ಸುದ್ದಿ ವಿಶ್ಲೇಷಣೆ | Sedition Case- ದಿಶಾ ರವಿ ಕೇಸ್ನ್ನು ಬೇರೆ ತರಹ ನೋಡಲು ಸಾಧ್ಯವೇ?
ಬೆಂಗಳೂರಿನ ದಿಶಾ ರವಿ ಈಗ sedition case ಎದುರಿಸುತ್ತಿದ್ದಾರೆ. ಯುವಕ ಯುವತಿಯರ ವಿರುದ್ಧ sedition case ಹಾಕಿ ನರೇಂದ್ರ ಮೋದಿ ಸರಕಾರ ಸ್ವಾತಂತ್ರವನ್ನು ಕಸಿಯಲು ಹೊರಟಿದೆ ಎಂದು civil society ಹೇಳುತ್ತಿದೆ. ಇದರ ಸತ್ಯಾಸತ್ಯತೆ ಏನು?
ಸುಮಾರು ಒಂದುವರೆ ವರ್ಷದ ಹಿಂದಿನ ಮಾತು: ದೇಶಾದ್ಯಂತ ಸಿಎಎ ವಿರೋಧಿ ಹೋರಾಟ (Anti-CAA Agitation) ತಾರಕಕ್ಕೇರಿತ್ತು. ಆ ವೇಳೆಯಲ್ಲಿ ಹೈದರಾಬಾದ್ನ ಅಸಾದುದ್ದೀನ್ ಒವೈಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿದ್ದ ಧರಣಿ ನಿರತ ಜನರನ್ನು ಉದ್ದೇಶಿಸಿ ಮಾತನಾಡಲು ಬಂದಿದ್ದರು. ಅದೇ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಪದವಿ ಶಿಕ್ಷಣ ವಿದ್ಯಾರ್ಥಿ, ಅಮೂಲ್ಯ ಲಿಯೊನಾ ನೊರೊನ್ಹಾ ಪಾಕಿಸ್ತಾನ್ ಜಿಂದಾಬಾದ್ ಎಂದಳು. ಪೊಲೀಸರು ಅವಳನ್ನು ಬಂಧಿಸಿದರು. ಅವಳು ನಾಲ್ಕು ತಿಂಗಳು ಜೈಲಿನಲ್ಲಿಯೇ ಕಾಲ ಕಳೆಯಬೇಕಾಯಿತು. ಆಮೇಲೆ, ಕಷ್ಟಪಟ್ಟು ಜಾಮೀನು ಪಡೆದು ಹೊರಬಂದಳು. ಆಮೇಲೆ ಅವಳ ಸುದ್ದಿಯಿಲ್ಲ. ಈಗ ನಡೆಯುತ್ತಿರುವ ರೈತ ಚಳುವಳಿಗೆ ಬೆಂಬಲ ಸೂಚಿಸಿ ಪ್ರಾರಂಭವಾದ ಹೋರಾಟಕ್ಕೆ ರಿಹಾನ್ನಾ ಮತ್ತು ಗ್ರೇಟಾ ಥನ್ಬರ್ಗ ಬೆಂಬಲ ಸೂಚಿಸಿ ಟ್ವೀಟ್ ಮಾಡಿದಾಗ ಇಡೀ ರೈತ ಚಳುವಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಸಿಕ್ಕಿತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸಲು ಯಾವ ಅಂತರಾಷ್ಟ್ರೀಯ ಮಟ್ಟದ ಕೊರತೆ ಇತ್ತೋ ಅವೆಲ್ಲ ಸಿಕ್ಕಿತು ಎಂದುಕೊಂಡರು ಅವರ ವಿರೋಧಿಗಳು. ಇದೇ ಹೊತ್ತಿನಲ್ಲಿ ಗ್ರೇಟಾ ಥನ್ಬರ್ಗ ಜೊತೆ ಸಂಪರ್ಕ ಸಾಧಿಸಿ ಅವಳಿಗೆ ಈ ರೈತ ಚಳುವಳಿ ಬಗ್ಗೆ ಮಾಹಿತಿ ನೀಡಿದ್ದವಳು ಬೆಂಗಳೂರಿನ ದಿಶಾ ರವಿ. ಅವಳು ಖಲಿಸ್ತಾನ್ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಸಾಧಿಸಿ ಅವರ ಜೊತೆ ಮಾತುಕತೆ ನಡೆಸಿದ್ದಳು ಮತ್ತು ದೇಶವಿರೋಧಿ ಕೆಲಸಕ್ಕೆ (Sedition) ಕೈ ಹಾಕಿದ್ದಳು ಎಂಬ ಆರೋಪದ ಮೇಲೆ ದೆಹಲಿ ಪೊಲೀಸರು ಅವಳನ್ನು ಬಂಧಿಸಿ ಕರೆದುಕೊಂಡು ಹೋದರು.
