AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ: ಸೆನ್ಸಾರ್ ಮಂಡಳಿ ವಿರುದ್ಧ ಗರಂ ಆದ ನಟಿ

CBFC problem: ಭಾರತದಲ್ಲಿ ಯಾವುದೇ ಭಾಷೆಯ ಸಿನಿಮಾ ಸಾರ್ವಜನಿಕ ಪ್ರದರ್ಶನಗೊಳ್ಳಬೇಕು ಎಂದರೆ ಸಿಬಿಎಫ್​ಸಿ ಪ್ರಮಾಣ ಪತ್ರ ಹೊಂದುವುದು ಕಡ್ಡಾಯ. ಸೆನ್ಸಾರ್ ಮಂಡಳಿಯು ಸಿನಿಮಾ ವೀಕ್ಷಿಸಿ ವಿವಾದಾತ್ಮಕ ಅಥವಾ ನಿಯಮಬಾಹಿರ, ಅನೈತಿಕವಾದುದನ್ನು ತೆಗೆದುಹಾಕುತ್ತದೆ. ಇದೀಗ ಸಿನಿಮಾ ಒಂದರಲ್ಲಿದ್ದ ಕಿಸ್ಸಿಂಗ್ ದೃಶ್ಯವನ್ನು ತೆಗೆದಿದ್ದು, ಇದಕ್ಕೆ ನಟಿಯೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ: ಸೆನ್ಸಾರ್ ಮಂಡಳಿ ವಿರುದ್ಧ ಗರಂ ಆದ ನಟಿ
Superman
ಮಂಜುನಾಥ ಸಿ.
|

Updated on:Jul 12, 2025 | 11:15 PM

Share

ಭಾರತದಲ್ಲಿ ಯಾವುದೇ ಸಿನಿಮಾ ಅಥವಾ ಡಾಕ್ಯುಮೆಂಟರಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕೆಂದರೆ ಅದಕ್ಕೆ ಸಿಬಿಎಫ್​ಸಿ (CBFC) ಪ್ರಮಾಣ ಪತ್ರ ಕಡ್ಡಾಯ. ಸೆನ್ಸಾರ್ ಮಂಡಳಿಯವರು ಸಿನಿಮಾಗಳನ್ನು ನೋಡಿ ಅದು ಸಾರ್ವಜನಿಕ ವೀಕ್ಷಣೆಗೆ ಅರ್ಹವಾಗಿದೆ ಎಂದರೆ ಮಾತ್ರವೇ ಸಿನಿಮಾ ಅನ್ನು ಬಿಡುಗಡೆ ಮಾಡುತ್ತಾರೆ. ಸೆನ್ಸಾರ್ ಹಲವು ಬಾರಿ ವಿವೇಚನಾರಹಿತವಾಗಿ ಸಿನಿಮಾಗಳಿಗೆ ಕತ್ತರಿ ಹಾಕಿರುವ ಹಲವಾರು ಉದಾಹರಣೆಗಳು ಇವೆ. ಇದೀಗ ಸಿನಿಮಾ ಒಂದರಲ್ಲಿ ಬರುವ ಮುತ್ತಿನ ದೃಶ್ಯವೊಂದಕ್ಕೆ ಕತ್ತರಿ ಹಾಕಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಜನಪ್ರಿಯ ನಟಿಯೊಬ್ಬರು ಸಹ ಇದನ್ನು ಖಂಡಿಸಿದ್ದಾರೆ.

ನಿನ್ನೆಯಷ್ಟೆ (ಜುಲೈ 11) ಭಾರತದಲ್ಲಿ ಹಾಲಿವುಡ್ ಸಿನಿಮಾ ‘ಸೂಪರ್​​ಮ್ಯಾನ್’ ಬಿಡುಗಡೆ ಆಗಿದೆ. ಸೂಪರ್ ಹೀರೋ ಸಿನಿಮಾ ಇದಾಗಿದ್ದು, ಸಿನಿಮಾದ ಬಗ್ಗೆ ಭಾರಿ ಒಳ್ಳೆಯ ಪ್ರತಿಕ್ರಿಯೆಗಳು ವಿಶ್ವಮಟ್ಟದಲ್ಲಿ ವ್ಯಕ್ತವಾಗಿದೆ. ಭಾರತದಲ್ಲಿ ಸಹ ಈ ಸಿನಿಮಾ ನಿನ್ನೆ ಬಿಡುಗಡೆ ಆಗಿದೆ. ಆದರೆ ಬಿಡುಗಡೆಗೆ ಮುಂಚೆ ಸಿಬಿಎಫ್​ಸಿ ಪ್ರಮಾಣ ಪತ್ರ ಪಡೆಯುವ ವೇಳೆಯಲ್ಲಿ ಈ ಸಿನಿಮಾದ ಪ್ರಮುಖ ರೊಮ್ಯಾಂಟಿಕ್ ದೃಶ್ಯವನ್ನೇ ಸೆನ್ಸಾರ್ ಮಂಡಳಿ ಕತ್ತರಿಸಿ ಹಾಕಿದೆ.

