Toolkit Case: ದಿಶಾ ರವಿ ಪ್ರಕರಣದ ಖಾಸಗಿ ಚಾಟ್ ಸೋರಿಕೆ ಮಾಡದಂತೆ ಮಾಧ್ಯಮಗಳಿಗೆ ದೆಹಲಿ ಹೈಕೋರ್ಟ್ ನೋಟೀಸ್
Disha Ravi: ಖಾಸಗಿ ಚಾಟ್ (ವಾಟ್ಸಾಪ್ ಸಂದೇಶಗಳು) ಮಾಧ್ಯಮಕ್ಕೆ ಸೋರಿಕೆಯಾಗದಂತೆ ತಡೆಯಬೇಕು ಎಂದು 22 ವರ್ಷ ವಯಸ್ಸಿನ ದಿಶಾ ರವಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ದೆಹಲಿ: ಗ್ರೇಟಾ ಥನ್ಬರ್ಗ್ ಟೂಲ್ಕಿಟ್ ಪ್ರಕರಣದಲ್ಲಿ ಬಂಧಿತ ಆರೋಪಿ, ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ದಿಶಾ ರವಿ ತನಿಖೆ ಹಾಗೂ FIR ಕುರಿತಾದ ಯಾವುದೇ ಖಾಸಗಿ ವಿಚಾರಗಳನ್ನು ಮಾಧ್ಯಮ ಸೋರಿಕೆ ಮಾಡಬಾರದು ಎಂದು ದೆಹಲಿ ಹೈಕೋರ್ಟ್ ಇಂದು (ಫೆ.19) ನೋಟೀಸ್ ನೀಡಿದೆ. ಟೂಲ್ಕಿಟ್ ಪ್ರಕರಣದ ಖಾಸಗಿ ಮಾಹಿತಿಗಳು ಮಾಧ್ಯಮಕ್ಕೆ ಸೋರಿಕೆಯಾಗಬಾರದು ಎಂದು ಕೋರ್ಟ್, ನ್ಯೂಸ್ ಬ್ರಾಡ್ಕಾಸ್ಟಿಂಗ್ ಅಥಾರಿಟಿ (NBSA)ಗೆ ತಿಳಿಸಿದೆ.
ಟೂಲ್ಕಿಟ್ ಸಂಬಂಧ, ಖಾಸಗಿ ಚಾಟ್ (ವಾಟ್ಸಾಪ್ ಸಂದೇಶಗಳು) ಮಾಧ್ಯಮಕ್ಕೆ ಸೋರಿಕೆಯಾಗದಂತೆ ತಡೆಯಬೇಕು ಎಂದು 22 ವರ್ಷ ವಯಸ್ಸಿನ ದಿಶಾ ರವಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ದಿಶಾ ರವಿ ಹಾಗೂ ಮೂರನೇ ವ್ಯಕ್ತಿಯ ಜತೆ ನಡೆಸಿದ ಸಂವಹನ ಸಂದೇಶಗಳನ್ನು ಸಾಮಾಜಿಕವಾಗಿ ಹರಿಯಬಿಡಬಾರದು ಎಂದು ಕೋರಿದ್ದರು.
ದಿಶಾ ರವಿ ತಾವು ಸಲ್ಲಿಸಿದ್ದ ಅರ್ಜಿಯಲ್ಲಿ NBSA ಹಾಗೂ ಕೆಲವು ಖಾಸಗಿ ಮಾಧ್ಯಮಗಳನ್ನು ಪ್ರಸ್ತಾಪಿಸಿದ್ದರು. ಇಂದು ಮಾಧ್ಯಮಗಳ ಪರವಾಗಿ ವಾದಿಸಲು ಯಾವುದೇ ನ್ಯಾಯವಾದಿಗಳು ಇಲ್ಲದ್ದರಿಂದ ಕೋರ್ಟ್ ನೋಟೀಸು ನೀಡಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ವಿಚಾರಣೆಯ ವೇಳೆ ದೆಹಲಿ ಪೊಲೀಸರ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದಿಶಾ ರವಿ ಹಾಗೂ ಮೂರನೇ ವ್ಯಕ್ತಿಯ ನಡುವಿನ ಯಾವುದೇ ಸಂದೇಶಗಳು, ಖಾಸಗಿ ಚಾಟ್ಗಳು ಪೊಲೀಸರಿಂದ ಸೋರಿಕೆಯಾಗಿಲ್ಲ ಎಂದು ತಿಳಿಸಿದರು. ಈ ಕುರಿತು ಅಫಿಡವಿಟ್ ನೀಡಲು ಸಿದ್ಧರಿದ್ದೇವೆ ಎಂದೂ ಅವರು ಹೇಳಿದರು.
