ಸಂಸತ್ ಎದುರು 50 ಗಂಟೆಗಳ ಪ್ರತಿಭಟನೆಯಲ್ಲಿ ಮೊದಲ ರಾತ್ರಿ ಕಳೆದ​ ಸಂಸದರು; ಇಂದು ಬೆಳಗ್ಗೆ ಡಿಎಂಕೆಯಿಂದ ತಿಂಡಿ ವ್ಯವಸ್ಥೆ

| Updated By: ಸುಷ್ಮಾ ಚಕ್ರೆ

Updated on: Jul 28, 2022 | 10:07 AM

ಸಂಸತ್​ನ ಹೊರಗೆ ಖಾಲಿ ಜಾಗದಲ್ಲಿ, ನೆಲದ ಮೇಲೆ ಮಲಗಲು ಸಂಸದರು ತಯಾರಿ ನಡೆಸುತ್ತಿರುವ ಫೋಟೋ ವೈರಲ್ ಆಗಿದೆ. ವಿರೋಧ ಪಕ್ಷಗಳು ಅಮಾನುಗೊಂಡಿರುವ ತಮ್ಮ ಸಂಸದರಿಗೆ ಇಡ್ಲಿ-ಸಾಂಬಾರ್, ಚಿಕನ್ ತಂದೂರಿ, ಕ್ಯಾರೆಟ್ ಹಲ್ವಾ ಮತ್ತು ಹಣ್ಣುಗಳ ವ್ಯವಸ್ಥೆ ಮಾಡಿವೆ.

ಸಂಸತ್ ಎದುರು 50 ಗಂಟೆಗಳ ಪ್ರತಿಭಟನೆಯಲ್ಲಿ ಮೊದಲ ರಾತ್ರಿ ಕಳೆದ​ ಸಂಸದರು; ಇಂದು ಬೆಳಗ್ಗೆ ಡಿಎಂಕೆಯಿಂದ ತಿಂಡಿ ವ್ಯವಸ್ಥೆ
ಸಂಸತ್​ ಎದುರು ಅಮಾನತುಗೊಂಡ ಸಂಸದರ ಪ್ರತಿಭಟನೆ
Follow us on

ನವದೆಹಲಿ: ರಾಜ್ಯಸಭಾ ಕಲಾಪಕ್ಕೆ (Rajya Sabha Session) ಅಡ್ಡಪಡಿಸಿದ ಹಿನ್ನೆಲೆಯಲ್ಲಿ ರಾಜ್ಯಸಭೆಯ ವಿರೋಧಪಕ್ಷದ 20 ಸಂಸದರನ್ನು ಅಧಿವೇಶನದಿಂದ ಅಮಾನತುಗೊಳಿಸಲಾಗಿತ್ತು. ತಮ್ಮನ್ನು ರಾಜ್ಯಸಭಾ ಅಧ್ಯಕ್ಷರು ಅಮಾನತುಗೊಳಿಸಿರುವುದನ್ನು ವಿರೋಧಿಸಿ 50 ಗಂಟೆಗಳ ರಿಲೇ ಪ್ರತಿಭಟನೆಯ ಭಾಗವಾಗಿ ಅಮಾನತುಗೊಂಡ ಸಂಸದರು ಸಂಸತ್ತಿನ ಆವರಣದ ಹೊರಾಂಗಣದಲ್ಲಿ ನಿನ್ನೆ ಮೊದಲ ರಾತ್ರಿಯನ್ನು ಕಳೆದಿದ್ದಾರೆ. ಸಂಸತ್​​ ಹೊರಗೆ ಯಾವುದೇ ಸೂರಿಲ್ಲದೆ, ನೆಲದ ಮೇಲೇ ಮಲಗಿದ್ದ ಸಂಸದರು ಇಂದು ಬೆಳಗ್ಗೆ ಎದ್ದಕೂಡಲೆ ತಮ್ಮ ಮೊಬೈಲ್‌ಗಳನ್ನು ಪರಿಶೀಲಿಸುವುದರಲ್ಲಿ ನಿರತರಾಗಿದ್ದರು.

ರಾಜ್ಯಸಭಾ ಕಲಾಪದಿಂದ ಸೋಮವಾರ ಮತ್ತು ಮಂಗಳವಾರ ಅಮಾನತುಗೊಂಡಿರುವ 20 ಸಂಸದರಲ್ಲಿ ಟಿಎಂಸಿಯಿಂದ 7, ಡಿಎಂಕೆಯಿಂದ 6, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) 3, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) 2 ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ)ದ ತಲಾ ಒಬ್ಬರು ಸೇರಿದ್ದಾರೆ.