ಸಾಮ್ಯತೆ ಹೇಗೆ? ಈ ಎರಡೂ ಘಟನೆಯಲ್ಲೂ ಮತ್ತೂ ಅದಕ್ಕೆ ಸರಕಾರ ಕೊಟ್ಟ ಪ್ರತಿಕ್ರಿಯೆಯಲ್ಲೂ ಸಾಮ್ಯಗಳು ಕಾಣುತ್ತಿವೆ: ಹೋರಾಟದಲ್ಲಿ ಭಾಗವಹಿಸಿ ಅಧಿಕಾರಶಾಹಿಯ ವಿರುದ್ಧ ದನಿಯೆತ್ತಲು ಯುವಕ ಯುವತಿಯರು ಬರುತ್ತೀರೋದು. ಹೀಗೆ ಬಂದವರು ಅತೀ ಉತ್ಸಾಹದಲ್ಲಿ ಏನೇನೋ ಅವಘಡ ಮಾಡೋದು, ಆಮೇಲೆ ಪೊಲೀಸರು ಅವರನ್ನು ದೇಶವಿರೋಧಿ ಆರೋಪದ ಮೇಲೆ ಬಂಧಿಸೋದು. ಮತ್ತು ಈ ರೀತಿಯ ಘಟನೆಗಳು ಘಟಿಸಿದಾಗ ನಾಗರಿಕ ಜಗತ್ತಿನ (Civil Society) ಆಯ್ದ ಕೆಲವರು ಇಂಥ ಬಂಧನದ ವಿರುದ್ಧ ಮಾತನಾಡಿ ಧರಣಿ ಮಾಡುವುದು ವಾಡಿಕೆಯಾಗುತ್ತ ಬಂದಿದೆ.
ಇಲ್ಲಿ ಇನ್ನೊಂದು ಮಾತನ್ನು ಹೇಳಲೇಬೇಕು. ಸಿಎಎ ವಿರೋಧಿ ಹೋರಾಟ ಇರಬಹುದು ಅಥವಾ ಕೇಂದ್ರ ಕೃಷಿ ಕಾಯ್ದೆ ಇರಬಹುದು. ಇವನ್ನು ವಿರೋಧಿಸುವವರು, ತೋಳದ ಕಥಾನಕಗಳನ್ನು (False Narrative) ಅಥವಾ ಅರ್ಧಸತ್ಯವನ್ನು ಹಂಚಲು ಪ್ರಯತ್ನಿಸಿದ್ದನ್ನು ನಾವಿಲ್ಲಿ ನೋಡಬಹುದು: ಸಿಎಎ ವಿಚಾರ ಬಂದರೆ ಭಾರತದ ಮುಸ್ಲಿಮರನ್ನು ದೇಶದಿಂದ ಓಡಿಸುವುದು ಗ್ಯಾರೆಂಟಿ; ಕೃಷಿ ಕಾಯಿದೆಗಳನ್ನು ಜಾರಿಗೆ ತಂದಿರುವ ಉದ್ದೇಶವೇ ಖಾಸಗೀ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವುದಾಗಿದೆ; ರೈತರ ಜಮೀನನ್ನು ಕಸಿದುಕೊಂಡು ಅವನ್ನು ಖಾಸಗೀ ಕಂಪೆನಿಗಳಿಗೆ ಮಾರಾಟ ಮಾಡುವ ಹುನ್ನಾರ ಇದರ ಹಿಂದೆ ಅಡಗಿದೆ ಇತ್ಯಾದಿ ಇತ್ಯಾದಿ.
