8 ವಾರಗಳವರೆಗೆ ಶೇ 50ರಷ್ಟು ವಿಮಾನಗಳು ಮಾತ್ರ ಕಾರ್ಯನಿರ್ವಹಿಸುವಂತೆ ಸ್ಪೈಸ್ ಜೆಟ್ಗೆ ಡಿಜಿಸಿಎ ಆದೇಶ
ಈ ಆದೇಶದಿಂದ ನಮಗೇನೂ ಪರಿಣಾಮವುಂಟಾಗುವುದಿಲ್ಲ. ಇದು ಪ್ರಯಾಣ ಜಾಸ್ತಿ ಇಲ್ಲದ ಹೊತ್ತು, ಯಾವುದೇ ವಿಮಾನಗಳನ್ನು ರದ್ದು ಮಾಡುವುದಿಲ್ಲ ಎಂದು ಸ್ಪೈಸ್ ಜೆಟ್ ಉತ್ತರಿಸಿದೆ.
ದೆಹಲಿ: ವಿಮಾನದಲ್ಲಿ ಆಗಾಗ್ಗೆ ಸುರಕ್ಷಾ ದೋಷಗಳು ಕಂಡುಬಂದ ಹಿನ್ನಲೆಯಲ್ಲಿ ಎಂಟು ವಾರಗಳವರೆಗೆ ಶೇ 50ರಷ್ಟು ವಿಮಾನಗಳನ್ನು ಮಾತ್ರ ಕಾರ್ಯನಿರ್ವಹಿಸುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಸ್ಪೈಸ್ ಜೆಟ್ಗೆ ಬುಧವಾರ ಆದೇಶಿಸಿದೆ. ಆದಾಗ್ಯೂ ಈ ಆದೇಶದಿಂದ ನಮಗೇನೂ ಪರಿಣಾಮವುಂಟಾಗುವುದಿಲ್ಲ. ಇದು ಪ್ರಯಾಣ ಜಾಸ್ತಿ ಇಲ್ಲದ ಹೊತ್ತು, ಯಾವುದೇ ವಿಮಾನಗಳನ್ನು ರದ್ದು ಮಾಡುವುದಿಲ್ಲ ಎಂದು ಸ್ಪೈಸ್ ಜೆಟ್ ಉತ್ತರಿಸಿದೆ. ಹಲವಾರು ಬಾರಿ ಸ್ಪಾಟ್ ಚೆಕ್, ತಪಾಸಣೆ ನಡೆಸಿ ಮತ್ತು ಶೋಕಾಸ್ ನೋಟಿಸ್ಗೆ ಸ್ಪೈಸ್ ಜೆಟ್ ಸಲ್ಲಿಸಿದ ಉತ್ತರಗಳನ್ನು ನೋಡಿ ಸುರಕ್ಷಿತ ಮತ್ತು ವಿಶ್ವಾಸಾರ್ಹ ವಿಮಾನಯಾನ ಸೇವೆಗಾಗಿ ಸ್ಪೈಸ್ ಜೆಟ್ 8 ವಾರಗಳ ವರೆಗೆ ಶೇ 50 ವಿಮಾನಗಳನ್ನು ಮಾತ್ರ ಕಾರ್ಯ ನಿರ್ವಹಿಸುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಆದೇಶದಲ್ಲಿ ಹೇಳಿದೆ. ಈ ಎಂಟು ವಾರಗಳಲ್ಲಿ ಡಿಜಿಸಿಎ ಸ್ಪೈಸ್ ಜೆಟ್ ವಿಮಾನದ ಮೇಲೆ ತೀವ್ರ ಕಣ್ಗಾವಲಿರಿಸಲಿದೆ. ಇತ್ತೀಚಿನ ದಿನಗಳಲ್ಲಿ ವಿಮಾನಯಾನ ಸಂಸ್ಥೆಯೊಂದು ಎದುರಿಸಿದ ಅತಿ ಕಠಿಣ ಕ್ರಮ ಇದಾಗಿದೆ.
ಶೇ 50ಕ್ಕಿಂತ ಹೆಚ್ಚು ವಿಮಾನಗಳನ್ನು ಕಾರ್ಯನಿರ್ವಹಿಸುವಂತಿಲ್ಲ. ಹಾಗೆ ಮಾಡುವುದಾದರೆ ಅದನ್ನು ಸುರಕ್ಷಿತ ಮತ್ತು ಸಮರ್ಥವಾಗಿ ನಿರ್ವಹಿಸಲು ಸೂಕ್ತ ತಾಂತ್ರಿಕ ಬೆಂಬಲ ಮತ್ತು ಆರ್ಥಿಕ ಸಂಪನ್ಮೂಲ ಇದೆ ಎಂಬುದನ್ನು ಡಿಜಿಸಿಎಗೆ ಮನವರಿಕೆ ಮಾಡಬೇಕು ಎಂದು ಡಿಜಿಸಿಎ ಹೇಳಿದೆ.
ಸ್ಪೈಸ್ ಜೆಟ್ ಸುರಕ್ಷಿತ, ಸಮರ್ಥ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ವಿಮಾನ ಸೇವೆ ನೀಡಲು ವಿಫಲವಾಗಿದೆ ಎಂದು ಡಿಜಿಸಿಎ ಹೇಳಿದೆ.
Published On - 6:25 pm, Wed, 27 July 22