ಕಾಶ್ಮೀರಿ ಪಂಡಿತ್ ರಾಹುಲ್ ಭಟ್​ನನ್ನು ಕೊಂದಿದ್ದ ಇಬ್ಬರು ಉಗ್ರರು ಸೇರಿ ಮೂವರು ಭಯೋತ್ಪಾದಕರ ಎನ್​ಕೌಂಟರ್

| Updated By: ಸುಷ್ಮಾ ಚಕ್ರೆ

Updated on: May 13, 2022 | 7:04 PM

ಇಂದು ಬಂಡಿಪೊರಾದ ಬ್ರಾರ್ ಅರಗಮ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರಾಹುಲ್ ಭಟ್​ನನ್ನು ಕೊಂದ ಇಬ್ಬರು ಉಗ್ರರು ಸೇರಿದಂತೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ.

ಕಾಶ್ಮೀರಿ ಪಂಡಿತ್ ರಾಹುಲ್ ಭಟ್​ನನ್ನು ಕೊಂದಿದ್ದ ಇಬ್ಬರು ಉಗ್ರರು ಸೇರಿ ಮೂವರು ಭಯೋತ್ಪಾದಕರ ಎನ್​ಕೌಂಟರ್
ಜಮ್ಮು ಕಾಶ್ಮೀರದಲ್ಲಿ ಹತ್ಯೆಗೀಡಾದ ರಾಹುಲ್ ಭಟ್
Follow us on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್​ನಲ್ಲಿ ಗುರುವಾರ ನಡೆದ ಉಗ್ರರ ದಾಳಿಯಲ್ಲಿ ಕಾಶ್ಮೀರಿ ಪಂಡಿತ್ (Kashmiri Pandit) ಸಮುದಾಯದ ರಾಹುಲ್ ಭಟ್​ನನ್ನು ಹತ್ಯೆ ಮಾಡಲಾಗಿತ್ತು. ಇಂದು ಬಂಡಿಪೊರಾದ ಬ್ರಾರ್ ಅರಗಮ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರಾಹುಲ್ ಭಟ್​ನನ್ನು ಕೊಂದ ಇಬ್ಬರು ಉಗ್ರರು ಸೇರಿದಂತೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಮೂವರಲ್ಲಿ ಇಬ್ಬರು ಗುರುವಾರ ಕಾಶ್ಮೀರಿ ಪಂಡಿತ್ ಸಮುದಾಯದ ರಾಹುಲ್ ಭಟ್ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಕಾಶ್ಮೀರದ ಪೊಲೀಸರು ಶುಕ್ರವಾರ ಮಧ್ಯಾಹ್ನ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಬಂಡಿಪೊರಾದ ಬ್ರಾರ್ (ಅರಗಮ್) ಪ್ರದೇಶದಲ್ಲಿ ಎನ್‌ಕೌಂಟರ್ ಪ್ರಾರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯದಲ್ಲಿವೆ. ಹೆಚ್ಚಿನ ವಿವರಗಳನ್ನು ತಿಳಿಸಲಾಗುವುದು.” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ
ನಮ್ಮನ್ನು ಕೊಲ್ಲಲೆಂದೇ ಕರೆದುಕೊಂಡು ಬಂದಿರಾ?; ಕಾಶ್ಮೀರಿ ಪಂಡಿತರ ಹತ್ಯೆ ಖಂಡಿಸಿ ಭುಗಿಲೆದ್ದ ಪ್ರತಿಭಟನೆ
Terrorist Attack: ಬದ್ಗಾಮ್​ನ ಸರ್ಕಾರಿ ಕಚೇರಿಯಲ್ಲಿ ಉಗ್ರರ ದಾಳಿ; ಕಾಶ್ಮೀರಿ ಪಂಡಿತನ ಹತ್ಯೆ
ಕಾಶ್ಮೀರಿ ಪಂಡಿತರು ವಾಪಸ್ ಬಂದರೆ ಅವರನ್ನು ಯಾರೂ ಸ್ಥಳಾಂತರ ಮಾಡುವುದಿಲ್ಲ: ಮೋಹನ್ ಭಾಗವತ್

ಜಮ್ಮು ಮತ್ತು ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಸಲಿಂದರ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಯಿತು. ಇನ್ನಿಬ್ಬರು ಪಾರಾಗಿದ್ದಾರೆ. ಕಾಶ್ಮೀರದ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರಕಾರ, ಬುಧವಾರ ತಪ್ಪಿಸಿಕೊಂಡ ಇಬ್ಬರು ಶುಕ್ರವಾರದ ಎನ್‌ಕೌಂಟರ್‌ನಲ್ಲಿ ಸಿಕ್ಕಿಬಿದ್ದಿದ್ದರು.


“ಮೇ 11ರಂದು ಸಲೀಂದರ್ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಇತ್ತೀಚೆಗೆ ನುಸುಳಿದ್ದಾರೆ” ಎಂದು ಅಧಿಕಾರಿ ತಿಳಿಸಿದ್ದಾರೆ.

ಗುರುವಾರ ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ನೌಕರನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಹುಲ್ ಭಟ್ ಎಂಬ ಕಾಶ್ಮೀರಿ ಪಂಡಿತ್​ನನ್ನು ನಂತರ ಶ್ರೀನಗರದ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು. ಕೇಂದ್ರ ಕಾಶ್ಮೀರದ ಚದೂರದಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ‘ಕಾಶ್ಮೀರ ಟೈಗರ್ಸ್’ ಉಗ್ರಗಾಮಿ ಸಂಘಟನೆ ತಾವೇ ಈ ದಾಳಿಯನ್ನು ನಡೆಸಿದ್ದಾಗಿ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