ನಿರ್ಭಯಾ ನಿಧಿ ಮಹಿಳಾ ಸುರಕ್ಷತಾ ಯೋಜನೆ: ಗೃಹ ಕಾರ್ಯದರ್ಶಿ ರೂಪಾ ಅವರಿಂದ ದಾಖಲೆ ಬಿಡುಗಡೆ, ವಿವಾದಕ್ಕೆ ಹೊಸ ಆಯಾಮ
ತಮ್ಮ ಮೇಲೆ ಬಂದ ಆರೋಪಕ್ಕೆ ಉತ್ತರಿಸಿರುವ ಗೃಹ ಕಾರ್ಯದರ್ಶಿ ಡಿ. ರೂಪಾ ಅವರು ದಾಖಲೆ ಸಹಿತ ಅರೋಪವನ್ನು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ, ಈ ಕಾರ್ಯಕ್ರಮದಲ್ಲಿ ಹಣ ಪೋಲಾಗಬಾರದು ಅಥವಾ ಭ್ರಷ್ಟಾಚಾರ ಆಗಬಾರದೆಂದು ತಾನು ಕೆಂಪು ಬಾವುಟ ಹಾರಿಸಿದ್ದು ನಿಜ ಎಂದು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ, 610 ಕೋಟಿ ರೂಪಾಯಿ ನಿರ್ಭಯ ಫಂಡ್ ಬಳಕೆ ಕುರಿತಾಗಿ ಕರೆಯಲಾಗಿದ್ದ ಗುತ್ತಿಗೆ ವಿಚಾರದಲ್ಲಿ ಗೃಹ ಕಾರ್ಯದರ್ಶಿ ಡಿ. ರೂಪಾ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಗುತ್ತಿಗೆಗೆ ಪ್ರಭಾವ ಬೀರಲು ಪ್ರಯತ್ನಿಸಿದ್ದರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಹೊಸ ಮಾಹಿತಿಗಳು ಹೊರ ಬರುತ್ತಿದ್ದು ಅದನ್ನು ನೋಡಿದರೆ ಈ ಗುತ್ತಿಗೆ ಪ್ರಕ್ರಿಯೆಯಲ್ಲಿ ತುಂಬಾ ವ್ಯತ್ಯಾಸ ಕಾಣಿಸಿಕೊಂಡಿದ್ದು ಕಾಣುತ್ತದೆ.
ಅಷ್ಟೇ ಅಲ್ಲ, ಈ ಕುರಿತಾಗಿ ಸರಕಾರಿ ಸೌಮ್ಯದ ಭಾರತ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ಸಲ್ಲಿಸಿದ್ದರು ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಆ ದೂರಿನನ್ವಯ ನಿರ್ಭಯ ಫಂಡ್ ಬಳಕೆ ಕುರಿತಾಗಿ ಗೃಹ ಇಲಾಖೆ ತನಿಖೆ ನಡೆಸಿತ್ತು ಎಂಬುದು ಬೆಳಕಿಗೆ ಬಂದಿದೆ. ಈ ಕುರಿತಾಗಿ ಅಖಿಲ ಭಾರತ ಭ್ರಷ್ಟಾಚಾರ ವಿರೋಧಿ ಸಂಘದ ಶರದ್ ಆಜಾದ್ ಕೂಡ ಕರ್ನಾಟಕ ಸರ್ಕಾರದ ಡಿಪಿಎಆರ್ಗೆ ಈ ಕುರಿತು ದೂರು ಸಲ್ಲಿಸಿದ್ದು ಕೂಡ ಈಗ ಬಹಿರಂಗವಾಗಿದೆ. ಇದೆಲ್ಲವನ್ನೂ ನೋಡಿದ ಗೃಹ ಕಾರ್ಯದರ್ಶಿ ರೂಪ ಅವರು ಅದಕ್ಕೆ ಕೆಂಪು ಬಾವುಟ ಹಾರಿಸಿದ ಮಾಹಿತಿ ಕೂಡ ಈಗ ಬಹಿರಂಗವಾಗಿದೆ.
