ಜಮ್ಮು ಕಾಶ್ಮೀರದ ಕಥುವಾದಲ್ಲಿ ಸಹೋದ್ಯೋಗಿಯಿಂದಲೇ ಗುಂಡಿನ ದಾಳಿ; ನಾಲ್ವರು ಸಿಐಎಸ್‌ಎಫ್ ಸಿಬ್ಬಂದಿ ದಾರುಣ ಸಾವು

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಬಶೋಲಿಯಲ್ಲಿರುವ ‘ಸೇವಾ ಜಲವಿದ್ಯುತ್ ಯೋಜನೆ’ ಕ್ಯಾಂಪ್‌ನಲ್ಲಿ ಇಂದು ಭದ್ರತಾ ಪಡೆಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಸೇನಾ ಅಧಿಕಾರಿ ಸೇರಿದಂತೆ ನಾಲ್ವರು ಸಿಎಸ್​ಐಎಫ್ ಸಿಬ್ಬಂದಿ ಮೃತಪಟ್ಟಿದ್ದಾರೆ. ವಿದ್ಯುತ್ ಯೋಜನೆಯ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಸಿಐಎಸ್‌ಎಫ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿತ್ತು. ಈ ಗಲಾಟೆಯ ನಂತರ ಜವಾನ ತನ್ನ ಸಹೋದ್ಯೋಗಿಗಳ ಮೇಲೆಯೇ ಶೂಟೌಟ್ ನಡೆಸಿದ್ದಾರೆ. ಈ ದುರಂತದಲ್ಲಿ ಮೃತಪಟ್ಟ ನಾಲ್ವರಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ದರ್ಜೆಯ ಅಧಿಕಾರಿಯೂ ಸೇರಿದ್ದಾರೆ.

ಜಮ್ಮು ಕಾಶ್ಮೀರದ ಕಥುವಾದಲ್ಲಿ ಸಹೋದ್ಯೋಗಿಯಿಂದಲೇ ಗುಂಡಿನ ದಾಳಿ; ನಾಲ್ವರು ಸಿಐಎಸ್‌ಎಫ್ ಸಿಬ್ಬಂದಿ ದಾರುಣ ಸಾವು
CISF Jawans Killed
Image Credit source: TV9

Updated on: Sep 29, 2026 | 9:56 PM

ಕಥುವಾ, ಸೆಪ್ಟೆಂಬರ್ 29: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಇಂದು ಸಂಜೆ ಅತ್ಯಂತ ಆಘಾತಕಾರಿ ಘಟನೆ ಸಂಭವಿಸಿದ್ದು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್​) ಸಿಬ್ಬಂದಿಯೊಬ್ಬರು ತನ್ನ ಸಹೋದ್ಯೋಗಿಗಳ ಮೇಲೆಯೇ ನಡೆಸಿದ ಗುಂಡಿನ ದಾಳಿಗೆ ನಾಲ್ವರು ಸಿಐಎಸ್​ಎಫ್​ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಥುವಾ ಜಿಲ್ಲೆಯ ಬಶೋಲಿ ವ್ಯಾಪ್ತಿಯ ‘ಸೇವಾ 2 ಹೈಡಲ್ ಪವರ್ ಪ್ರಾಜೆಕ್ಟ್’ ಯೂನಿಟ್‌ನಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಸಿಐಎಸ್‌ಎಫ್ ತಂಡದಲ್ಲಿ ಈ ದುರಂತ ಸಂಭವಿಸಿದೆ. ಗುಂಡು ಹಾರಿಸಿದ ಆರೋಪಿಯನ್ನು 2009ರ ಬ್ಯಾಚ್‌ನ ಜವಾನ ಎಂದು ಗುರುತಿಸಲಾಗಿದೆ.

ಆರೋಪಿಯ ಬಂಧನ:

ಗುಂಡಿನ ದಾಳಿ ನಡೆಸಿದ ಆರೋಪಿ ಜವಾನನನ್ನು ಕಥುವಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಥುವಾ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್​ಎಸ್​ಪಿ) ಮೋಹಿತಾ ಶರ್ಮಾ ಅವರು ಗುಂಡಿನ ದಾಳಿಯ ಘಟನೆಯನ್ನು ದೃಢಪಡಿಸಿದ್ದು, ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ವಾಗ್ವಾದಕ್ಕೆ ಹಾಗೂ ಗುಂಡಿನ ದಾಳಿಗೆ ಕಾರಣವಾದ ನಿಖರ ಸನ್ನಿವೇಶಗಳ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ.


ಈ ದಾಳಿಯಲ್ಲಿ ಮೃತಪಟ್ಟವರನ್ನು ಅಸಿಸ್ಟೆಂಟ್ ಕಮಾಂಡೆಂಟ್ ಅಂಕಿತ ಕುಮಾರ್ ಪಾಂಡೆ, ಸಬ್‌-ಇನ್ಸ್‌ಪೆಕ್ಟರ್ ಲಕ್ಷ್ಮಣ್ ಸಿಂಗ್, ಕಾನ್ಸ್‌ಟೇಬಲ್ ಸಂಜೀವ್ ಕುಮಾರ್ ಹಾಗೂ ಕಾನ್ಸ್‌ಟೇಬಲ್ ಮೊಹಮ್ಮದ್ ರಫೀಕ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಹಣ ದೋಚಲು ಬಂದ ಕಳ್ಳರಿಗೆ ಶಾಕ್; ಎಟಿಎಂ ಬೂತ್​ನೊಳಗೆ ಕೂಡಿ ಹಾಕಿದ ಬ್ಯಾಂಕ್ ಮ್ಯಾನೇಜರ್!

ಈ ದುರಂತದ ಬೆನ್ನಲ್ಲೇ, ಸಂಸತ್ ಭವನದ ಸಂಕೀರ್ಣವೂ ಸೇರಿದಂತೆ ದೇಶದ ಅತ್ಯಂತ ಸೂಕ್ಷ್ಮ ಘಟಕಗಳಲ್ಲಿ ನಿಯೋಜನೆಗೊಳ್ಳುವ ಸಿಐಎಸ್‌ಎಫ್ ಸಿಬ್ಬಂದಿಗೆ ವಿಶೇಷ ಸೈಕೋಮೆಟ್ರಿಕ್ ಮೌಲ್ಯಮಾಪನಗಳನ್ನು ನಡೆಸಲು ಸಿಐಎಸ್‌ಎಫ್ ನಿರ್ಧರಿಸಿದೆ.

ಸಿಬ್ಬಂದಿಯಲ್ಲಿ ಕಂಡುಬರುವ ನಡವಳಿಕೆಯ ಹಠಾತ್ ಬದಲಾವಣೆಗಳು, ತೀವ್ರ ಮಾನಸಿಕ ಒತ್ತಡ ಮತ್ತು ಮಾನಸಿಕ ತುರ್ತು ಪರಿಸ್ಥಿತಿಗಳ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸಲು ವೈದ್ಯಕೀಯ ಅಧಿಕಾರಿಗಳು ಮತ್ತು ಯುನಿಟ್ ಕಮಾಂಡರ್‌ಗಳಿಗೆ ತರಬೇತಿ ನೀಡಲಾಗುತ್ತದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us