ಸದನದಲ್ಲಿ ಕಾಂಗ್ರೆಸ್ ಚರ್ಚೆಗೆ ಸಿದ್ಧವಾದರೆ ಆ 19 ಸಂಸದರನ್ನು ವಾಪಸ್ ಕರೆಸಿಕೊಳ್ಳಲು ನಾವು ಸಿದ್ಧ : ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ್ ಜೋಶಿ
Pralhad Joshi: ಸದನದಲ್ಲಿ ಧರಣಿ ಕೈಬಿಟ್ಟು ಚರ್ಚೆ ನಡೆಸ್ತೇವೆ ಎಂಬ ಭರವಸೆ ಕೈ ನಾಯಕರಿಂದ ಬರಲಿ. ಕೂಡಲೇ ಅಮಾನತ್ತುಗೊಂಡಿರುವ 19 ಸಂಸದರನ್ನು ವಾಪಸ್ ಸದನಕ್ಕೆ ಕರೆಸಿಕೊಳ್ಳಲು ನಾವು ಸಿದ್ಧ ಎಂದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ
ಸಂಸತ್ತಿನಲ್ಲಿ ಸಕಾರಾತ್ಮಕ ಚರ್ಚೆಗೆ ನಾವು ಯಾವಾಗಲೂ ಸಿದ್ಧ, ಆದರೆ ಕಾಂಗ್ರೆಸ್ ಪಕ್ಷಕ್ಕೆ (Congress) ಸದನದ ಕಲಾಪ ( Parliament Session) ನಡೆಯೋದು ಬೇಕಾಗಿಲ್ಲ, ಹೀಗಾಗಿಯೇ ಕಲಾಪಕ್ಕೆ ಅಡ್ಡಿಪಡಿಸುತ್ತಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ( Pralhad Joshi) ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಹೀಗೊಂದು ಭರವಸೆ ನೀಡಲಿ… ಸದನದಲ್ಲಿ ಧರಣಿ ಕೈಬಿಟ್ಟು ಚರ್ಚೆ ನಡೆಸ್ತೇವೆ ಎಂಬ ಭರವಸೆ ಕೈ ನಾಯಕರಿಂದ ಬರಲಿ. ಕೂಡಲೇ ಅಮಾನತ್ತುಗೊಂಡಿರುವ 19 ಸಂಸದರನ್ನು ವಾಪಸ್ ಸದನಕ್ಕೆ ಕರೆಸಿಕೊಳ್ಳಲು ನಾವು ಸಿದ್ಧ. ಆದರೆ ಅದರ ಬಳಿಕವೂ… ಪ್ರತಿಪಕ್ಷಗಳು ಮತ್ತೆ ಸದನದ ಕಲಾಪಗಳಿಗೆ ತೊಂದರೆ ಉಂಟಾಗುವಂತೆ ಮಾಡಬಾರದು. ವಿಶೇಷವಾಗಿ ಕಾಂಗ್ರೆಸ್ ಸದನದಲ್ಲಿ ಕಲಾಪಕ್ಕೆ ಅಡ್ಡಿಪಡಿಸಲ್ಲ ಎಂಬ ಗ್ಯಾರಂಟಿ ಕೊಡಲಿ. ಸ್ಪೀಕರ್ ಅವರ ಅನುಮತಿ ಪಡೆದು ಅಮಾನತ್ತುಗೊಂಡಿರುವ 19 ಸಂಸದರನ್ನ ಮುಂಗಾರು ಅಧಿವೇಶನಕ್ಕೆ ನಾವು ವಾಪಸ್ ಕರೆಸಿಕೊಳ್ಳಲು ತಯಾರಿದ್ದೇವೆ ಎಂದು ಅವರು ಹೇಳಿದ್ದಾರೆ.
ಇಂದು ಕೂಡ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸೋನಿಯಾ ಗಾಂಧಿ ಅವರ ಇ.ಡಿ. ವಿಚಾರಣೆ, ಜಿ.ಎಸ್.ಟಿ ದರ ಏರಿಕೆ ವಿಚಾರಗಳನ್ನ ಮುಂದಿಟ್ಟು ಪ್ರತಿಭಟನೆ ಮುಂದುವರಿಸಿದರು.
