ದ್ವಂದ್ವ ನಿಲುವು ಬಿಟ್ಟುಬಿಡಿ: 26/11 ವಿಚಾರಣೆಯನ್ನು ತ್ವರಿತಗೊಳಿಸುವಂತೆ ಪಾಕಿಸ್ತಾನಕ್ಕೆ ಹೇಳಿದ ಭಾರತ
26/11 Terror Attacks 26/11 ಉಗ್ರ ದಾಳಿಯು ಪೂರ್ವಯೋಜಿತವಾಗಿದ್ದು , ಪಾಕಿಸ್ತಾನದ ಗಡಿಯಿಂದಲೇ ಅದನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ಎಂಇಎ ಪ್ರಕಟಣೆಯಲ್ಲಿ ತಿಳಿಸಿದೆ. ದ್ವಂದ್ವ ನೀತಿಯನ್ನು ಕೈಬಿಡುವಂತೆ ಮತ್ತು ಭೀಕರ ದಾಳಿಯ ಅಪರಾಧಿಗಳನ್ನು ತ್ವರಿತವಾಗಿ ನ್ಯಾಯಾಂಗಕ್ಕೆ ತರುವಂತೆ ನಾವು ಮತ್ತೊಮ್ಮೆ ಪಾಕಿಸ್ತಾನ ಸರ್ಕಾರಕ್ಕೆ ಕರೆ ನೀಡುತ್ತೇವೆ.
ದೆಹಲಿ: ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ(26/11 terror attacks in Mumbai) 13 ನೇ ವಾರ್ಷಿಕೋತ್ಸವದಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (Ministry of External Affairs) ದಾಳಿಯ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಪಾಕಿಸ್ತಾನಕ್ಕೆ (Pakistan) ಹೇಳಿದೆ. ಅದೇ ವೇಳೆ ಸಂತ್ರಸ್ತರ ಮತ್ತು ಹುತಾತ್ಮರ ಕುಟುಂಬಗಳಿಗೆ ನ್ಯಾಯವನ್ನು ಪಡೆಯಲು ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಪ್ರತಿಜ್ಞೆ ಮಾಡಿದೆ. ಭಾರತದಲ್ಲಿನ ಪಾಕಿಸ್ತಾನದ ಹೈಕಮಿಷನ್‌ನ(High Commission of Pakistan) ಹಿರಿಯ ರಾಜತಾಂತ್ರಿಕರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ( MEA) ದಿಂದ ಕರೆಸಲಾಯಿತು ಮತ್ತು ವಿಚಾರಣೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಒತ್ತಾಯಿಸಲಾಯಿತು. “26/11 ಮುಂಬೈ ದಾಳಿಯ 13 ವರ್ಷಗಳ ನಂತರವೂ, 166 ಸಂತ್ರಸ್ತರ ಕುಟುಂಬಗಳು ಇನ್ನೂ ಕಾಯುತ್ತಿವೆ ಎಂಬುದು ಆಳವಾದ ದುಃಖದ ವಿಷಯವಾಗಿದೆ” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ರಾಜತಾಂತ್ರಿಕರಿಗೆ ಹಸ್ತಾಂತರಿಸಿದ ಮೌಖಿಕ ಟಿಪ್ಪಣಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಭಾರತದ ವಿರುದ್ಧ ಭಯೋತ್ಪಾದನೆಗೆ ತನ್ನ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ಅನುಮತಿಸುವುದಿಲ್ಲ ಎಂಬ ತನ್ನ ಬದ್ಧತೆಗೆ ಬದ್ಧವಾಗಿರುವಂತೆ ಪಾಕಿಸ್ತಾನವನ್ನು ಕೇಳಿದೆ. ದಾಳಿಯ ಅಪರಾಧಿಗಳನ್ನು ನ್ಯಾಯಕ್ಕೆ ತರುವಲ್ಲಿ ಪಾಕಿಸ್ತಾನವು “ಕಡಿಮೆ ಪ್ರಾಮಾಣಿಕತೆ” ತೋರಿಸುತ್ತಿದೆ ಎಂದು ಎಂಇಎ ಆರೋಪಿಸಿದೆ.
