ರೈತ ಹೋರಾಟಕ್ಕಾಗಿ ಒಂದು ಬೆಳೆ ತ್ಯಾಗ ಮಾಡಲು ಸಿದ್ಧರಾಗಿ; ರೈತ ನಾಯಕ ರಾಕೇಶ್ ಟಿಕಾಯತ್ ಕರೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 19, 2021 | 3:40 PM

ರೈತರು ತಮ್ಮ ಟ್ರ್ಯಾಕ್ಟರ್​ಗಳನ್ನು ಸರ್ವ ಸನ್ನದ್ಧಗೊಳಿಸಿರಬೇಕು. ರೈತ ಸಂಘಟನೆಗಳ ನಾಯಕರು ಯಾವುದೇ ಕ್ಷಣದಲ್ಲಿ ಕರೆ ಕೊಟ್ಟರೂ ಸಹ ದೆಹಲಿಯತ್ತ ಧಾವಿಸಲು ಸಿದ್ಧರಿರಬೇಕು ಎಂದು ರಾಕೆಶ್ ಟಿಕಾಯತ್ ಕರೆ ಕೊಟ್ಟಿದ್ದಾರೆ.

ರೈತ ಹೋರಾಟಕ್ಕಾಗಿ ಒಂದು ಬೆಳೆ ತ್ಯಾಗ ಮಾಡಲು ಸಿದ್ಧರಾಗಿ; ರೈತ ನಾಯಕ ರಾಕೇಶ್ ಟಿಕಾಯತ್ ಕರೆ
ರಾಕೇಶ್ ಟಿಕಾಯತ್ (ಸಂಗ್ರಹ ಚಿತ್ರ)
Follow us on

ದೆಹಲಿ: ರೈತರು ಪ್ರತಿಭಟನೆಯನ್ನು ಮುಂದುವರೆಸಲು ಒಂದು ಬೆಳೆ ತ್ಯಾಗ ಮಾಡಲು ಸಿದ್ಧರಾಗಿ ಎಂದು ರೈತ ನಾಯಕ ರಾಕೇಶ್ ಟಿಕಾಯತ್ (Rakesh Tikait) ಕರೆ ನೀಡಿದ್ದಾರೆ. ಹರ್ಯಾಣದ ಹಿಸಾರ್ ಪ್ರಾಂತ್ಯದ ಖರ್ಕ್ ಫೂನಿಯಾ ಗ್ರಾಮದಲ್ಲಿ ಆಯೋಜಿಸಿದ್ದ ಕಿಸಾನ್ ಮಹಾ ಪಂಚಾಯತ್​ನಲ್ಲಿ (Kisan Maha Panchayath)  ರೈತರು ತಮ್ಮ ಬೆಳೆಗಳ ಕೊಯ್ಲಿನ ಸಲುವಾಗಿ ಮರಳಿ ತಮ್ಮ ಊರುಗಳಿಗೆ ಹೋಗುತ್ತಾರೆ. ಹೀಗಾಗಿ, ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟ ಕೊನೆಗೊಳ್ಳುತ್ತದೆ ಎಂದು ಸರ್ಕಾರ ಬಿಂಬಿಸುತ್ತಿದೆ. ಆದರೆ, ಸರ್ಕಾರದ ಈ ಆಸೆಯನ್ನು ಈಡೇರಿಸದೇ, ಪ್ರತಿಭಟನೆಯನ್ನು ಮುಂದುವರೆಸಲು ರೈತರು ಒಂದು ಬೆಳೆಯನ್ನು ತ್ಯಾಗ ಮಾಡುವ ಪರಿಸ್ಥಿತಿ ಬಂದರೂ ಸಿದ್ಧವಿರಬೇಕು ಎಂದು ಕರೆ ಕೊಟ್ಟಿದ್ದಾರೆ.

