ನಿದ್ರೆಯಲ್ಲಿ ಮಗ್ಗಲು ಬದಲಾಯಿಸಿದ ಅಪ್ಪ; ಪಕ್ಕದಲ್ಲಿ ಮಲಗಿದ್ದ 26 ದಿನದ ಮಗು ಉಸಿರುಗಟ್ಟಿ ಸಾವು!
ಉತ್ತರ ಪ್ರದೇಶದಲ್ಲಿ ಪೋಷಕರ ನಡುವೆ ಮಂಚದ ಮೇಲೆ ಮಲಗಿದ್ದ ನವಜಾತ ಶಿಶುವೊಂದು ಆಕಸ್ಮಿಕವಾಗಿ ಸಾವನ್ನಪ್ಪಿದೆ. 26 ದಿನಗಳ ಹಿಂದಷ್ಟೇ ಆ ಮಗು ಹುಟ್ಟಿತ್ತು. ಆ ಮಗುವನ್ನು ತೊಟ್ಟಿಲಲ್ಲಿ ಮಲಗಿಸುವ ಬದಲು ತಾಯಿ ತನ್ನ ಮತ್ತು ತನ್ನ ಗಂಡನ ಮಧ್ಯೆ ಮಲಗಿಸಿಕೊಂಡಿದ್ದಳು. ಆಗ ಮಗುವಿನ ತಂದೆ ಆಕಸ್ಮಿಕವಾಗಿ ಮಗುವಿನ ಮೇಲೆ ಮಗ್ಗುಲಾಗಿದ್ದಾರೆ. ನಿದ್ರೆಯಲ್ಲಿದ್ದ ಕಾರಣದಿಂದ ಅವರಿಗೆ ಈ ವಿಷಯ ಗೊತ್ತಾಗಲೇ ಇಲ್ಲ. ಬೆಳಗ್ಗೆ ಎದ್ದು ನೋಡುವಾಗ ದುರಂತವೊಂದು ನಡೆದಿತ್ತು!

ನೊಯ್ಡಾ, ಡಿಸೆಂಬರ್ 10: ಉತ್ತರ ಪ್ರದೇಶದ (Uttar Pradesh) ಗಜ್ರೌಲಾ ಪ್ರದೇಶದಲ್ಲಿ ರಾತ್ರಿ ಮಂಚದ ಮೇಲೆ ಮಲಗಿದ್ದ ಪೋಷಕರ ನಡುವೆ ಆಕಸ್ಮಿಕವಾಗಿ ಸಿಲುಕಿ ನವಜಾತ ಶಿಶು ಸಾವನ್ನಪ್ಪಿದೆ. 26 ದಿನದ ಮಗುವನ್ನು ಮಂಚದ ಮೇಲೆ ಮಲಗಿಸಿದ್ದಾಗ ಆ ಮಗುವಿನ ತಂದೆ ನಿದ್ರೆಯ ಅಮಲಿನಲ್ಲಿ ಮಗುವಿನ ಮೇಲೆ ಮಗ್ಗುಲು ಬದಲಾಯಿಸಿದ್ದಾರೆ. ಇದರಿಂದ ಆ ಮಗು ಅವರ ಕೆಳಗೆ ಸಿಲುಕಿ ಸಾವನ್ನಪ್ಪಿದೆ.
ಸೂಫಿಯಾನ್ ಎಂಬ ಶಿಶು ನವೆಂಬರ್ 10ರಂದು ಜನಿಸಿತ್ತು. ಸದ್ದಾಂ ಅಬ್ಬಾಸಿ (25) ಮತ್ತು ಅವರ ಪತ್ನಿ ಅಸ್ಮಾ ಮೊದಲ ಮಗು ಅದಾಗಿತ್ತು. ಶನಿವಾರ ರಾತ್ರಿ ದಂಪತಿ ಮಲಗುವ ಮುನ್ನ ಮಗುವನ್ನು ಹಾಸಿಗೆಯ ಮೇಲೆ ತಮ್ಮ ಮಧ್ಯೆ ಮಲಗಿಸಿಕೊಂಡಿದ್ದರು. ರಾತ್ರಿ ಹಾಲು ಕುಡಿಸಲು ತೊಟ್ಟಿಲಿನ ಬಳಿ ಹೋಗಬೇಕಾಗುತ್ತದೆ ಎಂದು ಆ ಮಹಿಳೆ ಮಗುವನ್ನು ಪಕ್ಕದಲ್ಲೇ ಮಲಗಿಸಿಕೊಂಡಿದ್ದರು. ಆ ಮಗುವಿನ ತಂದೆ ರಾತ್ರಿ ತಿಳಿಯದೆ ಮಗ್ಗುಲು ಬದಲಾಯಿಸಿದ್ದರಿಂದ 26 ದಿನಗಳ ಮಗು ಅವರ ದೇಹದ ಕೆಳಗೆ ಸಿಕ್ಕಿಹಾಕಿಕೊಂಡಿತು.
ಇದನ್ನೂ ಓದಿ: ಮಕ್ಕಳ ಬಗ್ಗೆ ಎಚ್ಚರ; ಬಾಳೆಹಣ್ಣು ಗಂಟಲಲ್ಲಿ ಸಿಕ್ಕಿ 5 ವರ್ಷದ ಬಾಲಕ ಸಾವು!
ಭಾನುವಾರ ಬೆಳಿಗ್ಗೆ ಅಸ್ಮಾ ಮಗುವಿಗೆ ಹಾಲುಣಿಸಲು ಎಚ್ಚರವಾದಾಗ ಮಗು ಪ್ರತಿಕ್ರಿಯಿಸದಿರುವುದನ್ನು ಕಂಡರು. ತಕ್ಷಣ ಮಗುವಿನ ತಂದೆ ಸದ್ದಾಂ ಆ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಮಗು ಮೃತಪಟ್ಟಿದೆ ಎಂದು ಘೋಷಿಸಿದರು.
ಮಗು ಹುಟ್ಟಿದಾಗಿನಿಂದ ಬಹಳ ದುರ್ಬಲವಾಗಿತ್ತು. ಆ ಮಗುವಿಗೆ ಉಸಿರಾಟದ ತೊಂದರೆಯಿತ್ತು. ನಂತರ ಕಾಮಾಲೆಯಿಂದ ಬಳಲುತ್ತಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ. ಪೋಷಕರು ಆಸ್ಪತ್ರೆಯಲ್ಲಿ ಆಘಾತದ ಸ್ಥಿತಿಯಲ್ಲಿ ಪರಸ್ಪರ ಕಿರುಚಾಡುತ್ತಾ ಗೋಳಾಡುತ್ತಿದ್ದರು. ನಂತರ ಕುಟುಂಬದ ಸದಸ್ಯರು ಅವರನ್ನು ಸಮಾಧಾನಪಡಿಸಿದರು. ಈ ವಿಷಯದಲ್ಲಿ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