ಸಿನಿಮಾದಲ್ಲಿ ನಾಯಕ (ಸೂಪರ್​ಮ್ಯಾನ್) ನಾಯಕಿಗೆ ಮುತ್ತು ನೀಡುವ ದೃಶ್ಯ ಇದೆ. ಸೂಪರ್​ಮ್ಯಾನ್ ಆಕಾಶದಲ್ಲಿ ಹಾರುತ್ತಲೇ ನಾಯಕಿಗೆ ರೊಮ್ಯಾಂಟಿಕ್ ಆಗಿ ಮುತ್ತು ಕೊಡುತ್ತಾನೆ. ಈ ಸಮಯದಲ್ಲಿ ನಾಯಕ-ನಾಯಕಿ ಇಬ್ಬರೂ ಸಂಪೂರ್ಣ ಬಟ್ಟೆ ಧರಿಸಿರುತ್ತಾರೆ. ಯಾವುದೇ ಲೈಂಗಿಕ ದೃಶ್ಯಗಳೂ ಸಹ ಇದಲ್ಲ. ಬಾಲಿವುಡ್​, ದಕ್ಷಿಣ ಭಾರತದ ಅನೇಕ ಸಿನಿಮಾಗಳಲ್ಲಿ ತೋರಿಸಲಾಗುವ ಮುತ್ತಿನ ದೃಶ್ಯವೇ ಇದಾಗಿದೆ. ಆದರೆ ಆ ದೃಶ್ಯಕ್ಕೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ.

ಇದನ್ನೂ ಓದಿ:ಮೋದಿ ಮಾತು ಸೇರಿಸಿ: ‘ಸಿತಾರೆ ಜಮೀನ್ ಪರ್’ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ ಸೂಚನೆ

33 ಸೆಕೆಂಡುಗಳ ದೃಶ್ಯ ಇದಾಗಿದ್ದು, ಸಂಪೂರ್ಣ ದೃಶ್ಯಕ್ಕೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ. ಅಮೆರಿಕ ಸೇರಿದಂತೆ ‘ಸೂಪರ್​​ಮ್ಯಾನ್’ ಸಿನಿಮಾ ಬಿಡುಗಡೆ ಆದ ಕಡೆಯೆಲ್ಲ ಈ ದೃಶ್ಯ ಇದೆ. ಆದರೆ ಭಾರತದಲ್ಲಿ ಮಾತ್ರ ಆ ದೃಶ್ಯ ಇಲ್ಲ. ಇದು ನೆಟ್ಟಿಗರನ್ನು ಕೆರಳಿಸಿದೆ. ‘ಸ್​ಯಾಮ್ 1992’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಪ್ರತಿಭಾವಂತ ನಟಿ ಶ್ರೆಯಾ ಧನ್ವಂತ್ರಿ ಸಹ ಈ ವಿಷಯವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ಟೀಕೆ ಮಾಡಿದ್ದಾರೆ.

‘ಸೆನ್ಸಾರ್ ಮಂಡಳಿಯು 33 ಸೆಕೆಂಡುಗಳ ಮುತ್ತಿನ ದೃಶ್ಯವನ್ನು ಸಿನಿಮಾದಿಂದ ಕಿತ್ತು ಬಿಸಾಡಿದೆ. ಇದರ ಹಿಂದಿನ ಆಲೋಚನೆಯನ್ನು ನನಗೆ ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ. ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡಿ, ಪೈರಸಿ ನೋಡಬೇಡಿ ಎನ್ನುತ್ತಾರೆ ಆದರೆ ಈ ರೀತಿಯ ಕಾರ್ಯಗಳನ್ನು ಮಾಡುತ್ತಾರೆ. ನಾವು (ವಯಸ್ಕರು) ಹಣ ಪಾವತಿಸಿ ನಾವು ಏನು ನೋಡಬೇಕು ಎಂದುಕೊಳ್ಳುತ್ತೇವೆಯೋ ಅದನ್ನು ನೋಡುವ ಸ್ವಾತಂತ್ರ್ಯ ಇಲ್ಲವೆ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ನಟಿಯ ಟ್ವೀಟ್​ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಪ್ರೇಕ್ಷಕರ ಆಯ್ಕೆಯ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಇನ್ನಿತರೆ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಇದರ ಜೊತೆಗೆ ‘ಸೂಪರ್​ಮ್ಯಾನ್’ ಸಿನಿಮಾ ಫ್ಯಾಂಟಸಿ ಸಿನಿಮಾ, ಇದನ್ನು ಮಕ್ಕಳು ನೋಡುವುದು ಹೆಚ್ಚು, ಹಾಗಾಗಿ ಕಿಸ್ಸಿಂಗ್ ದೃಶ್ಯವನ್ನು ಸೆನ್ಸಾರ್ ಮಂಡಳಿ ತೆಗೆದಿರುವುದು ಸರಿಯಾದ ನಿರ್ಧಾರ ಎಂದು ಕೆಲವರು ವಾದಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:02 pm, Sat, 12 July 25