ಅಪಾರ ಪ್ರಮಾಣದ ರೈತ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರು ತಮ್ಮ ಟ್ರ್ಯಾಕ್ಟರ್​ಗಳನ್ನು ಸರ್ವ ಸನ್ನದ್ಧಗೊಳಿಸಿರಬೇಕು. ರೈತ ಸಂಘಟನೆಗಳ ನಾಯಕರು ಯಾವುದೇ ಕ್ಷಣದಲ್ಲಿ ಕರೆ ಕೊಟ್ಟರೂ ಸಹ ದೆಹಲಿಯತ್ತ ಧಾವಿಸಲು ಸಿದ್ಧರಿರಬೇಕು ಎಂದು ಅವರು ಹೇಳಿದ್ದಾರೆ. ಹಲವು ತಿರುವುಗಳನ್ನು ಕಂಡ ಹೋರಾಟವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವುದಾಗಿ ಹೇಳಿರುವ ಅವರು, ಕೃಷಿ ಉಪಕರಣಗಳನ್ನು ಬಳಸಿ ರೈತ ಕ್ರಾಂತಿ ಮಾಡಬೇಕಾಗಿದೆ ಎಂದು ಸಹ ತಮ್ಮ ಹೋರಾಟದ ಮುಂದಿನ ನಡೆಗಳ ಸುಳುಹು ನೀಡಿದ್ದಾರೆ.

70 ವರ್ಷಗಳಿಂದ ಕೃಷಿ ಮಾಡುತ್ತಿದ್ದು, ಈ ಬಾರಿ ಕೃಷಿ ಮಾಡದಿದ್ದರೆ ಯಾವುದೇ ತೊಂದರೆಯಾಗದು. ಕೃಷಿ ಕಾಯ್ದೆ ವಿರೋಧಿಸಿ ಒಂದು ಸಲದ ಕೃಷಿ ಚಟುವಟಿಕೆಗಲನ್ನು ತ್ಯಾಗ ಮಾಡಬೇಕಾಗಿ ಬರಬಹುದು ಎಂದು ಅವರು ಹೇಳಿಕೆ ನೀಡಿದ್ದಾರೆ.

ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ 90ನೇ ದಿನ ಸಮಿಪಿಸುತ್ತಿದೆ. ಇದೇ ಸಂದರ್ಭದಲ್ಲಿ ರೈತ ಹೋರಾಟದ ಆಯಾಮಗಳನ್ನು ಬದಲಿಸಲು ಸಹ ರೈತ ಮುಖಂಡರು ಚಿಂತಿಸಿದ್ದು, ಕೇವಲ ದೆಹಲಿಯಲ್ಲಿ ಮಾತ್ರ ಪ್ರತಿಭಟನೆ ನಡೆಸಿದರೆ ಸಾಲದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ದೆಹಲಿಯಿಂದ ಚದುರಿ ದೇಶದ ವಿವಿಧ ನಗರಗಳಲ್ಲಿ ಪ್ರತಿಭಟನೆ ನಡೆಸಲು ಚಿಂತಿಸಿದ್ದಾಗಿ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.

