ಮಕ್ಕಳ ಬಗ್ಗೆ ಎಚ್ಚರ; ಬಾಳೆಹಣ್ಣು ಗಂಟಲಲ್ಲಿ ಸಿಕ್ಕಿ 5 ವರ್ಷದ ಬಾಲಕ ಸಾವು!
ಬಾಳೆಹಣ್ಣು ತಿಂದು ಉಸಿರುಗಟ್ಟಿ 5 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ತಮಿಳುನಾಡಿನಾದ್ಯಂತ ತೀವ್ರ ಆಘಾತವನ್ನುಂಟು ಮಾಡಿದೆ. ಈರೋಡ್‌ನ ಬಾಲಕನ ಶವವನ್ನು ಈರೋಡ್ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಪೋಷಕರಿಗೆ ಹಸ್ತಾಂತರಿಸಲಾಯಿತು. ತಮಿಳುನಾಡಿನಲ್ಲಿ ವೈದ್ಯರು ಸೇರಿದಂತೆ ಅನೇಕ ಜನರು ಬಾಲಕನ ಸಾವಿಗೆ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ವೈದ್ಯರು ಕೂಡ ಶವಪರೀಕ್ಷೆಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ.

ಈರೋಡ್, ಡಿಸೆಂಬರ್ 4: ತಮಿಳುನಾಡಿನ (Tamil Nadu) ಈರೋಡ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬಹಳ ಮುದ್ದಿನಿಂದ ನೋಡಿಕೊಳ್ಳುತ್ತಿದ್ದ 5 ವರ್ಷದ ಮಗು ಬಾಳೆಹಣ್ಣು ತಿನ್ನುವಾಗ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಂದೆ-ತಾಯಿಯನ್ನು ಆಘಾತಕ್ಕೆ ತಳ್ಳಿದೆ. ಈರೋಡ್‌ನ ಅನ್ನೈ ಸತ್ಯ ನಗರದ ಎಂ. ಸಾಯಿಶರಣ್ ಎಂಬ ಬಾಲಕ ಮನೆಯಲ್ಲಿ ಬಾಳೆಹಣ್ಣು ತಿನ್ನುವಾಗ ಅದು ಗಂಟಲಲ್ಲಿ ಸಿಕ್ಕಿಹಾಕಿಕೊಂಡು, ಉಸಿರಾಡಲಾಗದೆ ಸಾವನ್ನಪ್ಪಿದ್ದಾನೆ.
ಪುಟ್ಟ ಬಾಲಕ ಸಾಯಿ ಶರಣ್ ಮನೆಯಲ್ಲಿ ಬಾಳೆಹಣ್ಣು ತಿನ್ನುತ್ತಿದ್ದಾಗ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಆತನ ಪೋಷಕರಾದ ಮಾಣಿಕ್ ಮತ್ತು ಮಹಾಲಕ್ಷ್ಮಿ ನೆರೆಹೊರೆಯವರ ಸಹಾಯದಿಂದ ಆ ಮಗುವನ್ನು ಈರೋಡ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು, ಆತನ ಶ್ವಾಸನಾಳದಲ್ಲಿ ಬಾಳೆಹಣ್ಣಿನ ತುಂಡು ಸಿಲುಕಿಕೊಂಡಿರುವುದನ್ನು ಪತ್ತೆಹಚ್ಚಿದರು. ನಂತರ ವೈದ್ಯರು ಆ ಮಗುವನ್ನು ಚಿಕಿತ್ಸೆಗಾಗಿ ಈರೋಡ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು.
