ಇಂದು 3 ಉಗ್ರರ ಹತ್ಯೆ; ‘2022ರಲ್ಲಿ ಒಟ್ಟು 11 ಭಯೋತ್ಪಾದಕರನ್ನು ಕೊಲ್ಲಲಾಗಿದೆ’- ಪೊಲೀಸ್ ಮೂಲಗಳ ಮಾಹಿತಿ

| Updated By: shivaprasad.hs

Updated on: Jan 07, 2022 | 1:09 PM

ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ಬೇಟೆಯನ್ನು ಮುಂದುವರೆಸಿವೆ. ಇಂದು ಬುದ್ಗಾಮ್‌ನ ಝೋಲ್ವಾ ಕ್ರಾಲ್ಪೋರಾ ಚದೂರ ಪ್ರದೇಶದಲ್ಲಿ ಮೂರು ಜನ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.

ಇಂದು 3 ಉಗ್ರರ ಹತ್ಯೆ; ‘2022ರಲ್ಲಿ ಒಟ್ಟು 11 ಭಯೋತ್ಪಾದಕರನ್ನು ಕೊಲ್ಲಲಾಗಿದೆ’- ಪೊಲೀಸ್ ಮೂಲಗಳ ಮಾಹಿತಿ
ಕಾಶ್ಮೀರ ಐಜಿಪಿ ವಿಜಯ್ ಕುಮಾರ್
Follow us on

ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬುದ್ಗಾಮ್‌ನ ಝೋಲ್ವಾ ಕ್ರಾಲ್ಪೋರಾ ಚದೂರ (Chadoora) ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ  ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಕೊಲ್ಲಲ್ಪಟ್ಟ ಮೂವರೂ ಉಗ್ರರು ಜೈಶ್ ಎ ಮೊಹಮ್ಮದ್ (JeM) ಉಗ್ರ ಸಂಘಟನೆಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ. ಅವರಲ್ಲಿ ಒಬ್ಬನನ್ನು ಶ್ರೀನಗರದ ನಿವಾಸಿ ವಸೀಂ ಎಂದು ಗುರುತಿಸಲಾಗಿದೆ. ಎನ್‌ಕೌಂಟರ್‌ನಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ (IGP Vijay Kumar) ಹೇಳಿದ್ದಾರೆ. ಭಯೋತ್ಪಾದಕರಿಂದ ಮೂರು AK-57 ರೈಫಲ್‌ಗಳು, ಎಂಟು ನಿಯತಕಾಲಿಕೆಗಳು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಎಎನ್​ಐ ವರದಿ ಮಾಡಿದೆ.

ಎಎನ್​ಐ ಮಾಹಿತಿ ಇಲ್ಲಿದೆ:

2022ರಲ್ಲಿ ಇಲ್ಲಿಯವರೆಗೆ ಒಟ್ಟು 11 ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ:
2022 ರಲ್ಲಿ ಇಲ್ಲಿಯವರೆಗೆ ಒಟ್ಟು 11 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಅವರಲ್ಲಿ ಹೆಚ್ಚಿನವರು ಜೆಇಎಂ ಮತ್ತು ಎಲ್‌ಇಟಿಯ ಉನ್ನತ ಕಮಾಂಡರ್‌ಗಳು ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಶುಕ್ರವಾರ ಎಎನ್​ಐಗೆ ತಿಳಿಸಿದ್ದಾರೆ. ಇಂದಿನ ಎನ್​ಕೌಂಟರ್​ ಕುರಿತು ಮಾಹಿತಿ ನೀಡಿದ ಅವರು, ‘‘ಜೆಇಎಂನ ಮೂವರು ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎಂಬ ಗುಪ್ತಚರ ಮಾಹಿತಿ ನಮಗೆ ಸಿಕ್ಕಿತು. ಭಾರತೀಯ ಸೇನೆ ಮತ್ತು ಜಮ್ಮ ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಗುಂಡಿನ ದಾಳಿ ಪ್ರಾರಂಭವಾಯಿತು. ನಂತರ ಸಿಆರ್‌ಪಿಎಫ್ ಕೂಡ ಕಾರ್ಯಾಚರಣೆಗೆ ಕೈಜೋಡಿಸಿತು. ಇಡೀ ರಾತ್ರಿ ಎನ್‌ಕೌಂಟರ್ ನಡೆಯಿತು ಮತ್ತು ಇಂದು ಬೆಳಿಗ್ಗೆ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಯಿತು’’ ಎಂದಿದ್ದಾರೆ.