ದೇಶದ ಇತರೆಡೆಯೂ ನಡೆಯಲಿದೆ ರೈತ ಪಂಚಾಯತಿ
ದೇಶದ ಇತರೆಡೆಯೂ ಕಿಸಾನ್ ಮಹಾ ಪಂಚಾಯತ್ ನಡೆಸುವುದಾಗಿ ರಾಕೇಶ್ ಟಿಕಾಯತ್ ಘೋಷಿಸಿದ್ದಾರೆ. ತಮಿಳುನಾಡು, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಗುಜರಾತ್​ಗಳಲ್ಲಿ ಕಿಸಾನ್ ಮಹಾ ಪಂಚಾಯತ್ ನಡೆಯುವುದು ಬಹುತೇಕ ಖಾತ್ರಿಯಾಗಿದೆ. ಆದರೆ, ಎಂದು ಈ ಭಾಗಗಳಲ್ಲಿ ರೈತ ಪಂಚಾಯತ್​ಗಳು ಜರುಗಲಿವೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಅಲ್ಲದೇ, ದಕ್ಷಿಣ ಭಾರತದಲ್ಲಿ ತಮಿಳುನಾಡು, ಕೇರಳ ಹೊರತುಪಡಿಸಿ ಬೃಹತ್ ಪ್ರಮಾಣದಲ್ಲಿ ರೈತ ಹೋರಾಟವನ್ನು ಆರಂಭಿಸುವುದು ಸುಲಭದ ಕೆಲಸವಲ್ಲ. ಈಗಾಗಲೇ ರೈತ ಹೋರಾಟಕ್ಕೆ ವಿರುದ್ಧದ ಅಲೆಯೂ ದೇಶದಲ್ಲಿ ಬಲವಾಗಿ ಸೃಷ್ಟಿಯಾಗಿದೆ. ಗ್ರೇಟಾ ಥನ್​ಬರ್ಗ್ ಟೂಲ್​ಕಿಟ್ ಪ್ರಕರಣದಿಂದ ಆರಂಭವಾದ ರೈತ ಹೋರಾಟ ವಿರುದ್ಧದ ಅಲೆ ನಿಧಾನವಾಗಿ ತೀವ್ರವಾಗುತ್ತಿದೆ. ಹೀಗಾಗಿ, ಕಿಸಾನ್ ಮಹಾ ಪಂಚಾಯತ್ ಆಶಯಗಳನ್ನು ರೈತ ಮುಖಂಡರು ಹೇಗೆ ದೇಶವ್ಯಾಪಿ ತಲುಪಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಕೃಷಿ ಕಾಯ್ದೆ ವಿರೋಧಿಸಿ ಮೊದಲ ಕಿಸಾನ್ ಮಹಾ ಪಂಚಾಯತ್ ಹರ್ಯಾಣ ರಾಜ್ಯದ ಜಿಂದ್​ ಜಿಲ್ಲೆಯ ಖಂಡೇಲಾ ಗ್ರಾಮದಲ್ಲಿ ಫೆಬ್ರವರಿ 3ರಂದು ಖಾಪ್ ಪಂಚಾಯತ್ ಸಭೆ ನಡೆದಿತ್ತು. ಹರ್ಯಾಣದ ಎಲ್ಲಾ ಖಾಪ್ ಪಂಚಾಯತ್​​ಗಳಿಗೂ ಮಹಾಪಂಚಾಯತ್​ನಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿ್ತು. ರೈತರ ಹೋರಾಟದಲ್ಲಿ ಭಾಗಿಯಾಗಿರುವ ಚಳುವಳಿಗಾರರು ಈ ಮಹಾ ಪಂಚಾಯತ್​ನಲ್ಲಿ ಭಾಗವಹಿಸಿದ್ದರು.

ಅಂದು ನಡೆದಿದ್ದ ಮಹಾಪಂಚಾಯತ್​ನಲ್ಲಿ, ರೈತರ ಚಳುವಳಿಯನ್ನು ಯಾವ ರೀತಿ ಮುಂದುವರಿಸಬೇಕು ಎಂಬ ಬಗ್ಗೆ ಚರ್ಚಿ ನಡೆದಿತ್ತು. ಕೇಂದ್ರ ಸರ್ಕಾರಕ್ಕೆ ರೈತ ಚಳುವಳಿ ಮತ್ತಷ್ಟು ಸಂಘಟಿತವಾಗಿ ಮುಂದುವರಿಯಲಿದೆ ಎಂಬ ಸೂಚನೆಯನ್ನು ಕೂಡ ಅಂದಿನ ಸಭೆ ನೀಡಿತ್ತು. ಜಿಂದ್​ನಲ್ಲಿ ನಡೆಯುವ ಮಹಾಪಂಚಾಯತ್​​ನಲ್ಲಿ ನಾನೂ ಭಾಗವಹಿಸಲಿದ್ದೇನೆ ಎಂದು ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ರೈತರ ಪ್ರತಿಭಟನೆ ಎಫೆಕ್ಟ್​: ಜಿಯೋ ಚಂದಾದಾರರ ಸಂಖ್ಯೆಯಲ್ಲಿ ತೀವ್ರ ಕುಸಿತ

ಇದನ್ನೂ ಓದಿ: Greta Thunberg Toolkit Case: ದಿಶಾ ರವಿ ಬಂಧನ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ; ಪೊಲೀಸರಿಗೆ ಗಂಭೀರ ಪತ್ರ ಬರೆದ ಮಹಿಳಾ ಆಯೋಗ