ವೈಜ್ಞಾನಿಕ ಸತ್ಯಶೋಧ ಮತ್ತು ಪ್ರಮಾಣೀಕೃತವಿಲ್ಲದೇ ಮಾತನಾಡಬಾರದು ಅಲ್ವಾ!? ಇದರ ಸತ್ಯಾಸತ್ಯತೆಯನ್ನು ಹೇಗೆ ಪ್ರಮಾಣೀಕರಿಸುವುದು? ಉದಾಹರಣೆಗೆ, ಐಎಂಎಫ್ನಲ್ಲಿ ಕೆಲಸ ಮಾಡುತ್ತಿರುವ ಅಂತರಾಷ್ಟ್ರೀಯ ಆರ್ಥಿಕ ತಜ್ಞೆ, ಗೀತಾ ಗೋಪಿನಾಥ್ ಕೃಷಿ ಕಾಯ್ದೆ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ನೋಡಿದರೆ ಗೊತ್ತಾಗುತ್ತೆ, ಈ ಯುವಕ ಯುವತಿಯರು ಅರ್ಧಸತ್ಯವನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂಬುದು. ಸಮಾಜದಲ್ಲಿನ ನ್ಯೂನತೆ ಬಗ್ಗೆ ಮಾತನಾಡುವಾಗ ವೈಜ್ಞಾನಿಕ ಸತ್ಯ ಹುಡುಕುವ ಮತ್ತು ಪ್ರಮಾಣೀಕೃತವಿಲ್ಲದೇ ಯಾವ ವಿಚಾರವನ್ನೂ ಮಾತನಾಡಬಾರದು ಎಂದು ಹೇಳುವ ಇಂದಿನ ಯುವಕ ಯುವತಿಯರು ಸಾಮಾಜಿಕ-ರಾಜಕೀಯ ವಿಚಾರಗಳು ಬಂದಾಗ ಮಾತ್ರ ಯಾಕೆ ಅರ್ಧಸತ್ಯಕ್ಕೆ ಜೋತು ಬೀಳುತ್ತಾರೆ ಎಂಬುದು ಚಿದಂಬರ ರಹಸ್ಯ. ಅದು ಸಿಎಎ ವಿಚಾರ ಇರಬಹುದು ಅಥವಾ ರೈತ ಕಾಯ್ದೆ ವಿಚಾರವಿರಬಹುದು. ಬದಲಾವಣೆ ತರಲು ಹೋರಾಟಕ್ಕಿಳಿದಿರುವ ಈ ಯುವ ಜನಾಂಗವೇ ಇಂಥ ಅಸತ್ಯ ಕಥಾನಕಗಳನ್ನು (False Narrative) ಹಂಚಲು ಮುಂದಾಗುತ್ತಿರುವುದು ಇಂದಿನ ವ್ಯಂಗ್ಯ/ವೈರುಧ್ಯ ಕೂಡ ಹೌದು.
ಸರಕಾರದ ಪ್ರತಿಕ್ರಿಯೆ ಹೀಗಿರುತ್ತೆ ನೋಡಿ ಈಗ ಸರಕಾರದ ಪ್ರತಿಕ್ರಿಯೆಯನ್ನು ನೋಡೋಣ. ಅಧಿಕಾರದಲ್ಲಿರುವ ಸರಕಾರ ಕೂಡ ವಿಪರೀತವಾಗಿ ಪ್ರತಿಕ್ರಯಿಸುತ್ತಿರುವುದು ಆಶ್ಚರ್ಯ. ಯುವಕ/ಯುವತಿಯರ ಮೇಲೆ ಪೊಲೀಸರು ದೇಶದ್ರೋಹದ (Sedition) ಕೇಸನ್ನು ಹಾಕಿ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿರುವುದು ಸುಳ್ಳಲ್ಲ. ಎಂದಿನಂತೆ, ಉಳಿದ ಕೇಸ್ಗಳ ಜೊತೆಗೆ ಇವೂ ಸೇರಿಕೊಂಡು ವರ್ಷಾನುಗಟ್ಟಲೇ ನಿರ್ಣಯವಾಗದೇ, ಆರೋಪಿ ಯುವಕ-ಯುವತಿಯರಿಗೆ ಅನ್ಯಾಯವಾಗುತ್ತಿರುವುದನ್ನು ನಾವು ಕಣ್ಣಾರೆ ನೋಡಿದ್ದೇವೆ.
