ನೀಟ್ ಪಿಜಿ ಮತ್ತು ಯುಜಿ ಕೌನ್ಸೆಲಿಂಗ್ ಅಧಿಸೂಚನೆಗೆ ಅನುಗುಣವಾಗಿ ನಡೆಯಲಿದೆ: ಸುಪ್ರೀಂಕೋರ್ಟ್
ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಒಬಿಸಿ ಕೋಟಾ ಶೇಕಡಾ 27 ಇರಲಿದ್ದು, EWS ಕೋಟಾ ಶೇ.10ರಂತೆ ಕೌನ್ಸೆಲಿಂಗ್ ನಡೆಸಲು ಒಪ್ಪಿಗೆ ನೀಡಲಾಗಿದೆ. ಮುಂದಿನ ವರ್ಷದಿಂದ EWS ಕೋಟಾದಲ್ಲಿ ಅಜಯ್ ಭೂಷಣ್ ಪಾಂಡೆ ಸಮಿತಿ ವರದಿಯಂತೆ ಬದಲಾವಣೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದೆಹಲಿ: ನೀಟ್ ಪಿಜಿ (NEET PG) ಮತ್ತು ಯುಜಿ ವೈದ್ಯಕೀಯ ಕೋರ್ಸ್‌ಗಳು, ಕೌನ್ಸೆಲಿಂಗ್ ಅಧಿಸೂಚನೆಗೆ ಅನುಗುಣವಾಗಿಯೇ ನಡೆಯಲಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಕೋರ್ಸ್‌ಗಳ ಪ್ರವೇಶ ಮೀಸಲಾತಿ ಎತ್ತಿ ಹಿಡಿದ ಸುಪ್ರೀಂಕೋರ್ಟ್, ಅಸ್ತಿತ್ವದಲ್ಲಿರುವ ಇಡಬ್ಲೂಎಸ್ (EWS) ಅಥವಾ ಒಬಿಸಿ (OBC) ಮೀಸಲಾತಿಯ ಆಧಾರದ ಮೇಲೆ 2021-22 ನೇ ಸಾಲಿನ ನೀಟ್ ಪಿಜಿ ಮತ್ತು ಯುಜಿ ಪರೀಕ್ಷೆ ನಡೆಸಲು ಸುಪ್ರೀಂಕೋರ್ಟ್ ಅನುಮತಿಸಿದೆ. ಜತೆಗೆ ಮಾಜಿ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಸಮಿತಿಯ ವರದಿಯನ್ನು ನಾವು ಒಪ್ಪುತ್ತೇವೆ. ಆ ಮೂಲಕ ಅಧಿಸೂಚನೆಗೆ ಅನುಗುಣವಾಗಿ ಕೌನ್ಸೆಲಿಂಗ್ ನಡೆಯಲಿದೆ ಎಂದು ಹೇಳಿದೆ. ಇದರಿಂದಾಗಿ ನಾಲ್ಕು ತಿಂಗಳ ವಿಳಂಬದ ನಂತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಪುನರಾರಂಭ ಸಿಕ್ಕಿದಂತಾಗಿದೆ.
ಪ್ರಸಕ್ತ 2021-22 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಒಬಿಸಿ ಕೋಟಾ ಶೇಕಡಾ 27 ರಷ್ಟು ಇರಲಿದ್ದು, ಇಡಬ್ಲೂಎಸ್ ಕೋಟಾ ಶೇ.10ರಂತೆ ಕೌನ್ಸೆಲಿಂಗ್ ನಡೆಸಲು ಒಪ್ಪಿಗೆ ನೀಡಲಾಗಿದೆ. ಮುಂದಿನ ವರ್ಷದಿಂದ ಇಡಬ್ಲೂಎಸ್ ಕೋಟಾದಲ್ಲಿ ಅಜಯ್ ಭೂಷಣ್ ಪಾಂಡೆ, ಸದಸ್ಯ ಕಾರ್ಯದರ್ಶಿ ICSSR ವಿ ಕೆ ಮಲ್ಹೋತ್ರಾ ಮತ್ತು ಭಾರತ ಸರ್ಕಾರದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಅವರನ್ನು ಒಳಗೊಂಡ ಮೂರು ಸದಸ್ಯರ ಸಮಿತಿ ವರದಿಯಂತೆ ಬದಲಾವಣೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ವಾರ್ಷಿಕ ಆದಾಯ ಮಿತಿ ನಿಗದಿ ಬಗ್ಗೆ ವಿಚಾರಣೆ ನಡೆಯಲಿದೆ. ಆರ್ಥಿಕವಾಗಿ ದುರ್ಬಲ ವರ್ಗ (EWS) ಕೋಟಾದ ವಾರ್ಷಿಕ ಆದಾಯ ಮಿತಿ 8 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಈ ಬಗ್ಗೆ ಈ ವರ್ಷದ ಮಾರ್ಚ್-ಏಪ್ರಿಲ್‌ನಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿದ್ದು, ಸೋಮವಾರದ ತನಕ ಎರಡು ಸಮಿತಿಗಳು ತನಿಖಾ ಕಾರ್ಯಾಚರಣೆ ಮಾಡದಿರುವಂತೆ ಪಂಜಾಬ್ ಹಾಗೂ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಜತೆಗೆ ಪಂಜಾಬ್ ಭೇಟಿ ಸಂಬಂಧಿಸಿ ದಾಖಲೆ ಸುರಕ್ಷಿತವಾಗಿಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಆ ಪ್ರಕಾರ ಸೋಮವಾರ ಮತ್ತೆ ಸುಪ್ರೀಂಕೋರ್ಟ್ ಈ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ಕೇಂದ್ರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಲ್ಲಿಕೆಗಳನ್ನು ಗಮನಿಸಿತು. ಈ ವಿಷಯವು ಪ್ರವೇಶಕ್ಕೆ ಸಂಬಂಧಿಸಿದೆ. ಪದವಿ ವೈದ್ಯಕೀಯ ಕೋರ್ಸ್‌ಗಳು ಮತ್ತು ವಿದ್ಯಾರ್ಥಿಗಳು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ತುಷಾರ್ ಮೆಹ್ತಾ ಹೇಳಿದ್ದರು. ಮೂವರು ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠವು ಇಡಬ್ಲ್ಯೂಎಸ್ ಕೋಟಾ ವಿಷಯವನ್ನು ವಿಚಾರಣೆ ನಡೆಸುತ್ತಿರುವುದರಿಂದ ಸಿಜೆಐ ಅವರು ಅಗತ್ಯವಾದ ಬಲದ ಪೀಠವನ್ನು ಸ್ಥಾಪಿಸಬಹುದು ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಸೋಮವಾರ (ಜನವರಿ 03) ಕೇಂದ್ರಕ್ಕೆ ತಿಳಿಸಿತ್ತು. ಅದರಂತೆ ಇಂದು ಸುಪ್ರೀಂಕೋರ್ಟ್ ಇಡಬ್ಲೂಎಸ್ ಕೋಟಾ ಶೇ.10ರಷ್ಟು ಕೌನ್ಸೆಲಿಂಗ್ ನಡೆಸಲು ಒಪ್ಪಿಗೆ ನೀಡಿದೆ.
ಇದನ್ನೂ ಓದಿ: NEET PG admissions ನೀಟ್ ಪಿಜಿ ಪ್ರವೇಶ: ಆರ್ಥಿಕವಾಗಿ ದುರ್ಬಲ ವರ್ಗ ಕೋಟಾ ಅರ್ಜಿ ವಿಚಾರಣೆ ನಾಳೆ
Published On - 12:12 pm, Fri, 7 January 22