ಕಮಲ್ ಹಾಸನ್ ಪಕ್ಷದಿಂದ ಹೊರನಡೆದ ಇನ್ನಿಬ್ಬರು ಮುಖಂಡರು; ಚುನಾವಣೆಯಲ್ಲಿ ಸೋತ ಬೆನ್ನಲ್ಲೇ ರಾಜೀನಾಮೆ

ಎಂಎನ್​ಎಂ ಪಕ್ಷದ ಮಾಜಿ ಉಪಾಧ್ಯಕ್ಷರಾಗಿದ್ದ ಆರ್. ಮಹೇಂದ್ರನ್​ ಅವರೂ ಕೂಡ ಇತ್ತೀಚೆಗಷ್ಟೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಕಮಲ್ ಹಾಸನ್​ ಮತ್ತು ಪಕ್ಷದ ವಿರುದ್ಧ ಬೇಸರ ಹೊರಹಾಕಿ ರಾಜೀನಾಮೆ ನೀಡಿದ್ದರು.

ಕಮಲ್ ಹಾಸನ್ ಪಕ್ಷದಿಂದ ಹೊರನಡೆದ ಇನ್ನಿಬ್ಬರು ಮುಖಂಡರು; ಚುನಾವಣೆಯಲ್ಲಿ ಸೋತ ಬೆನ್ನಲ್ಲೇ ರಾಜೀನಾಮೆ
ಕಮಲ್​ ಹಾಸನ್​

ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರ ಮಕ್ಕಳ್​ ನೀದಿ ಮಯ್ಯಮ್ ಪಕ್ಷದಿಂದ ಹೊರನಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇಂದು ಮತ್ತಿಬ್ಬರು ಪಕ್ಷವನ್ನು ತೊರೆದು, ರಾಜೀನಾಮೆ ನೀಡಿ ಹೋಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಸಂತೋಷ್ ಬಾಬು ಮತ್ತು ಪದ್ಮ ಪ್ರಿಯಾ ಇಂದು ರಾಜೀನಾಮೆ ನೀಡಿದ್ದಾರೆ. ಸಂತೋಷ್ ಬಾಬು ಮಾಜಿ ಐಎಎಸ್ ಅಧಿಕಾರಿ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವೇಲಾಚೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇಂದು ತಾವು ರಾಜೀನಾಮೆ ನೀಡುತ್ತಿರುವ ವಿಚಾರವನ್ನು ಟ್ವಿಟರ್​ ಮೂಲಕ ತಿಳಿಸಿದ್ದಾರೆ.

ಕಮಲ್ ಹಾಸನ್ ಸೇರಿ ಪಕ್ಷದ ಇತರ ಸದಸ್ಯರು ತೋರಿಸಿದ ಪ್ರೀತಿಗೆ ಧನ್ಯವಾದ ಸಲ್ಲಿಸಿ, ಭಾರವಾದ ಹೃದಯದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಪದ್ಮಪ್ರಿಯಾ ಅವರು ಪರಿಸರ ಹೋರಾಟಗಾರ್ತಿ. ಈ ಬಾರಿ ಚುನಾವಣೆಯಲ್ಲಿ ಮದುರಾವೋಯೆಲ್​​ನಿಂದ ಸ್ಪರ್ಧಿಸಿದ್ದರು. ಮುಂದಿನ ದಿನಗಳಲ್ಲಿ ಪಕ್ಷ ಯಶಸ್ಸುಗಳಿಸಲಿ ಎಂದು ಹಾರೈಸಿದ್ದಾರೆ.

ಪಕ್ಷ ತೊರೆದಿದ್ದ ಮಾಜಿ ಉಪಾಧ್ಯಕ್ಷ
ಎಂಎನ್​ಎಂ ಪಕ್ಷದ ಮಾಜಿ ಉಪಾಧ್ಯಕ್ಷರಾಗಿದ್ದ ಆರ್. ಮಹೇಂದ್ರನ್​ ಅವರೂ ಕೂಡ ಇತ್ತೀಚೆಗಷ್ಟೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಕಮಲ್ ಹಾಸನ್​ ಮತ್ತು ಪಕ್ಷದ ವಿರುದ್ಧ ಬೇಸರ ಹೊರಹಾಕಿ ರಾಜೀನಾಮೆ ನೀಡಿದ್ದರು. ಕಮಲ್​ ಹಾಸನ್​ ಪಕ್ಷವನ್ನು ಮುನ್ನಡೆಸುತ್ತಿರುವ ರೀತಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಇಲ್ಲ ಎಂದೂ ಹೇಳಿದ್ದರು. ಇನ್ನು ಏಪ್ರಿಲ್​ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಕಮಲ್ ಹಾಸನ್​ ಅವರ ಪಕ್ಷ ಒಂದೇ ಒಂದು ಕ್ಷೇತ್ರದಲ್ಲೂ ಗೆಲುವು ಸಾಧಿಸಿಲ್ಲ.

Click on your DTH Provider to Add TV9 Kannada