ರೈತರ ಪ್ರತಿಭಟನೆ ಎಫೆಕ್ಟ್: ಜಿಯೋ ಚಂದಾದಾರರ ಸಂಖ್ಯೆಯಲ್ಲಿ ತೀವ್ರ ಕುಸಿತ
Reliance Jio | Farmers Protest: ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, 2020ರ ಡಿಸೆಂಬರ್ನಲ್ಲಿ ಜಿಯೋ ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ಸಬ್ಸ್ಕ್ರೈಬರ್ಗಳನ್ನು ಕಳೆದುಕೊಂಡಿದೆ.
ನವದೆಹಲಿ: ಕೆಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆಯಿಂದ ಮುಕೇಶ್ ಅಂಬಾನಿಗೆ ಲಾಭವಾಗಲಿದೆ ಎನ್ನುವ ವದಂತಿಯಿಂದ ರಿಲಯನ್ಸ್ ಜಿಯೋಗೆ ದೊಡ್ಡ ನಷ್ಟ ಉಂಟಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಜಿಯೋ ಚಂದಾದಾರರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡಿದೆ. ನವೆಂಬರ್ ಅಂತ್ಯದ ವೇಳೆಗೆ ರೈತರು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಆರಂಭಿಸಿದ್ದರು. ಈ ಮಧ್ಯೆ, ಕೃಷಿ ಕಾಯ್ದೆಗಳು ರಿಲಯನ್ಸ್ಗೆ ಸಹಕಾರಿಯಾಗಲಿವೆ ಎನ್ನುವ ವದಂತಿ ಹರಿದಾಡಿತ್ತು. ಇದರಿಂದ ಸಿಟ್ಟಾದ ರೈತರು ಜಿಯೋದಿಂದ ಬೇರೆ ನೆಟ್ವರ್ಕ್ಗೆ ಪೋರ್ಟ್ ಆಗಿದ್ದರು. ಇದರ ಹಿಂದೆ ಏರ್ಟೆಲ್ ಹಾಗೂ ವಡಾಫೋನ್-ಐಡಿಯಾ ಕೈವಾಡವಿದೆ ಎಂದು ಜಿಯೋ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದಲ್ಲಿ (TRAI) ದೂರನ್ನು ಕೂಡ ದಾಖಲಿಸಿತ್ತು. ಈ ಎಲ್ಲಾ ಬೆಳವಣಿಗೆಯಿಂದ ಜಿಯೋಗೆ ನಷ್ಟ ಉಂಟಾಗಿದೆ.
ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, 2020ರ ಡಿಸೆಂಬರ್ನಲ್ಲಿ ಜಿಯೋ ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ಚಂದಾದಾರನ್ನು ಕಳೆದುಕೊಂಡಿದೆ. ವಿಚಿತ್ರ ಎಂದರೆ, ಜಿಯೋ ಚಂದಾದಾರನ್ನು ಕಳೆದುಕೊಂಡಿರುವುದು ಈ ಎರಡು ರಾಜ್ಯಗಳಲ್ಲಿ ಮಾತ್ರ. 2019ರ ನವೆಂಬರ್ನಲ್ಲಿ ಪಂಜಾಬ್ನಲ್ಲಿ 1.40 ಕೋಟಿ ಮಂದಿ ಜಿಯೋ ಸಿಮ್ ಬಳಸುತ್ತಿದ್ದರು. ಡಿಸೆಂಬರ್ ಅಂತ್ಯಕ್ಕೆ ಈ ಸಂಖ್ಯೆ 1.25 ಕೋಟಿಗೆ ಇಳಿಕೆ ಆಗಿತ್ತು. ಇನ್ನು, ಹರಿಯಾಣದಲ್ಲಿ ಕಳೆದ ನವೆಂಬರ್ನಲ್ಲಿ 94.48 ಲಕ್ಷ ಇದ್ದ ಜಿಯೋ ಬಳಕೆದಾರರು ಡಿಸೆಂಬರ್ ವೇಳೆಗೆ 89.07 ಲಕ್ಷಕ್ಕೆ ಇಳಿಕೆ ಆಗಿದೆ. ಲಾಂಚ್ ಆದಾಗಿನಿಂದ ರಾಜ್ಯವೊಂದರಲ್ಲಿ ಜಿಯೋ ತನ್ನ ಚಂದಾದಾರನ್ನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಳೆದುಕೊಂಡಿದ್ದು ಇದೇ ಮೊದಲು.
ಬಳಕೆದಾರರು ಕಡಿಮೆ ಆಗುವುದಕ್ಕೆ ಏರ್ಟೆಲ್ ಹಾಗೂ ವೊಡಾಫೋನ್-ಇಡಿಯಾ ಕಾರಣ. ಇದಕ್ಕಾಗಿ ಅವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ರಿಲಯನ್ಸ್ ಜಿಯೋ ಹೇಳುತ್ತಲೇ ಬಂದಿದೆ. ಆದರೆ, ಈ ಆರೋಪವನ್ನು ಏರ್ಟೆಲ್ ಹಾಗೂ ವೊಡಾಫೋನ್-ಇಡಿಯಾ ತಳ್ಳಿ ಹಾಕಿವೆ. ಕೃಷಿ ಕಾಯ್ದೆಯನ್ನು ವಿರೋಧಿಸಿ ನವೆಂಬರ್ ತಿಂಗಳಿಂದ ಪ್ರತಿಭಟನೆ ನಡೆಯುತ್ತಲೇ ಇದೆ. ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ನಡೆದ ಹಲವು ಹಂತದ ಮಾತುಕತೆ ಕೂಡ ವಿಫಲವಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಡೇಟಾ ಬೆಲೆ ಕಡಿಮೆಗೊಳಿಸಿದ ರಿಲಯನ್ಸ್ ಜಿಯೋವನ್ನು ಹೊಗಳಿದ ನೆಟ್‌ಫ್ಲಿಕ್ಸ್ ಸಿಇಒ
Published On - 2:57 pm, Fri, 19 February 21