ಹತ್ಯೆಯಾದವರಲ್ಲಿ ಒಬ್ಬನನ್ನು ಶ್ರೀನಗರಕ್ಕೆ ಸೇರಿದ ವಸೀಂ ಎಂದು ಗುರುತಿಸಲಾಗಿದೆ. ಆತ ಹಲವಾರು ನಾಗರಿಕರ ಹತ್ಯೆಗಳಲ್ಲಿ ಭಾಗಿಯಾಗಿದ್ದ. ಉಳಿದ ಇಬ್ಬರು ಭಯೋತ್ಪಾದಕರ ಗುರುತಿನ ಪ್ರಕ್ರಿಯೆ ನಡೆಯುತ್ತಿದೆ. ಅವರಿಂದ ಮೂರು ಎಕೆ 57 ರೈಫಲ್‌ಗಳು ಮತ್ತು ಎಂಟು ಮ್ಯಾಗಜೀನ್‌ಗಳು ಮತ್ತು ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾವು ತನಿಖೆ ನಡೆಸುತ್ತಿದ್ದೇವೆ ಎಂದು ವಿಜಯ್ ಕುಮಾರ್ ಹೇಳಿದರು. ಈ ಹೊಸ ವರ್ಷದಲ್ಲಿ ಇಲ್ಲಿಯವರೆಗೆ 11 ಭಯೋತ್ಪಾದಕರು ಹತರಾಗಿದ್ದಾರೆ, ಅವರಲ್ಲಿ ಹೆಚ್ಚಿನವರು ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದ ಉನ್ನತ ಕಮಾಂಡರ್‌ಗಳು ಎಂದು ಕುಮಾರ್ ಮಾಹಿತಿ ನೀಡಿದರು.

ಭದ್ರತಾ ಪಡೆಗಳು ಸಿದ್ಧಪಡಿಸಿರುವ ಸ್ಥಳೀಯ ಭಯೋತ್ಪಾದಕರ ಹಿಟ್ ಲಿಸ್ಟ್ ಬಗ್ಗೆ ಕೇಳಿದಾಗ, ಪಟ್ಟಿಯಲ್ಲಿರುವ ಎಲ್ಲಾ ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂದು ಐಜಿಪಿ ತಿಳಿಸಿದರು. ‘‘ನಗರದ ಪಟ್ಟಿಯಲ್ಲಿ ಉಲ್ಲೇಖಿಸಲಾದ ಎಲ್ಲಾ ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಇತ್ತೀಚೆಗೆ ಹೊಸ ಭಯೋತ್ಪಾದಕ ಸೇರಿಕೊಂಡಿದ್ದು, ನಾವು ಶೀಘ್ರದಲ್ಲೇ ಅವನನ್ನೂ ತಟಸ್ಥಗೊಳಿಸುತ್ತೇವೆ’’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:

Apple CEO Salary: ಆಪಲ್ ಕಂಪೆನಿ ಸಿಇಒ ಟಿಮ್ ಕುಕ್ ವೇತನ ಎಷ್ಟು ನೂರು ಕೋಟಿ ಗೊತ್ತಾ?

PM Modi’s Security Breach ಪ್ರಯಾಣದ ದಾಖಲೆಗಳನ್ನು ಸಂರಕ್ಷಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