ಬೆಂಗಳೂರು ಸುರಕ್ಷಿತ ನಗರ ಕಾರ್ಯಕ್ರಮದ ಅಡಿ ಸಿಸಿಟಿವಿ ಕೊಡಲು ಗುತ್ತಿಗೆ ಕರೆಯಲಾಗಿತ್ತು. ಆಗ ನಾಲ್ಕು ಗುತ್ತಿಗೆದಾರರು ಭಾಗವಹಿಸಿದ್ದರು. 1. ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ 2. ಲಾರ್ಸೆನ್ ಆಂಡ್ ಟೂಬ್ರೋ 3. ಮ್ಯಾಟ್ರಿಕ್ಸ್ ಸೆಕ್ಯುರಿಟಿ ಮತ್ತು ಸರ್ವೇಲೆನ್ಸ್ ಲಿಮಿಟೆಡ್ 4. ಎನ್ಸಿಸಿ ಲಿಮಿಟೆಡ್
ಬಿಇಎಲ್ ಕೊಟ್ಟ ದೂರಿನನ್ವಯ ಮ್ಯಾಟ್ರಿಕ್ಸ್ ಸೆಕ್ಯುರಿಟಿ ಮತ್ತು ಸರ್ವೇಲೆನ್ಸ್ ಲಿಮಿಟೆಡ್ ಮತ್ತು ಎನ್ಸಿಸಿ ಲಿಮಿಟೆಡ್ ಕಂಪೆನಿಯಲ್ಲಿ ಓರ್ವ ನಿರ್ದೇಶಕ ಒಬ್ಬರೇ ವ್ಯಕ್ತಿಯಾಗಿದ್ದರಿಂದ, conflict of interest ಇರುವುದು ಕಂಡಿದೆ. ಈ ಎರಡೂ ಕಂಪೆನಿಗಳು ಒಳಒಪ್ಪಂದ ಮಾಡಿಕೊಂಡಿರುವುದು ಕಾಣುತ್ತಿದೆ. ಹಾಗಾಗಿ ಅವರ ಗುತ್ತಿಗೆ ಕರಡು ನಿಯಮಕ್ಕೆ (Contract Document) ವಿರುದ್ಧವಾಗಿದೆ. ಈಗಾಗಲೇ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಈ ಕುರಿತು ಮಾಹಿತಿ ನೀಡಿ ಈ ಎರಡೂ ಕಂಪೆನಿಗಳನ್ನು ಈ ಪ್ರಕ್ರಿಯೆಯಿಂದ ಹೊರಗಿಡಬೇಕೆಂದು ಕೇಳಿಕೊಂಡಿದ್ದೇವೆ ಎಂದು ಬಿಇಎಲ್ ಪ್ರಧಾನಿಯವರಿಗೆ ಬರೆದ ದೂರಿನಲ್ಲಿ ಹೇಳಿದ್ದರು. ಮ್ಯಾಟ್ರಿಕ್ಸ್ ಕಂಪೆನಿ ಚೀನಾದ ವಸ್ತು ಬಳಕೆ ಮಾಡುವ ಕುರಿತು ಹೇಳಿದ್ದು ಇದು ನಮ್ಮ ಭದ್ರತೆಗೆ ಹೊಡೆತ ಕೊಡಬಹುದು. ಆದ್ದರಿಂದ ಈ ಎರಡೂ ಕಂಪೆನಿಯನ್ನು ಗುತ್ತಿಗೆ ಪ್ರಕ್ರಿಯೆಯಿಂದ ಹೊರಗಿಡಬೇಕೆಂದು ಬಿಇಎಲ್, ತನ್ನ ಪತ್ರದಲ್ಲಿ ಕೇಳಿಕೊಂಡಿತ್ತು. ಇದೇ ಆಧಾರದ ಮೇಲೆ ಓರ್ವ ಭ್ರಷ್ಟಾಚಾರ ವಿರೋಧಿ ಸಂಘದ ಶರದ್ ಆಜಾದ್ ಕೂಡ ಕಳೆದ ಮಾರ್ಚ್ 13 ರಂದು ಪತ್ರ ಬರೆದಿದ್ದರು.
ಈ ಆಧಾರವಿಟ್ಟುಕೊಂಡು ಪ್ರಧಾನಿ ಕಾರ್ಯಾಲಯವು ಮುಖ್ಯ ಕಾರ್ಯದರ್ಶಿ ಅವರಿಗೆ ವರದಿ ಕೇಳಿತ್ತು. ಮುಖ್ಯ ಕಾರ್ಯದರ್ಶಿ ಅವರ ನಿರ್ದೇಶನದಂತೆ ಗೃಹ ಕಾರ್ಯದರ್ಶಿ ತಪ್ಪಾಗಿ ಗುತ್ತಿಗೆ ಕರಡನ್ನು ತಯಾರಿಸಿದ್ದ ಖಾಸಗಿ ಸಂಸ್ಥೆ ಅರ್ನಸ್ಟ್ ಅಂಡ್ ಯಂಗ್ ಕಂಪೆನಿಯ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲ, ಸರಕಾರದ ನಿರ್ದೇಶನದಂತೆ ಈ ಗುತ್ತಿಗೆ ಪ್ರಕ್ರಿಯೆಯನ್ನು ವಜಾ ಮಾಡಲಾಗಿತ್ತು.
ತಮ್ಮ ಹೆಸರನ್ನು ಈ ವಿಚಾರಕ್ಕೆ ಎಳೆದ ಮಾಧ್ಯಮಗಳ ಬಗ್ಗೆ ಪ್ರತಿಕ್ರಿಯಿಸಿರುವ, ರೂಪಾ ಅವರು, ತಾವು whistle blower ಆಗಿದ್ದು ತಪ್ಪೇ? ಒಟ್ಟೂ ₹ 1067 ಕೋಟಿ ಹಣ ಖರ್ಚಾಗುವ ಈ ಕಾರ್ಯಕ್ರಮದ ಮೊದಲ ಹಂತದಲ್ಲಿ ₹ 667 ಕೋಟಿ ಖರ್ಚಾಗಲಿದೆ. ಈ ಹಣ ಪೋಲಾಗಬಾರದು ಅಥವಾ ಈ ಕಾರ್ಯಕ್ರಮದಲ್ಲಿ ಯಾವ ಭ್ರಷ್ಟಾಚಾರವೂ ನಡೆಯಬಾರದು ಎಂಬ ಕಾರಣಕ್ಕೆ ತಾನು ಈ ವಿಚಾರವನ್ನು ಎತ್ತಿದ್ದು ತಪ್ಪೇ? ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಒಂದು ಹೆಜ್ಜೆ ಮುಂದು ಹೋಗಿ ಗುತ್ತಿಗೆ ಪ್ರಕ್ರಿಯೆಯನ್ನು ನಡೆಸುತ್ತಿರುವ ಮತ್ತೋರ್ವ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಆ ಕೆಲಸದಿಂದ ತೆಗೆಯುವುದು ಸೂಕ್ತ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ತಾವು ಯಾವ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಕಾರ್ಯಾಲಯಕ್ಕೆ ಬಿಇಎಲ್ ಅಧಿಕಾರಿಗಳು ಬರೆದಿರುವ ಪತ್ರ
Published On - 4:28 pm, Fri, 25 December 20