ನು 2ನೇ ಫ್ಲೋರ್ನಿಂದ ಕೆಳಕ್ಕೆ ಎಸೆದ ಬಗ್ಗೆ ಆಕೆಯ ಸಹೋದರ ನೀಡಿದ್ದರು. ಅದರ ಅನ್ವಯ ಇಬ್ಬರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಠಾಣೆ ಪೊಲೀಸರು ತಿಳಿಸಿದ್ದಾರೆ. ಹಾಗೇ, ಯುವತಿಯ ಸಹೋದರ ದಿನೇಶ್ ಸಿಂಗ್ ಮಾಧ್ಯಮಗಳೊಟ್ಟಿಗೂ ಮಾತನಾಡಿದ್ದು, ಈ ಮೂವರೂ ಆರೋಪಿಗಳು ಕಳೆದ ಒಂದು ವರ್ಷದಿಂದಲೂ ನನ್ನ ಸಹೋದರಿಗೆ ಹಿಂಸೆ ನೀಡುತ್ತಿದ್ದರು ಎಂದು ಹೇಳಿದ್ದಾರೆ.
ಸೋಮವಾರ ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ನನ್ನ ತಂದೆಗೆ ಒಂದು ಅಪರಿಚಿತ ನಂಬರ್ನಿಂದ ಕರೆಬಂತು. ಆ ಕಡೆ ಇದ್ದವರು ನನ್ನ ತಂದೆಯ ಬಳಿಯೇ ಮಾತನಾಡುತ್ತಿರುವವರು ಯಾರು ಮತ್ತು ಇದು ಯಾವ ಪ್ರದೇಶ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಅಪ್ಪ, ನೀವ್ಯಾರು, ಎಲ್ಲಿಂದ ಮಾತನಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಅದಾದ ಕೆಲವೇ ಕ್ಷಣಗಳಲ್ಲಿ ಮೂವರು ಬೈಕ್ನಲ್ಲಿ ಬಂದು, ಮನೆಯೊಳಗೆ ನುಗ್ಗಿದರು. ನಮ್ಮ ಕುಟುಂಬದ ಎಲ್ಲರನ್ನೂ ಥಳಿಸಿದರು. ನನ್ನ ತಾಯಿ-ತಂಗಿಗೂ ಹೊಡೆದರು ಎಂದು ದಿನೇಶ್ ಸಿಂಗ್ ಹೇಳಿದ್ದಾರೆ. ನೋಡನೋಡುತ್ತಿದ್ದಂತೆ ಇಬ್ಬರು ನನ್ನ ತಂಗಿಯನ್ನು ಮನೆಯಿಂದ ಎಳೆದುಕೊಂಡು ಹೋಗಿ, 2ನೇ ಫ್ಲೋರ್ನಿಂದ ತಳ್ಳಿದರು. ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಸ್ಪೈನಲ್ ಕಾರ್ಡ್ ಮುರಿದಿದೆ ಎಂದು ತಿಳಿಸಿದರು.
ಯುವತಿ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಕೆ ರಸ್ತೆಗೆ ಬೀಳುತ್ತಿದ್ದಂತೆ ಕೆಲವರು ಓಡಿ ಬಂದು ನೋಡಿಕೊಂಡು ಮತ್ತೆ ಅಲ್ಲಿಂದ ಹೋಗಿದ್ದಾರೆ. ಮತ್ತಿಬ್ಬರು ಆಕೆಯ ಸಹಾಯಕ್ಕೆ ಮುಂದಾಗಿದ್ದಾರೆ. ಈ ಸಿಸಿಟಿವಿ ಫೂಟೇಜ್ನ್ನು ಪೊಲೀಸರು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಮಥುರಾದ ಖಾಸಗಿ ಆಸ್ಪತ್ರೆಗೆ ಯುವತಿಯನ್ನು ದಾಖಲಿಸಲಾಗಿದ್ದು, ಸ್ಪೈನಲ್ ಕಾರ್ಡ್ ಸೇರಿ ದೇಹದ ಹಲವು ಭಾಗಗಳಲ್ಲಿ ಗಂಭೀರ ಗಾಯವಾಗಿದೆ. ಗಂಭೀರ ಸ್ಥಿತಿಯಲ್ಲಿದ್ದಾಳೆ ಎಂದು ಆಕೆಯ ತಂದೆ ಪ್ರೇಮ್ ಪಾಲ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಹೊತ್ತಿಕೊಂಡಿತು ದ್ವೇಷದ ಬೆಂಕಿ; ಪ್ರಶಾಂತ್ ಸಂಬರಗಿ ಫೋಟೋ ಸುಟ್ಟ ಸ್ಪರ್ಧಿಗಳು
(17 Year Old Girl Thrown Off Second Floor by three men in Uttar pradesh)
Published On - 12:36 pm, Wed, 23 June 21