IND vs ENG: 387 ರನ್‌ಗಳಿಗೆ ಆಲೌಟ್; ಭಾರತಕ್ಕೆ ಮುನ್ನಡೆಯು ಇಲ್ಲ, ಹಿನ್ನಡೆಯೂ ಇಲ್ಲ
England vs India 3rd Test: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ ತಂಡ ಮುನ್ನಡೆ ಸಾಧಿಸಲು ಕೊನೆ ಕ್ಷಣದಲ್ಲಿ ವಿಫಲವಾಯಿತು. ಕೆ.ಎಲ್. ರಾಹುಲ್ ಅವರ ಶತಕ (100 ರನ್) ಮತ್ತು ರಿಷಭ್ ಪಂತ್, ರವೀಂದ್ರ ಜಡೇಜಾ ಅವರ ಅರ್ಧಶತಕಗಳ ಹೊರತಾಗಿಯೂ, ಭಾರತ ತಂಡ 387 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್ ಗಳಿಸಿತ್ತು. ಕೊನೆಯ ಕೆಲವು ವಿಕೆಟ್‌ಗಳು ವೇಗವಾಗಿ ಕುಸಿದಿದ್ದು ಭಾರತದ ಮುನ್ನಡೆಯ ಆಸೆಗೆ ತಡೆಯಾಯಿತು.

ಲಾರ್ಡ್ಸ್‌ನಲ್ಲಿ (Lords Test) ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಮುನ್ನಡೆ ಸಾಧಿಸುವ ಅವಕಾಶವನ್ನು ಕಳೆದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 387 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಬಳಿಕ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಕೂಡ ಇದೀಗ ಅಷ್ಟೇ ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ. ಇದರಿಂದಾಗಿ ಎರಡೂ ತಂಡಗಳ ಸ್ಕೋರ್ ಮೊದಲ ಇನ್ನಿಂಗ್ಸ್‌ನಲ್ಲಿ ಸಮನಾಗಿದೆ. ಭಾರತದ ಪರ ಕೆಎಲ್ ರಾಹುಲ್ (KL Rahul) ಶತಕ ಗಳಿಸಿದರೆ, ರಿಷಭ್ ಪಂತ್ (Rishabh Pant) ಮತ್ತು ರವೀಂದ್ರ ಜಡೇಜಾ (Ravindra Jadeja) ಅರ್ಧಶತಕ ಬಾರಿಸಿದರು. ಇದರ ಹೊರತಾಗಿಯೂ, ಭಾರತ ತಂಡ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಲಿಲ್ಲ. ಭಾರತ 11 ರನ್‌ಗಳ ಅಂತರದಲ್ಲಿ ಕೊನೆಯ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿದರ ಪರಿಣಾಮದಿಂದಾಗಿ ಮುನ್ನಡೆ ಗಳಿಸಲು ಸಾಧ್ಯವಾಗಲಿಲ್ಲ. ಇತ್ತ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಮೂರನೇ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 2 ರನ್ ಕಲೆಹಾಕಿದೆ.
ರಾಹುಲ್- ಪಂತ್ ಜೊತೆಯಾಟ
ಭಾರತ ಮೂರನೇ ದಿನದಾಟವನ್ನು ಮೂರು ವಿಕೆಟ್‌ಗಳಿಗೆ 145 ರನ್‌ಗಳೊಂದಿಗೆ ಪ್ರಾರಂಭಿಸಿತು. ಕೆಎಲ್ ರಾಹುಲ್ ಮತ್ತು ಪಂತ್ ಭಾರತ ಪರ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ದರು. ಆರಂಭಿಕ ಅವಧಿಯಲ್ಲಿ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಅದ್ಭುತ ಪ್ರದರ್ಶನ ನೀಡಿದರು. ಇದೇ ವೇಳೆ ಪಂತ್ ಅರ್ಧಶತಕ ಬಾರಿಸಿದರಾದರೂ ರನೌಟ್ ಆಗಿ ಪೆವಿಲಿಯನ್‌ಗೆ ಮರಳಿದರು. ಅಂತಿಮವಾಗಿ ಪಂತ್ 112 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 74 ರನ್ ಗಳಿಸಿ ಔಟಾದರು. ಅಲ್ಲದೆ ಪಂತ್ ಮತ್ತು ಕೆಎಲ್ ರಾಹುಲ್ ನಡುವೆ ನಾಲ್ಕನೇ ವಿಕೆಟ್‌ಗೆ 141 ರನ್‌ಗಳ ಪಾಲುದಾರಿಕೆ ಇತ್ತು. ಪಂತ್ ಔಟಾದ ತಕ್ಷಣ ಊಟದ ವಿರಾಮ ಘೋಷಿಸಲಾಯಿತು. ಮೊದಲ ಸೆಷನ್ನಲ್ಲಿ ಭಾರತ 103 ರನ್ ಗಳಿಸಿ ಕೇವಲ ಒಂದು ವಿಕೆಟ್ ಮಾತ್ರ ಕಳೆದುಕೊಂಡಿತು.
