West Bengal: ಶವ ಹೊತ್ತೊಯ್ಯುತ್ತಿದ್ದ ವಾಹನ ನಿಂತಿದ್ದ ಟ್ರಕ್​ಗೆ ಡಿಕ್ಕಿ; 18 ಮಂದಿ ಭೀಕರ ಸಾವು, ಐವರಿಗೆ ಗಾಯ

| Updated By: Lakshmi Hegde

Updated on: Nov 28, 2021 | 10:22 AM

ವಿಪರೀತ ಇಬ್ಬನಿ ಬೀಳುತ್ತಿದ್ದ ಕಾರಣ ಚಾಲಕನಿಗೆ ರಸ್ತೆ ಸರಿಯಾಗಿ ಕಾಣಲಿಲ್ಲ. ಹಾಗೇ ಆತ ತುಂಬ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

West Bengal: ಶವ ಹೊತ್ತೊಯ್ಯುತ್ತಿದ್ದ ವಾಹನ ನಿಂತಿದ್ದ ಟ್ರಕ್​ಗೆ ಡಿಕ್ಕಿ; 18 ಮಂದಿ ಭೀಕರ ಸಾವು, ಐವರಿಗೆ ಗಾಯ
ನಾದಿಯಾದಲ್ಲಿ ಟ್ರಕ್​ಗೆ ಡಿಕ್ಕಿಯಾದ ವಾಹನ
Follow us on

ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಶನಿವಾರ ಮಧ್ಯರಾತ್ರಿ ಭೀಕರ ಅಪಘಾತ ನಡೆದಿದೆ. ಈ ದುರಂತದಲ್ಲಿ 18 ಮಂದಿ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಮೃತದೇಹವನ್ನು ಹೊತ್ತೊಯ್ಯುತ್ತಿದ್ದ ಮೆಟಡಾರ್​ ವಾಹನದಲ್ಲಿ ಸುಮಾರು 20 ಜನರು ಉತ್ತರ 24 ಪರಗಣದ ಬಾಗ್ಡಾದಿಂದ ನವದ್ವೀಪದ ಸ್ಮಶಾನದ ಕಡೆಗೆ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. 

ಈ ಮೃತದೇಹವನ್ನು ಹೊತ್ತ ವಾಹನವು ರಸ್ತೆ ಬದಿಯಲ್ಲಿದ್ದ ಟ್ರಕ್​​ವೊಂದಕ್ಕೆ ಡಿಕ್ಕಿ ಹೊಡೆದಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆ ನಡೆದಿದ್ದು ಹಂಸಖಲಿ ಪೊಲೀಸ್​ ಠಾಣೆ ವ್ಯಾಪ್ತಿಯ ಫುಲ್ಬರಿ ಎಂಬಲ್ಲಿ. ವಿಪರೀತ ಇಬ್ಬನಿ ಬೀಳುತ್ತಿದ್ದ ಕಾರಣ ಚಾಲಕನಿಗೆ ರಸ್ತೆ ಸರಿಯಾಗಿ ಕಾಣಲಿಲ್ಲ. ಹಾಗೇ ಆತ ತುಂಬ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ. ಇದರಿಂದಾಗಿ ರಸ್ತೆ ಪಕ್ಕದಲ್ಲಿ ನಿಂತ ಟ್ರಕ್​ಗೆ ಹೋಗಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಾಗೇ, ಹೆಚ್ಚಿನ ತನಿಖೆಯನ್ನೂ ಕೈಗೆತ್ತಿಕೊಂಡಿದ್ದಾರೆ.

ಇನ್ನು ಮೆಟಡಾರ್​​ ವಾಹನದಲ್ಲಿ ಪ್ರಯಾಣಿಸುತ್ತಿದ್ದ 20 ಮಂದಿಯಲ್ಲಿ 18 ಜನರು ಸಾವನ್ನಪ್ಪಿದ್ದು ಅದರಲ್ಲಿ 10 ಪುರುಷರು, ಏಳು ಮಹಿಳೆಯರು ಮತ್ತು ಒಬ್ಬಳು ಆರುವರ್ಷದ ಬಾಲಕಿ ಇದ್ದಾಳೆ. ಇವರೆಲ್ಲ ಬಂಧು-ಬಳಗದವರೇ ಆಗಿದ್ದಾರೆ. ಬಾಗ್ಡಾದ ಬಳಿಯ ಪರ್ಮಧಾನ್​ ಎಂಬಲ್ಲಿಯ ನಿವಾಸಿಯಾಗಿದ್ದ ಶ್ರಬಣಿ ಮುಹುರಿ ಎಂಬ ವೃದ್ಧೆ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಗಾಗಿ ಇವರೆಲ್ಲರೂ ಹೊರಟಿದ್ದರು.

ಇದನ್ನೂ ಓದಿ: ನೆಲಮಂಗಲ: ಪರವಾನಗಿ ಪಡೆಯದೆ ಅಕ್ರಮ ಗ್ಯಾಸ್ ರೀಫಿಲಿಂಗ್ ಮಾಡುತ್ತಿದ್ದ ಮನೆ ಮೇಲೆ ಸಿಸಿಬಿ ದಾಳಿ; ಓರ್ವನ ಬಂಧನ

Published On - 9:52 am, Sun, 28 November 21