ದಿಶಾ ರವಿಯ ಕೇಸಿನಲ್ಲಿ ಯಾರು ಸರಿ, ಯಾರು ತಪ್ಪು? ಎಂದು ಹೇಳಲು ಮಾಹಿತಿಯ ಕೊರತೆ ಇದೆ. ಹಾಗಾಗಿ ಈಗ ಏನನ್ನೂ ಹೇಳಲು ಸಾಧ್ಯವಿಲ್ಲ. ಅವಳು ನಿಷೇಧಿತ ಖಲಿಸ್ತಾನಿ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದಳು ಎಂಬ ಪೊಲೀಸರ ವಾದವನ್ನು ನಾಗರಿಕ ಜಗತ್ತಿನ (Civil Society) ನಾಯಕರು ಒಪ್ಪಿಕೊಳ್ಳುತ್ತಿಲ್ಲ. ಒಂದೊಮ್ಮೆ ದಿಶಾ, ಖಲಿಸ್ತಾನಿ ಸಂಘಟನೆಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾಳೆ ಎಂದುಕೊಳ್ಳೋಣ. ಅವಳು ಆ ಅಪರಾಧದ ಮೂಲ ಕತೃ (Perpetrator) ಆಗಿರಲಿಕ್ಕಿಲ್ಲ. ಅಪರಾಧಕ್ಕೆ ಸಹಕಾರಿ (Abettor) ಆಗಿರಬಹುದು. ಇಂಥ ಸನ್ನಿವೇಶದಲ್ಲಿ ಇವಳನ್ನು ಬಂಧಿಸುವುದು ತಪ್ಪು ಎಂಬುದು ಅವರ ಪರವಾಗಿ ನಿಲ್ಲುವವರ ವಾದ. ನಿಜವಾದ ಸತ್ಯ ಹೊರ ಬರುವ ತನಕ, ಈ ಚರ್ಚೆ ನಡೆಯುತ್ತಲೇ ಇರುತ್ತದೆ.
ಜಮೀನಿಗೆ ಬೆಂಕಿ ಹಾಕಿ ಪರಿಸರ ಮಾಲಿನ್ಯ ಮಾಡುವುದನ್ನು ಪರಿಸರವಾದಿ ದಿಶಾ ರವಿ ಹೇಗೆ ಒಪ್ಪುತ್ತಾರೆ? ಆದರೆ ದಿಶಾ ರವಿಯ ಪರಿಸರ ಕಾಳಜಿ ಬಗ್ಗೆ ಒಂದು ಪ್ರಶ್ನೆ ಇಲ್ಲಿ ಏಳುವುದು ಸಹಜ. ಸರಕಾರ ತಂದಿದ್ದ ಮೂಲ ಕೃಷಿ ಕಾಯ್ದೆಯಲ್ಲಿ, ಭತ್ತದ ಕೂಳೆ ಸುಟ್ಟರೆ ದಂಡ ಹಾಕುವ ಪ್ರಸ್ತಾಪವಿತ್ತು. ಚಳುವಳಿ ನಿರತ ಪಂಜಾಬ್ ಮತ್ತು ಹರ್ಯಾಣದ ರೈತರು ಸರಕಾರದ ಜೊತೆ ನಡೆಸಿದ ಮಾತುಕತೆಯಲ್ಲಿ, ಈ ವಿಚಾರ ಪ್ರಸ್ತಾಪವಾಗಿ ಸರಕಾರ ಕೊನೆಗೆ ಈ ವಿಚಾರವನ್ನು ಕೈಬಿಡಲು ಒಪ್ಪಿಕೊಂಡಿದೆ. ಅಂದರೆ, ಚಳಿಗಾಲದ ಸಂದರ್ಭದಲ್ಲಿ ಪಂಜಾಬ್ ಮತ್ತು ಹರ್ಯಾಣದ ರೈತರು ತಮ್ಮೂರಲ್ಲಿರುವ ಲಕ್ಷಾಂತರ ಎಕರೆ ಜಮೀನಿಗೆ ಬೆಂಕಿ ಹಾಕಿ ದೆಹಲಿಯಲ್ಲಿ ಪರಿಸರ ಮಾಲಿನ್ಯ ಮಾಡುವ ಕೃತ್ಯವನ್ನು ಪರಿಸರ ಹೋರಾಟಗಾರ್ತಿ ದಿಶಾ ರವಿ ಯಾಕೆ ಗಮನಕ್ಕೆ ತೆಗೆದುಕೊಳ್ಳಲೇ ಇಲ್ಲ? ಹಾಗೇನೇ, ಅತಿಯಾಗಿ ನೀರು ಕುಡಿಯುವ ಭತ್ತ ಬೆಳೆಯುವ ರೈತರ ಆಯ್ಕೆಯನ್ನು, ಬೇರೆ ಸಂದರ್ಭದಲ್ಲಿ ಪ್ರಶ್ನಿಸುವ ಪರಿಸರ ಕಾರ್ಯಕರ್ತರು ಈಗ ಯಾಕೆ ಈ ಪ್ರಶ್ನೆ ಕೇಳುತ್ತಿಲ್ಲ. ಓರ್ವ ಪರಿಸರ ಕಾರ್ಯಕರ್ತೆಯಾಗಿ, ದಿಶಾ ಇದನ್ನು ವಿರೋಧಿಸದೇ, ಸಾರಾಸಗಟಾಗಿ ಬೇರೆಯದೇ ಕಥಾನಕವನ್ನು ಹೆಣೆಯಲು ಹೊರಟಳೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.