ರಾಹುಲ್ ಶತಕ
ಊಟದ ವಿರಾಮದ ನಂತರ, ರಾಹುಲ್ ತಮ್ಮ 10 ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು, ಆದರೆ ರಾಹುಲ್ ಶತಕ ಗಳಿಸಿದ ನಂತರ ತಮ್ಮ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ ರಾಹುಲ್ 177 ಎಸೆತಗಳಲ್ಲಿ 13 ಬೌಂಡರಿಗಳ ಸಹಾಯದಿಂದ ರಾಹುಲ್ 100 ರನ್ ಗಳಿಸಿದರು. ಇದಾದ ನಂತರ ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ ಅವರೊಂದಿಗೆ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಉಪಯುಕ್ತ ಪಾಲುದಾರಿಕೆಯನ್ನು ಮಾಡಿ ತಂಡವನ್ನು 300 ರನ್‌ಗಳ ಗಡಿ ದಾಟಿಸಿದರು. ಆದರೆ ಬೆನ್ ಸ್ಟೋಕ್ಸ್, ನಿತೀಶ್ ರೆಡ್ಡಿ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಆರನೇ ಹೊಡೆತ ನೀಡಿದರು. ನಿತೀಶ್ ಮತ್ತು ಜಡೇಜಾ ನಡುವೆ 72 ರನ್‌ಗಳ ಪಾಲುದಾರಿಕೆ ಇತ್ತು.
IND vs ENG: ಇಲ್ಲದ ರನ್ ಕದಿಯಲು ಹೋಗಿ ರನೌಟ್ಗೆ ಬಲಿಯಾದ ರಿಷಭ್ ಪಂತ್; ವಿಡಿಯೋ ನೋಡಿ
ಜಡೇಜಾ ಅರ್ಧಶತಕ
ನಿತೀಶ್ ಬಳಿಕವೂ ತಮ್ಮ ನೈಜ ಆಟವನ್ನು ಮುಂದುವರೆಸಿದ ಆಲ್‌ರೌಂಡರ್ ರವೀಂದ್ರ ಜಡೇಜಾ ಅರ್ಧಶತಕ ಬಾರಿಸಿದರು. ಜಡೇಜಾ 87 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಪ್ರವಾಸದಲ್ಲಿ ಜಡೇಜಾ ಅವರ ಸತತ ಮೂರನೇ ಅರ್ಧಶತಕ ಇದಾಗಿದೆ. ಜಡೇಜಾ ಅವರ ಅದ್ಭುತ ಇನ್ನಿಂಗ್ಸ್ ಭಾರತದ ಸ್ಕೋರ್ ಅನ್ನು 350 ರನ್‌ಗಳ ಗಡಿ ದಾಟಿಸಿತು. ಆದಾಗ್ಯೂ ರವೀಂದ್ರ 131 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 72 ರನ್ ಬಾರಿಸಿ ಔಟಾದರು. ಔಟಾಗುವುದಕ್ಕೂ ಮುನ್ನ ಜಡೇಜಾ, ವಾಷಿಂಗ್ಟನ್ ಸುಂದರ್ ಅವರೊಂದಿಗೆ 50 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.
ಜಡೇಜಾ ಔಟಾದಾಗ, ಭಾರತದ ಸ್ಕೋರ್ 376 ರನ್‌ಗಳಾಗಿತ್ತು. ಅಂದರೆ, ಭಾರತ ತಂಡ ಮುನ್ನಡೆ ಸಾಧಿಸಲು ಕೇವಲ 12 ರನ್‌ಗಳ ದೂರದಲ್ಲಿತ್ತು, ಆದರೆ ಭಾರತ ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ಮುನ್ನಡೆಯನ್ನು ಗಳಿಸಲು ಸಾಧ್ಯವಾಗಲಿಲ್ಲ. ಭಾರತದ ಪರ, ನಿತೀಶ್ 30, ವಾಷಿಂಗ್ಟನ್ ಸುಂದರ್ 23 ಮತ್ತು ಆಕಾಶ್ ದೀಪ್ ಏಳು ರನ್ ಗಳಿಸಿದರೆ ಬುಮ್ರಾ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಸಿರಾಜ್ ಕೂಡ ಖಾತೆ ತೆರೆಯದೆ ಅಜೇಯರಾಗಿ ಮರಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:06 pm, Sat, 12 July 25
