VIDEO: ನಾಟಕ ಸಾಕು ಆಡ್ರೊ… ಇಂಗ್ಲೆಂಡ್ ಆಟಗಾರರೊಂದಿಗೆ ಜಗಳಕ್ಕಿಳಿದ ಶುಭ್ಮನ್ ಗಿಲ್
Shubman Gill vs Zak Crawley Fight: ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನವು ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದಿದೆ. ಈ ಪೈಪೋಟಿಯೊಂದಿಗೆ ಆಟಗಾರರು ಪರಸ್ಪರ ವಾಕ್ಸಮರ ನಡೆಸಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಹಾಗೂ ಝಾಕ್ ಕ್ರಾಲಿ ಮೈದಾನದಲ್ಲಿ ಮಾತಿನ ಚಕಮಕಿ ನಡೆಸಿದರು.
ಶುಭ್ಮನ್ ಗಿಲ್ ಕೂಲ್ ಕ್ಯಾಪ್ಟನ್ ಆಗಲಿದ್ದಾರಾ? ಈ ಪ್ರಶ್ನೆಗೆ ಸದ್ಯದ ಉತ್ತರ ನೋ ವೇ, ಚಾನ್ಸೇ ಇಲ್ಲ. ಬದಲಾಗಿ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿಯಾಗುವುದು ಪಕ್ಕಾ. ಏಕೆಂದರೆ ಮೈದಾನದಲ್ಲಿ ಎದುರಾಳಿಗಳನ್ನು ಹೇಗೆ ಎದುರಿಸಬೇಕೆಂಬುದು ನಾಯಕ ಗಿಲ್ ಮೊದಲ ಸರಣಿಯಲ್ಲೇ ತೋರಿಸಿದ್ದಾರೆ. ಅದರಲ್ಲೂ ಲಾರ್ಡ್ಸ್ ಮೈದಾನದಲ್ಲಿ ಶುಭ್ಮನ್ ಆಕ್ರಮಣಕಾರಿ ನಾಯಕತ್ವವನ್ನು ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.
ಮೊದಲ ದಿನದಾಟದಲ್ಲಿ ಬಾಝ್ ಬಾಲ್ ಬದಲಿಗೆ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಇಂಗ್ಲೆಂಡ್ ಬ್ಯಾಟರ್ಗಳನ್ನು ವ್ಯಂಗ್ಯವಾಡಿ ಗಮನ ಸೆಳೆದಿದ್ದ ಗಿಲ್, ಇದೀಗ ಮೂರನೇ ದಿನದಾಟದ ಅಂತ್ಯದ ವೇಳೆ ಆಂಗ್ಲ ಬ್ಯಾಟರ್ಗಳ ಚಳಿ ಬಿಡಿಸಲು ಮುಂದಾಗಿದ್ದಾರೆ. ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ 387 ರನ್ಗಳಿಸಿ ಆಲೌಟ್ ಆದರೆ, ಟೀಮ್ ಇಂಡಿಯಾ ಕೂಡ 387 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿತ್ತು.
ಇದರ ಬೆನ್ನಲ್ಲೇ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದರು. ಆದರೆ ಮೂರನೇ ದಿನದಾಟದ ಅಂತ್ಯದ ವೇಳೆ ಇನಿಂಗ್ಸ್ ಆರಂಭಿಸಿದ್ದರಿಂದ ಇಂಗ್ಲೆಂಡ್ ಆರಂಭಿಕ ಜೋಡಿ ಸಮಯ ವ್ಯರ್ಥ ಮಾಡುವ ಕಾಯಕಕ್ಕೆ ಕೈ ಹಾಕಿದ್ದರು. ಇತ್ತ ಅಲ್ಪ ಸಮಯದೊಳಗೆ ಎಷ್ಟು ಸಾಧ್ಯವೊ ಅಷ್ಟು ಓವರ್ಗಳನ್ನು ಎಸೆಯುವ ನಿರ್ಧಾರದೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾಗೆ ಇಂಗ್ಲೆಂಡ್ ಬ್ಯಾಟರ್ಗಳ ನಾಟಕ ಸ್ಪಷ್ಟವಾಗಿ ತಿಳಿಯಿತು.
ಅದರಲ್ಲೂ ಜಸ್ಪ್ರೀತ್ ಬುಮ್ರಾ ಎಸೆದ 2ನೇ ಓವರ್ನ 5ನೇ ಎಸೆತವು ಇಂಗ್ಲೆಂಡ್ ದಾಂಡಿಗ ಝಾಕ್ ಕ್ರಾಲಿ ಗ್ಲೌಸ್ಗೆ ತಾಗಿದೆ. ಇದನ್ನೆ ನೆಪ ಮಾಡಿಕೊಂಡ ಕ್ರಾಲಿ ಕ್ರೀಸ್ನಿಂದ ಹೊರಗೆ ನಿಂತು ನೋವಾಗುತ್ತಿದೆ ಎಂದು ನಾಟಕ ಮಾಡಲಾರಂಭಿಸಿದ್ದಾರೆ. ಇತ್ತ ಟೀಮ್ ಇಂಡಿಯಾ ಆಟಗಾರರು ಝಾಕ್ ಕ್ರಾಲಿಯ ಈ ನಾಟಕವನ್ನು ಚಪ್ಪಾಳೆ ತಟ್ಟುತ್ತಾ ಗೇಲಿ ಮಾಡಿದರು.
ಇದೇ ವೇಳೆ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಅಶ್ಲೀಲ ಪದವೊಂದನ್ನು ಬಳಸಿ, ನಾಟಕ ಸಾಕು ಆಡ್ರೊ ಎಂಬಾರ್ಥದಲ್ಲಿ ತಿರುಗೇಟು ನೀಡಿದ್ದಾರೆ. ಇದರಿಂದ ಕೆರಳಿದ ಕ್ರಾಲಿ ಶುಭ್ಮನ್ ಗಿಲ್ ಜೊತೆ ವಾಗ್ವಾದಕ್ಕಿಳಿದರು. ಇತ್ತ ಗಿಲ್ ಕೂಡ ಕಣ್ಣಲ್ಲಿ ಕಣ್ಣಿಟ್ಟು ಝಾಕ್ ಕ್ರಾಲಿ ಮುಂದೆ ನಿಂತು ಬೆರಳು ತೋರಿಸಿ ವಾರ್ನಿಂಗ್ ನೀಡಿದರು. ಇದಾದ ಬಳಿಕ ಮತ್ತೋರ್ವ ಆಟಗಾರ ಬೆನ್ ಡಕೆಟ್ ಹಾಗೂ ಶುಭ್ಮನ್ ಗಿಲ್ ನಡುವೆ ಮಾತಿನ ಚಕಮಕಿ ನಡೆಯಿತು.
ಇದೀಗ ಶುಭ್ಮನ್ ಗಿಲ್ ಅವರ ಈ ವಾರ್ನಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಗಿಲ್ ಕೂಲ್ ಕ್ಯಾಪ್ಟನ್ ಆಗಲ್ಲ. ಮತ್ತೋರ್ವ ವಿರಾಟ್ ಕೊಹ್ಲಿ ಆಗಲಿದ್ದಾರೆ ಎಂದು ಕೆಲ ಅಭಿಮಾನಿಗಳು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

