29 ವರ್ಷಗಳಿಂದ ಕಾಲ್ನಡಿಗೆಯಲ್ಲಿಯೇ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಮಾಡುತ್ತಿರುವ ಭಕ್ತ
ಕಳೆದ 29 ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ, ಪಾದಯಾತ್ರೆ ಮೂಲಕ ದರ್ಶನ ಮಾಡಿಕೊಂಡು ಬರುತ್ತಿರುವ ವಿಜಯ ಕುಮಾರನಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದು. ಮಾಲೆ ಧರಿಸಿದಾಗಿನಿಂದಲೂ ಅಯ್ಯಪ್ಪ ಸ್ವಾಮಿ ತಮ್ಮ ಕುಟುಂಬಕ್ಕೆ ಒಳ್ಳೆಯದನ್ನೇ ಮಾಡಿದ್ದಾನೆ ಎನ್ನುತ್ತಾರೆ ವಿಜಯ ಕುಮಾರ ಕುಟುಂಬದವರು.
ಹಾವೇರಿ: ತಲೆ ಮೇಲೆ ಇಡುಮುಡಿಯ ಗಂಟು ಹೊತ್ತು, ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಎನ್ನುತ್ತಾ ಪಾದಯಾತ್ರೆ ಮಾಡುತ್ತಾರೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಮಡ್ಲೂರು ಗ್ರಾಮದ ವಿಜಯಕುಮಾರ. ಕೇರಳ ರಾಜ್ಯದ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವರು ಹೊರಡುವ ಪರಿ ಇದು. ವಿಜಯ ಕುಮಾರ ಅವರಿಗೆ ಈಗ 55 ವರ್ಷ ವಯಸ್ಸು. ಸುಮಾರು 29 ವರ್ಷಗಳಿಂದ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ನಡೆದುಕೊಂಡೇ ಹೋಗುತ್ತಿದ್ದಾರೆ.
ಕಳೆದ 29 ವರ್ಷಗಳಿಂದ ಅಯ್ಯಪ್ಪ ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೊರಟಿರುವ ವಿಜಯ ಕುಮಾರ ಪ್ರತಿದಿನ 40ರಿಂದ 50 ಕಿಮೀ ನಡೆಯುತ್ತಾರೆ. ದಾರಿಯಲ್ಲಿ ಸಿಗುವ ಊರಿನ ದೇವಸ್ಥಾನ, ಸಮುದಾಯ ಭವನ ಸೇರಿದಂತೆ ಅಲ್ಲಲ್ಲಿ ವಾಸ್ತವ್ಯ ಮಾಡುತ್ತಾರೆ. ಮತ್ತೆ ಬೆಳ್ಳಂಬೆಳಿಗ್ಗೆ ತಣ್ಣೀರಿನ ಸ್ನಾನ ಮಾಡಿ, ಅಯ್ಯಪ್ಪನ ಪೂಜೆ ಮಾಡಿ ಮತ್ತೆ ಕಾಲ್ನಡಿಗೆ ಆರಂಭಿಸುತ್ತಾರೆ. ಪ್ರತಿದಿನ 40-50 ಕಿಮೀ ನಡೆದುಕೊಂಡು ಹೋದರೂ ಯಾವುದೇ ರೀತಿಯ ಆಯಾಸ, ಕಾಲು ನೋವು ಕಂಡುಬರುವುದಿಲ್ಲ. ಎಲ್ಲವೂ ಅಯ್ಯಪ್ಪನ ಮಹಿಮೆ ಎನ್ನುತ್ತಾರೆ ಪಾದಯಾತ್ರೆ ಹೊರಟಿರುವ ವಿಜಯ ಕುಮಾರ.
ಒಬ್ಬರೇ ಹೊರಡುತ್ತಾರೆ: ಅಯ್ಯಪ್ಪ ಸ್ವಾಮಿಯ ಅಪ್ಪಟ ಭಕ್ತರಾಗಿರುವ ವಿಜಯಕುಮಾರ 29ವರ್ಷಗಳಿಂದ ಪಾದಯಾತ್ರೆ ಮಾಡುತ್ತಿದ್ದಾರೆ. ಅಯ್ಯಪ್ಪ ಸ್ವಾಮಿಯ ಹಾಡುಗಳನ್ನು ಗುನುಗುತ್ತಾ ಒಬ್ಬರೆ ಪಾದಯಾತ್ರೆಯಲ್ಲಿ ಸಾಗುತ್ತಾರೆ. ಪಾದಯಾತ್ರೆ ಆರಂಭವಾಗುವ ದಿನ ವಿಜಯ ಕುಮಾರ ಸ್ನೇಹಿತರು ಮತ್ತು ಅವರ ಕುಟುಂಬ ವರ್ಗದವರು ಅಯ್ಯಪ್ಪ ಸ್ವಾಮಿಗೆ ಪೂಜೆ ಮಾಡಿ ಬೀಳ್ಕೊಡುತ್ತಾರೆ. ಸುಮಾರು 18 ದಿನಗಳ ಕಾಲ ವಿಜಯ ಕುಮಾರ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅಣಿಯಾಗುತ್ತಾರೆ. 18ನೇ ದಿನಕ್ಕೆ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ತಲುಪಿ ಅಲ್ಲಿ ಸ್ವಾಮಿಗೆ ಪೂಜೆ ಸಲ್ಲಿಸಿ, ಸ್ವಾಮಿಯ ದರ್ಶನ ಪಡೆದು ವಾಪಸ್ಸಾಗುತ್ತಾರೆ.