ಮಳೆ ಬರಬಹುದೆಂಬ ಭಯದಿಂದ ಪ್ರತಿಭಟನಾ ನಿರತ ಸಂಸದರು ಟೆಂಟ್‌ಗಾಗಿ ಮನವಿ ಮಾಡಿದರೂ ಆವರಣದೊಳಗೆ ಯಾವುದೇ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ನಿರಾಕರಿಸಿದರು. ಆದರೆ, ಸಂಸತ್ತಿನ ಗ್ರಂಥಾಲಯದ ಸ್ನಾನಗೃಹದ ಶೌಚಾಲಯವನ್ನು ಬಳಸಲು ಅವರಿಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಸದನದಲ್ಲಿ ಕಾಂಗ್ರೆಸ್ ಚರ್ಚೆಗೆ ಸಿದ್ಧವಾದರೆ ಆ 19 ಸಂಸದರನ್ನು ವಾಪಸ್ ಕರೆಸಿಕೊಳ್ಳಲು ನಾವು ಸಿದ್ಧ : ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ್ ಜೋಶಿ

ಸಂಸತ್​ನ ಹೊರಗೆ ಖಾಲಿ ಜಾಗದಲ್ಲಿ, ನೆಲದ ಮೇಲೆ ಮಲಗಲು ಸಂಸದರು ತಯಾರಿ ನಡೆಸುತ್ತಿರುವ ಫೋಟೋ ವೈರಲ್ ಆಗಿದೆ. ಅಮಾನತುಗೊಂಡ ಸಂಸದರಿಗೆ 50 ಗಂಟೆಗಳ ಕಾಲ ಪ್ರತಿಭಟನೆ ಮಾಡದಂತೆ ಸಲಹೆ ನೀಡಲಾಗಿದೆ. ವಿರೋಧ ಪಕ್ಷಗಳು ಅಮಾನುಗೊಂಡಿರುವ ತಮ್ಮ ಸಂಸದರಿಗೆ ಇಡ್ಲಿ-ಸಾಂಬಾರ್, ಚಿಕನ್ ತಂದೂರಿ, ಕ್ಯಾರೆಟ್ ಹಲ್ವಾ ಮತ್ತು ಹಣ್ಣುಗಳ ವ್ಯವಸ್ಥೆ ಮಾಡಿವೆ.

ಇಂದು ಡಿಎಂಕೆ ಉಪಹಾರದ ಉಸ್ತುವಾರಿ ವಹಿಸಿದೆ. ಇಂದು ಮಧ್ಯಾಹ್ನ ಟಿಆರ್‌ಎಸ್ ಮತ್ತು ಆಮ್ ಆದ್ಮಿ ಪಕ್ಷ ಭೋಜನದ ವ್ಯವಸ್ಥೆ ಮಾಡಲಿದೆ. ಎಎಪಿ ಸಂಸದರನ್ನು ಸುಡುವ ಬಿಸಿಲಿನಿಂದ ರಕ್ಷಿಸಲು ಟೆಂಟ್ ನಿರ್ಮಿಸುವ ಜವಾಬ್ದಾರಿಯನ್ನು ಹೊಂದಿತ್ತು. ಆದರೆ ಅದಕ್ಕೆ ಅನುಮತಿ ನೀಡಲು ಅಧಿಕಾರಿಗಳು ನಿರಾಕರಿಸಿದರು.

ಅಮಾನತುಗೊಂಡಿರುವ 20 ರಾಜ್ಯಸಭಾ ಸದಸ್ಯರು ಬುಧವಾರ ಸಂಸತ್ತಿನ ಸಂಕೀರ್ಣದೊಳಗೆ 50 ಗಂಟೆಗಳ ರಿಲೇ ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ. ತಮ್ಮ ಅಮಾನತನ್ನು ಹಿಂಪಡೆಯಲು ಸದನದಲ್ಲಿ ತಮ್ಮ ಸದಸ್ಯರ ವರ್ತನೆಗೆ ವಿಷಾದ ವ್ಯಕ್ತಪಡಿಸುವ ಸಭಾಪತಿಯ ಪ್ರಸ್ತಾಪವನ್ನು ಪ್ರತಿಪಕ್ಷಗಳು ನಿರಾಕರಿಸಿದವು ಎಂದು ಪಿಟಿಐ ವರದಿ ಮಾಡಿದೆ.