ದೇಶ ವಿರೋಧಿ ಕೇಸುಗಳು ನಾವು ದೇಶ ವಿರೋಧಿ ಕೇಸು ಹಾಕುವುದರಲ್ಲಿ ಮಹಾಶೂರರು. ಭಾರತದಲ್ಲಿನ ಅಪರಾಧಗಳ (Crime in India) ವರದಿ ಪ್ರಕಾರ 2016 ರಿಂದ 2019 ರ ಒಳಗೆ ಯುಎಪಿಎ ಮತ್ತು ದೇಶದ್ರೋಹ ಅರೋಪದ ಮೇಲೆ 55,870 ಜನರನ್ನು ಬಂಧಿಸಲಾಗಿತ್ತು ಮತ್ತು 48,422 ಜನರ ಮೇಲೆ ಕೇಸು ದಾಖಲಾಗಿತ್ತು. ಇವರಲ್ಲಿ 6511 ಆರೋಪಿಗಳಿಗೆ ಶಿಕ್ಷೆ ಆಗಿದ್ದು, 11,828 ಜನರನ್ನು ಖುಲಾಸೆಗೊಳಿಸಲಾಗಿದೆ ಎಂದು ವರದಿ ಹೇಳುತ್ತಿದೆ. ಬ್ರಿಟಿಷರ ಕಾಲದಲ್ಲಿ ಪ್ರಾರಂಭವಾದ ದೇಶದ್ರೋಹ (Sedition) ಕಾನೂನನ್ನು ಕಿತ್ತೊಗೆಯಬೇಕು ಎಂಬುದು ಎಡಪಂಥೀಯರ ಮತ್ತು ನಾಗರಿಕ ಜಗತ್ತಿನ (Civil Society) ಆಯ್ದ ಕೆಲವರ ವಾದ.
ಆದರೆ, ಇತಿಹಾಸವನ್ನು ಗಮನಿಸಿದಾಗ, ಪಕ್ಷ ಯಾವುದೇ ಇರಲಿ, ಆಳ್ವಿಕೆಗೆ ಬಂದ ಪಕ್ಷಗಳು ಯಾರೂ ಇದನ್ನು ಕಿತ್ತೊಗೆಯಲಿಲ್ಲ! ಐಪಿಸಿ ಕಲಂ 124 A ಪ್ರಕಾರ (Section 124A of Indian Penal Code) ಶಬ್ದ ಬಳಕೆ, ಸನ್ನೆ ಮೂಲಕ ಅಥವಾ ಯಾವುದಾದರೂ ಚಿತ್ರ ಪ್ರದರ್ಶನದ ಮೂಲಕ ಸರಕಾರದ ವಿರುದ್ಧ ವೈಷಮ್ಯ ಬಿತ್ತಲು ಪ್ರಯತ್ನಿಸಿದರೆ ಅದು ದೇಶದ್ರೋಹ ಆಗುತ್ತದೆ. ಇಲ್ಲಿಯವರೆಗೆ ಬಂದ ಯಾವ ಸರ್ಕಾರಗಳು ಈ ಕಲಂನ ಅಡಿ ಕೇಸು ದಾಖಲು ಮಾಡುವುದನ್ನು ನಿಲ್ಲಿಸಿಲ್ಲ. ಇದು ಹಿಂದಿನ ಯುಪಿಎ ಸರಕಾರ ಇದ್ದಾಗಲೂ ನಡೆದಿತ್ತು ಎನ್ನುವುದನ್ನು ಗಮನಿಸಬಹುದು.