ಪಾದಯಾತ್ರಿಗಳಿಗೆ ಅವಕಾಶ ಮಾಡಿಕೊಡಬೇಕು: ಈಗ ಕೊರೊನಾ ಸೋಂಕಿನ ಭೀತಿ ಇರುವುದರಿಂದ ಆನ್‌ಲೈನ್ ಮೂಲಕ ಟಿಕೆಟ್ ತೆಗೆದುಕೊಂಡು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೋಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಬಹುತೇಕ ಜನರಿಗೆ ಟಿಕೆಟ್ ಸೌಲಭ್ಯ ಸಿಗುತ್ತಿಲ್ಲ. ಪಾದಯಾತ್ರೆ ಆರಂಭಿಸಿರುವ ವಿಜಯ ಕುಮಾರ ಸ್ವಾಮಿಗೂ ಟಿಕೆಟ್ ದೊರೆತಿಲ್ಲ. ಆದರೆ ಅಯ್ಯಪ್ಪ ಸ್ವಾಮಿ ತಮ್ಮನ್ನು ಕರೆಯಿಸಿಕೊಳ್ಳುತ್ತಾನೆ ಎಂಬ ನಂಬಿಕೆಯಿಂದ ವಿಜಯ ಕುಮಾರ ಈಗಾಗಲೇ ಪಾದಯಾತ್ರೆ ಆರಂಭ ಮಾಡಿದ್ದಾರೆ. ಆದರೆ ವಿಜಯ ಕುಮಾರ ಅವರಂತೆ ಸಾಕಷ್ಟು ಜನರು ಪಾದಯಾತ್ರೆ ಮೂಲಕ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋಗುವವರಿಗೆ ಅವಕಾಶ ನೀಡಬೇಕು ಎನ್ನುತ್ತಾರೆ ಗುರು ಸ್ವಾಮಿ ನಾರಾಯಣ.
ಕಳೆದ 29 ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ, ಪಾದಯಾತ್ರೆ ಮೂಲಕ ದರ್ಶನ ಮಾಡಿಕೊಂಡು ಬರುತ್ತಿರುವ ವಿಜಯ ಕುಮಾರರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದು. ಮಾಲೆ ಧರಿಸಿದಾಗಿನಿಂದಲೂ ಅಯ್ಯಪ್ಪ ಸ್ವಾಮಿ ತಮ್ಮ ಕುಟುಂಬಕ್ಕೆ ಒಳ್ಳೆಯದನ್ನೇ ಮಾಡಿದ್ದಾನೆ ಎನ್ನುತ್ತಾರೆ ವಿಜಯ ಕುಮಾರ ಕುಟುಂಬದವರು.
ಅಯ್ಯಪ್ಪ ಸ್ವಾಮಿಯ ಮೇಲಿನ ಆಗಾಧವಾದ ಭಕ್ತಿಯಿಂದ ವಿಜಯ ಕುಮಾರ ಪ್ರತಿ ವರ್ಷ ಪಾದಯಾತ್ರೆ ಮೂಲಕ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡುತ್ತಾರೆ. ಸ್ವಾಮಿಯ ದರ್ಶನದ ನಂತರ ವಾಪಸ್ ರೈಲಿನಲ್ಲಿ ಊರಿಗೆ ಬರುತ್ತಾರೆ. 29 ವರ್ಷಗಳಿಂದ ನಿರಂತರವಾಗಿ ಸ್ವಾಮಿಯ ದರ್ಶನಕ್ಕೆ ನಡೆದುಕೊಂಡು ಹೋದರೂ ಯಾವುದೇ ರೀತಿಯ ತೊಂದರೆ ಕಾಣಿಸಿಕೊಂಡಿಲ್ಲ. ಹೀಗಾಗಿ 55ರ ವಯಸ್ಸಿನಲ್ಲಿಯೂ ಪಾದಯಾತ್ರೆ ಮೂಲಕ ಸ್ವಾಮಿಯ ದರ್ಶನಕ್ಕೆ ಹೊರಟಿದ್ದೇನೆ ಎಂದು ವಿಜಯ ಕುಮಾರ ಶಬರಿಮಲೆಯತ್ತ ಪಾದಯಾತ್ರೆ ಬೆಳೆಸಿದರು.
Published On - 3:55 pm, Fri, 25 December 20