Kerala Assembly Elections: ಬಿಜೆಪಿ ಸೇರಲಿದ್ದಾರೆ ಮೆಟ್ರೊಮ್ಯಾನ್ ಇ.ಶ್ರೀಧರನ್

Kerala Assembly Elections 2021: ನಾನು ಬಿಜೆಪಿಗೆ ಸೇರಲು ನಿರ್ಧರಿಸಿದ್ದೇನೆ, ಇನ್ನು ಔಪಚಾರಿಕ ಪ್ರಕ್ರಿಯೆಗಳು ಬಾಕಿ ಇದೆ ಎಂದು ಭಾರತದ ಮೆಟ್ರೊಮ್ಯಾನ್ ಇ.ಶ್ರೀಧರನ್ ಹೇಳಿದ್ದಾರೆ.

Kerala Assembly Elections: ಬಿಜೆಪಿ ಸೇರಲಿದ್ದಾರೆ ಮೆಟ್ರೊಮ್ಯಾನ್ ಇ.ಶ್ರೀಧರನ್
ಇ. ಶ್ರೀಧರನ್
Follow us
|

Updated on: Feb 18, 2021 | 7:52 PM

ನವದೆಹಲಿ: ಭಾರತದ ಮೆಟ್ರೊಮ್ಯಾನ್ ಇ.ಶ್ರೀಧರನ್ ಬಿಜೆಪಿ ಸೇರಲಿದ್ದಾರೆ. ಚುನಾವಣೆಗೆ ಸಿದ್ಧವಾಗಿರುವ ಕೇರಳದಲ್ಲಿ ಭಾನುವಾರ ನಡೆಯಲಿರುವ ಬಿಜೆಪಿ ವಿಜಯ ಯಾತ್ರೆ ವೇಳೆ 88ರ ಹರೆಯದ ಶ್ರೀಧರನ್ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.  ಶ್ರೀಧರನ್ ಬಿಜೆಪಿ ಪಕ್ಷದಿಂದ ಈ ಬಾರಿ ಚುನಾವಣೆ ಸ್ಪರ್ಧಿಸುವ ಸಾಧ್ಯತೆಯೂ ಇದೆ. ಅದೇ ವೇಳೆ ಚುನಾವಣೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ವಯಸ್ಸು 75 ದಾಟಿರಬಾರದು ಎಂದು ಬಿಜೆಪಿ ಪಕ್ಷ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಶ್ರೀಧರನ್ ಅವರಿಗೆ ಈ ಅವಕಾಶ ಸಿಗಬಹುದೇ ಎಂಬುದನ್ನು ಕಾದು ನೋಡಬೇಕಿದೆ.

ನಾನು ಬಿಜೆಪಿಗೆ ಸೇರಲು ನಿರ್ಧರಿಸಿದ್ದೇನೆ, ಇನ್ನು ಔಪಚಾರಿಕ ಪ್ರಕ್ರಿಯೆಗಳು ಬಾಕಿ ಇದೆ. ನಿವೃತ್ತಿ ಹೊಂದಿದ ನಂತರ ಕಳೆದ 10 ವರ್ಷಗಳಿಂದ ನಾನು ಕೇರಳದಲ್ಲಿ ವಾಸಿಸುತ್ತಿದ್ದೇನೆ. ನಾನು ವಿವಿಧ ಸರ್ಕಾರಗಳನ್ನು ನೋಡಿದ್ದು, ಅವರು ಯಾರೂ ಜನರಿಗಾಗಿ ಕೆಲಸ ಮಾಡಿಲ್ಲ. ನನ್ನ ಅನುಭವಗಳನ್ನು ಬಳಸಿ ನನ್ನ ಕಡೆಯಿಂದ ಏನು ಮಾಡಲು ಸಾಧ್ಯವೋ ಅದನ್ನು ಮಾಡುವುದಕ್ಕಾಗಿ ನಾನು ಬಿಜೆಪಿ ಸೇರುತ್ತಿದ್ದೇನೆ ಎಂದು ಶ್ರೀಧರನ್ ಹೇಳಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ.

ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ರಾಜಕೀಯ ಪಕ್ಷಗಳು ಭಾರತವನ್ನು ಕೆಟ್ಟದಾಗಿ ಬಿಂಬಿಸುತ್ತಿವೆ. ವಿರೋಧ ವ್ಯಕ್ತಪಡಿಸಲೇ ಬೇಕು ಎಂದು ಪಟ್ಟು ಹಿಡಿದು ಎಲ್ಲವನ್ನೂ ವಿರೋಧಿಸುತ್ತಿವೆ. ಕಾಂಗ್ರೆಸ್​ನಂಥಾ ಪಕ್ಷಗಳು ಭಾರತವನ್ನು ಕೆಟ್ಟದಾಗಿ ತೋರಿಸುತ್ತಿವೆ.

ಶಬರಿ ಮಲೆಗೆ ಮಹಿಳೆಯರಿಗೆ ಮುಕ್ತ ಪ್ರವೇಶ ನೀಡಿರುವ ಸುಪ್ರೀಂಕೋರ್ಟ್ ನಿರ್ದೇಶನ ಮತ್ತು ಪಿಣರಾಯಿ ವಿಜಯನ್ ನೇತೃತ್ವದ ನಿರ್ಧಾರವನ್ನ ಬಿಜೆಪಿ ವಿರೋಧಿಸಿತ್ತು. ಈ ಹಿಂದೆ ಇದ್ದಂತೆ 10 ವರ್ಷಕ್ಕಿಂತ ಕೆಳಗಿನ ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮಾತ್ರ ಶಬರಿಮಲೆಗೆ ಹೋಗಬೇಕು ಎಂಬ ನಿಲುವು ಬಿಜೆಪಿಯದ್ದು. ಇದಕ್ಕಾಗಿ ಬಿಜೆಪಿ, ಕೇರಳ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳನ್ನು ನಡೆದಿತ್ತು. ಅದೇ ವೇಳೆ ಹಿಂದೂ ಮತ್ತು ಮುಸ್ಲಿಂ ವಿವಾಹ ‘ಲವ್ ಜಿಹಾದ್’ ಎಂದು ಆರೋಪಿಸುತ್ತಿರುವ ಬಿಜೆಪಿ ನಿಲುವಿನ ಬಗ್ಗೆ ಶ್ರೀಧರನ್ ಅವರಲ್ಲಿ ಕೇಳಿದಾಗ, ಬಿಜೆಪಿ ನಿಲುವು ಸರಿ. ನಾನು ಬಿಜೆಪಿ ಸೇರುವುದಕ್ಕೆ ಇದೇ ಕಾರಣ. ಪಕ್ಷ ಬಯಸಿದರೆ ನಾನು ಚುನಾವಣೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ.

140 ಸದಸ್ಯರಿರುವ ಕೇರಳ ವಿಧಾನಸಭೆಯಲ್ಲಿ ಬಿಜೆಪಿಯ ಒಬ್ಬರು ಶಾಸಕರಿದ್ದಾರೆ. ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಪೈಪೋಟಿಯಲ್ಲಿರುವ ಕೇರಳದಲ್ಲಿ ಈ ಬಾರಿ ಹೆಚ್ಚಿನ ಸೀಟುಗಳನ್ನು ಗಳಿಸಲು ಬಿಜೆಪಿ ಹೆಚ್ಚು ಪರಿಶ್ರಮವಹಿಸಿದೆ. ಅದೇ ವೇಳೆ ಕಳೆದ ಚುನಾವಣೆಯ ವೇಳೆ ನೀಡಿದ ಎಲ್ಲ ಭರವಸೆಗಳನ್ನು ಪೂರೈಸಿ ಮತ್ತೊಮ್ಮೆ ಅಧಿಕಾರಕ್ಕೇರಲು ಪಿಣರಾಯಿ ನೇತೃತ್ವದ ಎಡಪಕ್ಷ ಸಿದ್ಧತೆ ನಡೆಸುತ್ತಿದ್ದರೆ, ಕಾಂಗ್ರೆಸ್ ಪಕ್ಷವು ನಾಯಕರ ಭಿನ್ನಾಭಿಪ್ರಾಯ ಶಮನಗೊಳಿಸುವ ಕಾರ್ಯದಲ್ಲಿ ತೊಡಗಿದೆ.

ಇದನ್ನೂ ಓದಿ: ಕೇರಳದಲ್ಲಿ 5 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