ಅಣುಸ್ಥಾವರ ವಿರೋಧಿಸಿ ಅಂದೋಳನ ನಡೆದಾಗ ಏನಾಯ್ತು ಕೂಡಂಕುಂಳಂನಲ್ಲಿ ಅಣುಸ್ಥಾವರ ವಿರೋಧಿಸಿ ಅಂದೋಳನ ನಡೆದಾಗ ಏನಾಯ್ತು ಎಂಬುದನ್ನು ನೋಡೋಣ. ಆಗ ಕೇಂದ್ರದಲ್ಲಿದ್ದ ಯುಪಿಎ ಸರಕಾರ 55,795 ಜನರ ವಿರುದ್ಧ ಎಫ್ಐಆರ್ ಹಾಕಿತ್ತು ಮತ್ತು ಸಾವಿರಾರು ಜನರನ್ನು ಬಂಧಿಸಿತ್ತು ಮತ್ತು ಸುಮಾರು 9,000 ಜನರ ವಿರುದ್ಧ ದೇಶದ್ರೋಹ ಕೇಸನ್ನು ಹಾಕಿತ್ತು. ಭಾರತದಲ್ಲಿ ಭ್ರಷ್ಟಾಚಾರ ಹೇಗೆ ಹರಡಿದೆ ಎಂಬುದನ್ನು ಚಿತ್ರ ಬಿಡಿಸಿದ್ದ ವ್ಯಂಗ್ಯಚಿತ್ರಕಾರ ಕಾನ್ಪುರದ ಅಸೀಮ್ ತ್ರೀವೇದಿ ಅವರನ್ನು ಎರಡು ವಾರ ಬಂಧಿಸಿ ಸೆರೆಮನೆಗೆ ಅಟ್ಟಲಾಗಿತ್ತು.
157 ವರ್ಷಗಳ ಇತಿಹಾಸ ಇರುವ ಈ ಕಾನೂನನ್ನು ಕಿತ್ತೊಗೆಯಬೇಕೆಂದು ನಾಗರಿಕ ಜಗತ್ತಿನ (Civil Society) ನಾಯಕರು ಎಷ್ಟೇ ಹೇಳಿದರೂ ಯಾವ ಪಕ್ಷಗಳೂ ಅದಕ್ಕೆ ಒಪ್ಪಿಗೆ ಕೊಡುತ್ತಿಲ್ಲ. ಕಳೆದ ದಶಕದ ಅತ್ಯಂತ ಯಶಸ್ವೀ ಚಳುವಳಿಯಲ್ಲಿ ಭಾಗವಹಿಸಿ ಕೊನೆಗೆ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಯುವ ಜನತೆಯ ಆಶಾಕಿರಣವೆಂದೇ ಬಿಂಬಿತವಾಗಿದ್ದ ಆಮ್ ಆದ್ಮಿ ಪಕ್ಷ ಕೂಡ ಇದರ ಬಗ್ಗೆ ಮಾತನಾಡುತ್ತಿಲ್ಲ ಎಂಬುದನ್ನು ನೋಡಿದಾಗ, 124-A IPC ಕಲಂನ್ನು ಯಾವ ಪಕ್ಷಗಳೂ ತೆಗೆಯುವ ಲಕ್ಷಣ ಕಾಣುತ್ತಿಲ್ಲ. ಹಾಗಂತ ಇದನ್ನು ತೆಗೆದಾಕ್ಷಣ ನಾಗರಿಕ ಸಮಾಜ (Civil Society) ತುಂಬಾ ಜವಾಬ್ದಾರಿಯುತವಾಗಿ ತನ್ನ ನಾಗರಿಕ ಕರ್ತವ್ಯವನ್ನು ನಿಭಾಯಿಸಲು ಪ್ರಾರಂಭಿಸುತ್ತೆ ಎಂದು ನಿರೀಕ್ಷಿಸುವುದು ಕೂಡ ತಪ್ಪಾಗಬಹುದು.
ಇದನ್ನೂ ಓದಿ: Fact Check: ಆಕೆಯ ಹೆಸರು ದಿಶಾ ರವಿ, ದಿಶಾ ರವಿ ಜೋಸೆಫ್ ಅಲ್ಲ
ಇದನ್ನೂ ಓದಿ: Toolkit case: ಮಾಧ್ಯಮಗಳಿಗೆ ತನಿಖಾ ವರದಿ ಸೋರಿಕೆ ನಿರ್ಬಂಧಕ್ಕೆ ದೆಹಲಿ ಹೈಕೋರ್ಟ್ಗೆ ದಿಶಾ ರವಿ ಮನವಿ
Published On - 8:04 pm, Thu, 18 February 21