ದಿಶಾ ರವಿ ಪರ ವಾದಿಸಿದ ಹಿರಿಯ ವಕೀಲ ಅಮಿತ್ ಸಿಬಲ್, ಪ್ರಕರಣಕ್ಕೆ ಸಂಬಂಧಿಸಿದ ಖಾಸಗಿ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಿದ್ದು ದೆಹಲಿ ಪೊಲೀಸರು ಎಂದು ಪುನರುಚ್ಚರಿಸಿದರು. ‘ಅವರು ಏನು ಬೇಕಾದರೂ ಹೇಳಬಹುದು. ಆದರೆ, ವಾಸ್ತವ ಮಾತನಾಡುತ್ತದೆ. ದಿಶಾ ರವಿ 13ನೇ ತಾರೀಖಿನಂದು ಬಂಧನಕ್ಕೊಳಗಾದರು. ಆ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಗಳನ್ನು ಪೊಲೀಸರು ವಶಪಡಿಸಿಕೊಂಡರು. ಮಾಧ್ಯಮಗಳೇ ಹೇಳಿದಂತೆ, ಅವರು ಮಾಹಿತಿಗಳನ್ನು ಪೊಲೀಸರಿಂದ ವಶಪಡಿಸಿಕೊಂಡಿದ್ದಾರೆ’ ಎಂದು ಹೇಳಿದರು.
ದಿಶಾ ರವಿ ಸಂಬಂಧಪಟ್ಟ ಯಾವುದೇ ವಿಚಾರಗಳು ಹಂಚಲ್ಪಡಬಾರದು ಎಂದು ಸಿಬಲ್ ವಾದ ಮಾಡಿದ್ದಾರೆ. ಪ್ರಕರಣದ ಯಾವುದೇ ಖಾಸಗಿ ದಾಖಲೆಗಳನ್ನು ಪೊಲೀಸರು ಮಾಧ್ಯಮಗಳಿಗೆ ಹಂಚಿಕೆ ಮಾಡಿಲ್ಲ ಎಂದು ಅಫಿಡವಿಟ್ ನೀಡುವಂತೆಯೂ ಕೋರ್ಟ್ ತಿಳಿಸಿದೆ. NBSA, ಟೈಮ್ಸ್ ನೌ ಹಾಗೂ ನ್ಯೂಸ್ 18 ಸುದ್ದಿವಾಹಿನಿಗಳಿಗೆ ಕೋರ್ಟ್ ನೊಟೀಸ್ ಜಾರಿ ಮಾಡಿದೆ ಎಂದು ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡುವ ‘ಲೈವ್ ಲಾ’ ಜಾಲತಾಣ ಹೇಳಿದೆ.
ರೈತರ ಹೋರಾಟಕ್ಕೆ ಸಂಬಂಧಿಸಿದ ಟೂಲ್ಕಿಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದಿಶಾ ರವಿ, ಪ್ರಕರಣದ ತನಿಖೆಯ ದಾಖಲೆಗಳನ್ನು ದೆಹಲಿ ಪೊಲೀಸರು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ತಡೆಯಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಖಾಸಗಿ ಚಾಟ್ ಅಥವಾ ಸಂಭಾಷಣೆಗಳನ್ನು ಮೂರನೇ ವ್ಯಕ್ತಿಗೆ ಸೋರಿಕೆ ಮಾಡದಂತೆ ಪೊಲೀಸರಿಗೆ ಸೂಚನೆ ನೀಡಬೇಕು ಎಂದು ದಿಶಾ ಹೈಕೋರ್ಟ್ಗೆ ಮನವಿ ಮಾಡಿದ್ದರು. ಅದೇ ವೇಳೆ ತನ್ನ ಖಾಸಗಿ ಚಾಟ್ಗಳನ್ನು ಪ್ರಕಟ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು ಎಂದು ದಿಶಾ ಒತ್ತಾಯಿಸಿದ್ದರು.
ಫೆಬ್ರವರಿ 3ರಂದು ಸ್ವೀಡನ್ನ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ರೈತರ ಹೋರಾಟಕ್ಕೆ ಸಂಬಂಧಿಸಿದ ಟೂಲ್ಕಿಟ್ನ್ನು ಟ್ವೀಟ್ ಮಾಡಿದ್ದರು. ರೈತರ ಪ್ರತಿಭಟನೆ, ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ನಡೆದ ಅಹಿತಕರ ಘಟನೆಗಳು ಪೂರ್ವ ಯೋಜಿತವಾಗಿದ್ದು, ಅದಕ್ಕಾಗಿ ಟೂಲ್ಕಿಟ್ನಲ್ಲಿ ಯೋಜನೆ ರೂಪುಗೊಂಡಿತ್ತು ಎಂಬುದು ಆರೋಪವಾಗಿದೆ.
ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ | Sedition Case- ದಿಶಾ ರವಿ ಕೇಸ್ನ್ನು ಬೇರೆ ತರಹ ನೋಡಲು ಸಾಧ್ಯವೇ?
Fact Check: ಆಕೆಯ ಹೆಸರು ದಿಶಾ ರವಿ, ದಿಶಾ ರವಿ ಜೋಸೆಫ್ ಅಲ್ಲ
Published On - 3:02 pm, Fri, 19 February 21