ಕಾಂಗ್ರೆಸ್ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಸಕಾರಾತ್ಮಕ ಚರ್ಚೆಗೆ ನಾವು ತಯಾರಿದ್ದೇವೆ. ಮುಂಗಾರು ಅಧಿವೇಶನ ಆರಂಭವಾದ ದಿನದಿಂದಲೂ ನಾವು ಇದನ್ನೇ ಹೇಳಿದ್ದೇವೆ. ಆಹಾರ ಪದಾರ್ಥಗಳ ಜಿ.ಎಸ್.ಟಿ ದರ ಏರಿಕೆ ಕುರಿತು ಚರ್ಚೆಗೆ ನಾವು ಸಿದ್ಧರಿದ್ದೇವೆ. ಚರ್ಚೆ ನಡೆಸುವ ಪ್ರಕ್ರಿಯೆ ಪ್ರಾರಂಭವಾಗಲಿ. ನಿರ್ಮಲಾ ಸೀತಾರಾಮನ್ ಅವರು ಕೋವಿಡ್ ನಿಂದ ಚೇತರಿಕೆ ಕಾಣುತ್ತಿದ್ದಾರೆ. ನಾಳೆಯೊಳಗೆ ಹಣಕಾಸು ಸಚಿವರು ಸದನದ ಕಲಾಪದಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ. ಆದರೆ ಕಾಂಗ್ರೆಸ್ ಪಕ್ಷವು ವೃಥಾ ಸದನದ ಸಮಯವನ್ನ ವ್ಯರ್ಥ ಮಾಡುತ್ತಿದೆ ಎಂದು ಜೋಶಿ ಬೇಸರ ವ್ಯಕ್ತಪಡಿಸಿದ್ದಾರೆ.
ಇ.ಡಿ. ತನಿಖೆ ಎದುರಿಸುತ್ತಿರುವ ಮಹಾರಾಣಿ ಹಾಗೂ ಯುವರಾಜ ಕಾನೂನಿಗಿಂತ ಆತೀತರಲ್ಲ
ಇನ್ನು ಸೋನಿಯಾ ಗಾಂಧಿ ಅವರ ಇಡಿ ವಿಚಾರಣೆ ಕುರಿತು ಪ್ರತಿಕ್ರಿಯಿಸಿರುವ ಜೋಶಿ, ಅವರೇಕೆ ತನಿಖೆಯಿಂದ ತಪ್ಪಿಸಿಕೊಳ್ಳಲು ಬಯಸುತ್ತಿದ್ದಾರೆ..? ತನಿಖೆ ಪೂರ್ಣಗೊಳ್ಳಲಿ ಆಗ ಮಾತ್ರ ಸತ್ಯ ಹೊರಬರುತ್ತದೆ. ಮಹಾರಾಣಿಯಾಗಲಿ ಅಥವಾ ಯುವರಾಜನಾಗಲಿ ಯಾರೂ ಪ್ರಜಾಪ್ರಭುತ್ವ ಮತ್ತು ಕಾನೂನಿಗಿಂತ ಮೇಲಲ್ಲ ಎಂದು ಪ್ರಲ್ಹಾದ್ ಜೋಶಿ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷವು ತನ್ನನ್ನು ನ್ಯಾಯಾಂಗ ಮತ್ತು ಕಾನೂನಿಗಿಂತ ಮೇಲಿದೆ ಎಂದು ಪರಿಗಣಿಸುತ್ತದೆ. ಇದು ಸರಿಯಲ್ಲ, ಸುಪ್ರೀಂ ಕೋರ್ಟ್ ಗೆ ಪ್ರಕರಣವನ್ನ ಸೋನಿಯಾ- ರಾಹುಲ್ ಗಾಂಧಿ ಅವರು ತೆಗೆದುಕೊಂಡು ಹೋಗಿದ್ದರೋ ಇಲ್ವೋ..? ಇದರ ಹೊರತಾಗಿಯೂ ಕಾಂಗ್ರೆಸ್ ಸದನದಲ್ಲಿ ಅನಗತ್ಯ ಧರಣಿ ನಡೆಸುತ್ತಿರುವುದು ಏಕೆ..? ಮಹಾರಾಣಿ ಮತ್ತು ಯುವರಾಜ ಅವರನ್ನು ವಿಚಾರಣೆಗೆ ಒಳಪಡಿಸುತ್ತಿರುವುದು ಕಾಂಗ್ರೆಸ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ ಎಂದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪರ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರಿಗೆ ಪ್ರಲ್ಹಾದ ಜೋಶಿ ತಿರುಗೇಟು ನೀಡಿದ್ದಾರೆ.
Published On - 6:14 pm, Wed, 27 July 22