Greta Thunberg Toolkit Case: ದಿಶಾ ರವಿ ಬಂಧನ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ; ಪೊಲೀಸರಿಗೆ ಗಂಭೀರ ಪತ್ರ ಬರೆದ ಮಹಿಳಾ ಆಯೋಗ
ದಿಶಾ ರವಿ ಅವರನ್ನು ಬೆಂಗಳೂರಲ್ಲಿ ಬಂಧಿಸಿ ದೆಹಲಿಗೆ ಕರೆದೊಯ್ದಿರುವುದು ಹಲವು ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು ದೆಹಲಿ ಪೊಲೀಸರು ಉತ್ತರಿಸಬೇಕೆಂದು ಮಹಿಳಾ ಆಯೋಗ ಪತ್ರ ಬರೆದಿದೆ.
ದೆಹಲಿ: 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿಯನ್ನು (Disha Ravi) ಬೆಂಗಳೂರಿನಿಂದ ಬಂಧಿಸಿ ಕರೆದೊಯ್ದ ಪ್ರಕರಣದಲ್ಲಿ ದೆಹಲಿ ಮಹಿಳಾ ಆಯೋಗ (Delhi Commission for Women) ಸ್ವಯಂ ಪ್ರೇರಿತವಾಗಿ ಮಧ್ಯಪ್ರವೇಶಿಸಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿರುವ ಕೇಂದ್ರ ಮಹಿಳಾ ಆಯೋಗ ಇದಕ್ಕೆ ಸಂಬಂಧಿಸಿದ ಕೆಲ ಪ್ರಶ್ನೆಗಳಿಗೆ ಫೆಬ್ರುವರಿ 19ರ ಒಳಗೆ ಉತ್ತರ ನೀಡುವಂತೆ ದೆಹಲಿ ಪೊಲೀಸರಿಗೆ ಪತ್ರ ಬರೆದಿದೆ.
ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಉಲ್ಲೇಖಿಸಿರುವ ಮಹಿಳಾ ಆಯೋಗ, 2019ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದಂತೆ, ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ ನಂತರ ಬೇರೆಡೆಗೆ ಕರೆದೊಯ್ಯಬೇಕಾದರೆ ಹತ್ತಿರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮೊದಲು ಹಾಜರುಪಡಿಸಬೇಕು. ಆನಂತರವಷ್ಟೇ ಆರೋಪಿಯನ್ನು ಒಂದೆಡೆಯಿಂದ ಇನ್ನೊಂದೆಡೆ ಕರೆದೊಯ್ಯಬಹುದು ಎಂಬ ಆದೇಶವನ್ನು ಉಲ್ಲೇಖಿಸಿದೆ. ದಿಶಾ ರವಿ ಅವರನ್ನು ಬೆಂಗಳೂರಲ್ಲಿ ಬಂಧಿಸಿ ದೆಹಲಿಗೆ ಕರೆದೊಯ್ದಿರುವುದು ಈ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದ್ದು ದೆಹಲಿ ಪೊಲೀಸರು ಉತ್ತರಿಸಬೇಕು ಎಂದು ಸೂಚಿಸಿದೆ.
ಪತ್ರದಲ್ಲಿ ಉಲ್ಲೇಖಿಸಿದ ಅಂಶಗಳು ಸಂವಿಧಾನದ ಇನ್ನೊಂದು ಅಂಶವನ್ನು ಉಲ್ಲೇಖಿಸಿರುವ ದೆಹಲಿ ಮಹಿಳಾ ಆಯೋಗ, ಸಂವಿಧಾನದ 22 (1) ವಿಧಿಯ ಅನ್ವಯ ಬಂಧಿತರು ವಕೀಲರನ್ನು ನೇಮಿಸಿಕೊಳ್ಳಬಹುದು. ಆದರೆ, ದಿಶಾ ರವಿ ಪ್ರಕರಣದಲ್ಲಿ ಈ ನಿಯಮ ಪಾಲನೆಯಾಗಿಲ್ಲ. ಈ ಕುರಿತು ಸ್ಪಷ್ಟನೆ ನೀಡುವಂತೆ ಹೇಳಿದೆ.
ದೆಹಲಿ ಪೊಲೀಸರು ದಿಶಾ ರವಿ ಮೇಲೆ ದಾಖಲಿಸಿರುವ FIR ಪ್ರತಿಯನ್ನು ತನಗೂ ನೀಡುವಂತೆ ಮಹಿಳಾ ಆಯೋಗ ಕೇಳಿದೆ. ಬಂಧನದ ನಂತರ ದೆಹಲಿಗೆ ಕರೆದೊಯ್ಯುವ ಮುನ್ನ ಏಕೆ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲವೆಂದು ವಿವರಿಸುವಂತೆ ಕೇಳಿದೆ. ದೆಹಲಿ ನ್ಯಾಯಾಲಯದ ಎದುರು ಹಾಜರುಪಡಿಸುವಾಗ ದಿಶಾ ರವಿ ಅವರಿಗೆ ವಕೀಲರನ್ನು ಒದಗಿಸದ ಕುರಿತು ಆಕ್ಷೇಪ ಎತ್ತಿದೆ. ಯಾವ ಕಾರಣಕ್ಕೆ ಪೊಲೀಸರು ದಿಶಾ ರವಿಗೆ ವಕೀಲರನ್ನು ಇಟ್ಟುಕೊಳ್ಳಲು ಅವಕಾಶ ನೀಡಿಲ್ಲ ಎಂದು ವಿವರಿಸುವಂತೆ ಸೂಚಿಸಿದೆ.
ಇದನ್ನೂ ಓದಿ: Greta Thunberg toolkit | ಕೇಂದ್ರ ಸರ್ಕಾರಕ್ಕೆ ಭಯ ಶುರುವಾಗಿದೆ; ದಿಶಾ ರವಿ ಬಂಧನ ಖಂಡಿಸಿದ ರಾಹುಲ್ ಗಾಂಧಿ
Published On - 8:37 pm, Tue, 16 February 21