26/11 ಉಗ್ರ ದಾಳಿಯು ಪೂರ್ವಯೋಜಿತವಾಗಿದ್ದು , ಪಾಕಿಸ್ತಾನದ ಗಡಿಯಿಂದಲೇ ಅದನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ಎಂಇಎ ಪ್ರಕಟಣೆಯಲ್ಲಿ ತಿಳಿಸಿದೆ. ದ್ವಂದ್ವ ನೀತಿಯನ್ನು ಕೈಬಿಡುವಂತೆ ಮತ್ತು ಭೀಕರ ದಾಳಿಯ ಅಪರಾಧಿಗಳನ್ನು ತ್ವರಿತವಾಗಿ ನ್ಯಾಯಾಂಗಕ್ಕೆ ತರುವಂತೆ ನಾವು ಮತ್ತೊಮ್ಮೆ ಪಾಕಿಸ್ತಾನ ಸರ್ಕಾರಕ್ಕೆ ಕರೆ ನೀಡುತ್ತೇವೆ. ಇದು ಕೇವಲ ಭಯೋತ್ಪಾದಕರಿಗೆ ಬಲಿಯಾದ ಅಮಾಯಕರ ಕುಟುಂಬಗಳಿಗೆ ಪಾಕಿಸ್ತಾನದ ಹೊಣೆಗಾರಿಕೆಯ ವಿಷಯವಲ್ಲ, ಆದರೆ ಅಂತರರಾಷ್ಟ್ರೀಯ ಬಾಧ್ಯತೆಯಾಗಿದೆ ಎಂದು ಎಂಇಎ ಹೇಳಿದೆ.
ಹದಿಮೂರು ವರ್ಷಗಳ ಹಿಂದೆ ನವೆಂಬರ್ 26 ರಂದು 10 ಎಲ್ಇಟಿ ಭಯೋತ್ಪಾದಕರು ದೇಶದ ಆರ್ಥಿಕ ರಾಜಧಾನಿಗೆ ಮುಂಬೈಗೆ ನುಗ್ಗಿದರು ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ಹೋಟೆಲ್ ಟ್ರೈಡೆಂಟ್, ನಾರಿಮನ್ ಹೌಸ್ ಮತ್ತು ಲಿಯೋಪೋಲ್ಡ್ ಕೆಫೆ ಸೇರಿದಂತೆ ಕೆಲವು ಜನನಿಬಿಡ ಸ್ಥಳಗಳನ್ನು ಗುರಿಯಾಗಿಸಿಕೊಂಡರು. ಮೂರು ದಿನಗಳ ಕಾಲ ನಡೆದ ದಾಳಿಯಲ್ಲಿ 166 ಮಂದಿ ಸಾವನ್ನಪ್ಪಿದ್ದರು.
ದಾಳಿಯಲ್ಲಿ ಭಾಗಿಯಾಗಿದ್ದ ಹತ್ತು ಉಗ್ರರ ಪೈಕಿ ಒಂಬತ್ತು ಮಂದಿ ಭದ್ರತಾ ಪಡೆಗಳಿಂದ ಹತರಾಗಿದ್ದಾರೆ. ಉಳಿದಿರುವ ಏಕೈಕ ದಾಳಿಕೋರ ಅಜ್ಮಲ್ ಕಸಬ್ ನನ್ನು ಬಂಧಿಸಿ ಮತ್ತು ನಂತರ ಗಲ್ಲಿಗೇರಿಸಲಾಯಿತು. ದಾಳಿಯಲ್ಲಿ ಭಾರತ ಮತ್ತು ಇತರ 14 ದೇಶಗಳು ತಮ್ಮ ಪ್ರಜೆಗಳನ್ನು ಕಳೆದುಕೊಂಡಿವೆ.
“ಈ ದೇಶಗಳಲ್ಲಿನ ಭಾರತೀಯ ಮಿಷನ್‌ಗಳು ರಾಷ್ಟ್ರೀಯ ಮತ್ತು ವಿದೇಶಿ ಸಂತ್ರಸ್ತರನ್ನು ನೆನಪಿಸಿಕೊಳ್ಳುವ ಸ್ಮಾರಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಭಯೋತ್ಪಾದನೆಯ ಜಾಗತಿಕ ಬೆದರಿಕೆಯನ್ನು ಜಗತ್ತಿಗೆ ನೆನಪಿಸುತ್ತವೆ” ಎಂದು ಎಂಇಎ ಹೇಳಿದೆ.
ಇದನ್ನೂ ಓದಿ: Farmers Protest ಕೃಷಿ ಕಾನೂನು ವಿರುದ್ಧ ರೈತರ ಹೋರಾಟಕ್ಕೆ ಒಂದು ವರ್ಷ; ದೆಹಲಿಗೆ ಹರಿದು ಬರುತ್ತಿದೆ ರೈತರ ದಂಡು