ಫೂಟ್ಪಾತ್ ಮೇಲೆ ಕುಳಿತಿದ್ದ ನಾಲ್ವರು ಮಹಿಳೆಯರ ಪ್ರಾಣ ಅಪ್ರಾಪ್ತನಿಂದಾಗಿ ಹೋಗಿದೆ. ಅತ್ಯಂತ ವೇಗವಾಗಿ ಕಾರು ಚಾಲನೆ ಮಾಡಿದ ಬಾಲಕ, ವಾಹನವನ್ನು ಫೂಟ್ಪಾತ್ ಮೇಲೆ ಹರಿಸಿ, ಅಲ್ಲಿ ಕುಳಿತಿದ್ದ ಮಹಿಳೆಯರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆ ತೆಲಂಗಾಣದ (Telangana) ಕರೀಮ್ನಗರ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾಗಿ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರಿನಲ್ಲಿ ಒಟ್ಟು ಮೂವರು ಅಪ್ರಾಪ್ತರು ಇದ್ದರು. ಅದರಲ್ಲಿ ಒಬ್ಬಾತ ಕಾರು ಡ್ರೈವ್ ಮಾಡುತ್ತಿದ್ದ. ಆದರೆ ನಿಯಂತ್ರಣ ತಪ್ಪಿದ ಕಾರಣ ಫೂಟ್ಪಾತ್ ಮೇಲೆ ಹರಿಯಿತು. ಅಲ್ಲಿ ಕುಳಿತಿದ್ದ ನಾಲ್ವರು ಮಹಿಳೆಯರ ಪ್ರಾಣ ಹೋಗಿದೆ. ಸದ್ಯ ಕಾರಿನಲ್ಲಿದ್ದ ಮೂವರು ಅಪ್ರಾಪ್ತರ ವಿರುದ್ಧ ಐಪಿಎಸ್ ಸೆಕ್ಷನ್ 304ರಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲ, ಕಾರು ಡ್ರೈವ್ ಮಾಡುತ್ತಿದ್ದ ಬಾಲಕನ ತಂದೆ ವಿರುದ್ಧವೂ ಕೇಸ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ನಾಲ್ವರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಮುಂಜಾನೆ 6.50ರ ಹೊತ್ತಿಗೆ ಘಟನೆ ನಡೆದಿದೆ. ಆ ಪ್ರದೇಶದಲ್ಲಿ ದಟ್ಟವಾದ ಮಂಜು ಇತ್ತು. ಸರಿಯಾಗಿ ದಾರಿ ಕಾಣುತ್ತಿರಲಿಲ್ಲ. ಈ ಮಧ್ಯೆ ಬಾಲಕ ತನ್ನ ಕಣ್ಣನ್ನು ಉಜ್ಜಿಕೊಳ್ಳಲು ಸ್ಟೀರಿಂಗ್ನಿಂದ ಕೈ ತೆಗೆದಾದ ನಿಯಂತ್ರಣ ಕಳೆದುಕೊಂಡಿದ್ದಾನೆ. ಆಗ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು, ಅಲ್ಲೇ ಫೂಟ್ಪಾತ್ನ ತಾತ್ಕಾಲಿಕ ಗುಡಿಸಲಿನಲ್ಲಿದ್ದ ಮಹಿಳೆಯರಿಗೆ ಡಿಕ್ಕಿಯಾಗಿದೆ. 14 ವರ್ಷದ ಹುಡುಗಿ ಸೇರಿ 27-32 ವರ್ಷದೊಳಗಿನ ನಾಲ್ವರು ಮೃತಪಟ್ಟಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಡ್ರೈವಿಂಗ್ಗೆ ಕುಳಿತಿದ್ದ ಬಾಲಕ ಸ್ಟೀರಿಂಗ್ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಲ್ಲದೆ, ಬ್ರೇಕ್ ಬದಲಿಗೆ ಆಕ್ಸಿಲರೇಟರ್ ಪ್ರೆಸ್ ಮಾಡಿದ್ದು, ದೊಡ್ಡ ಎಡವಟ್ಟಿಗೆ ಕಾರಣವಾಯಿತು ಎಂದಿದ್ದಾರೆ. ಈ ಬಾಲಕರೆಲ್ಲ 9ನೇ ತರಗತಿಯವರಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಕಾರು ಅಲ್ಲೇ ಬಿಟ್ಟು, ಎಲ್ಲರೂ ಓಡಿಹೋಗಿದ್ದರು. ನಂತರ ಅವರನ್ನು ಹಿಡಿಯಲಾಯಿತು ಎಂದೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಿರ್ಬಂಧಿತ ಬದುಕಿಗೆ ಕಡೆಗೂ ಸಿಕ್ತು ಬಿಗ್ ರಿಲೀಫ್; ಕೆಲವೆಡೆ ಆಕ್ರೋಶ, ಶಾಲೆಗಳತ್ತ ವಿದ್ಯಾರ್ಥಿಗಳು
Published On - 8:55 am, Mon, 31 January 22