ಇದನ್ನೂ ಓದಿ: ಮನೆ ಮುಂದೆ ಆಟವಾಡುವ ನಿಮ್ಮ ಮಕ್ಕಳ ಬಗ್ಗೆ ಪೋಷಕರೇ ಎಚ್ಚರ! ಮಗುವಿನ ಮೇಲೆ ಹರಿದ ಕಾರು
ಆದರೆ, ಅಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಉಸಿರಾಡಲಾಗದೆ ಮೃತಪಟ್ಟಿದೆ ಎಂದು ಘೋಷಿಸಿದರು. ನಂತರ ಬಾಳೆಹಣ್ಣಿನ ತುಂಡನ್ನು ಮಗುವಿನ ಶ್ವಾಸನಾಳದಿಂದ ತೆಗೆದುಹಾಕಲಾಯಿತು. ಕರುಂಗಲ್‌ಪಾಳಯಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈರೋಡ್ ಜಿಲ್ಲೆಯ ಅನ್ನೈ ಸತ್ಯ ನಗರ ಪ್ರದೇಶದ ಮಾಣಿಕ್ಕಂ-ಮಹಾಲಕ್ಷ್ಮಿ ದಂಪತಿಗೆ 5 ವರ್ಷದ ಸಾಯಿಶರಣ್ ಎಂಬ ಮಗ ಮತ್ತು 2 ವರ್ಷದ ಮಗಳಿದ್ದಾರೆ. ದಂಪತಿಗಳಿಬ್ಬರೂ ಕೂಲಿ ಕೆಲಸ ಮಾಡುವುದರಿಂದ ಅವರು ಸಾಮಾನ್ಯವಾಗಿ ಇಬ್ಬರೂ ಮಕ್ಕಳನ್ನು ಅಜ್ಜಿಯ ಮನೆಯಲ್ಲಿ ಬಿಡುತ್ತಿದ್ದರು. ಮಂಗಳವಾರ ರಾತ್ರಿ ಆ ಹುಡುಗನ ಅಜ್ಜಿ ಸಾಯಿಶರಣ್‌ಗೆ ತಿನ್ನಲು ಬಾಳೆಹಣ್ಣನ್ನು ಕೊಟ್ಟರು. ಹಣ್ಣು ತಿಂದ ಹುಡುಗ ಅದನ್ನು ನುಂಗಲು ಕಷ್ಟಪಡುತ್ತಿದ್ದನು. ಆ ಬಾಳೆಹಣ್ಣು ಹುಡುಗನ ಶ್ವಾಸನಾಳದಲ್ಲಿ ಸಿಲುಕಿಕೊಂಡಿತು. ಇದರಿಂದ ಬಾಲಕನಿಗೆ ಉಸಿರಾಡಲು ತೊಂದರೆಯಾಯಿತು. ಇದರಿಂದ ಆಘಾತಕ್ಕೊಳಗಾದ ಪೋಷಕರು ತಕ್ಷಣ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಲಿವ್-ಇನ್ ಸಂಗಾತಿಯ ಕೊಂದು ಜೈಲು ಸೇರಿದ್ದ ವ್ಯಕ್ತಿ ಅಲ್ಲೇ ಹೃದಯಾಘಾತದಿಂದ ಸಾವು
ಮಗು ಉಸಿರುಗಟ್ಟಿ ಒದ್ದಾಡುತ್ತಿದ್ದಾಗ ಬೇಗನೆ ಚಿಕಿತ್ಸೆ ನೀಡಿದ್ದರೆ ಆತನನ್ನು ಉಳಿಸಬಹುದಿತ್ತು ಎಂದು ವೈದ್ಯರು ಹೇಳಿದ್ದಾರೆ. ಮಕ್ಕಳಿಗೆ ಯಾವುದೇ ಆಹಾರವನ್ನು ನೀಡಿದರೂ ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು ಎಂದು ವೈದ್ಯರು ಹೇಳಿದ್ದಾರೆ. ಮಗು ಉಸಿರುಗಟ್ಟಿದ್ದರೆ ಆ ಮಗುವಿನ ತಲೆಯನ್ನು ಎದೆಯ ಮೇಲೆ ಇಟ್ಟುಕೊಂಡು ಬೆನ್ನಿನ ಮೇಲೆ ತಟ್ಟಬೇಕು. ಇದು ಅನ್ನನಾಳದಲ್ಲಿ ಸಿಲುಕಿರುವ ವಸ್ತುವನ್ನು ಹೊರಹಾಕಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




