ಉಕ್ರೇನ್​​ನಲ್ಲಿ ಇನ್ನೂ ಇದ್ದಾರೆ 50 ಭಾರತೀಯರು, ವಾಪಸ್​ ಬರುವ ಇಚ್ಛೆ ಇರುವುದು ಕೆಲವೇ ಮಂದಿಗೆ ಮಾತ್ರ: ಸಚಿವೆ ಮೀನಾಕ್ಷಿ ಲೇಖಿ

| Updated By: Lakshmi Hegde

Updated on: Mar 31, 2022 | 7:54 PM

ಇಂದು ರಾಜ್ಯಸಭೆಯಲ್ಲಿ ಮೀನಾಕ್ಷಿ ಲೇಖಿ ಈ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನ್​ ವಶಪಡಿಸಿಕೊಂಡಾಗ ಅಲ್ಲಿಂದ ಭಾರತೀಯರನ್ನು, ನಿರಾಶ್ರಿತರನ್ನು ವಾಪಸ್​ ಕರೆದುಕೊಂಡುಬಂದ ಬಗ್ಗೆಯೂ ಮಾತುಗಳನ್ನಾಡಿದ್ದಾರೆ.

ಉಕ್ರೇನ್​​ನಲ್ಲಿ ಇನ್ನೂ ಇದ್ದಾರೆ 50 ಭಾರತೀಯರು, ವಾಪಸ್​ ಬರುವ ಇಚ್ಛೆ ಇರುವುದು ಕೆಲವೇ ಮಂದಿಗೆ ಮಾತ್ರ: ಸಚಿವೆ ಮೀನಾಕ್ಷಿ ಲೇಖಿ
ಮೀನಾಕ್ಷಿ ಲೇಖಿ
Follow us on

ರಷ್ಯಾ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್​​ನಲ್ಲಿ (Russia Attack On Ukraine) ಇನ್ನೂ 50 ಮಂದಿ ಭಾರತೀಯರು ಇದ್ದಾರೆ. ಅದರಲ್ಲಿ ಕೆಲವೇ ಮಂದಿ ಮಾತ್ರ ತಾಯ್ನಾಡಿಗೆ ವಾಪಸ್​ ಬರುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದಾರೆ. ಇನ್ನು ಯಾರೆಲ್ಲ ಭಾರತಕ್ಕೆ ಮರಳಲು ಸಿದ್ಧರಾಗಿದ್ದಾರೆಯೋ ಅವರಿಗೆ ಉಕ್ರೇನ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಎಲ್ಲ ರೀತಿಯ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದೂ ತಿಳಿಸಿದ್ದಾರೆ. ಉಕ್ರೇನ್​​ನಲ್ಲಿ ಭಾರತದ 20 ಸಾವಿರಕ್ಕೂ ಮಂದಿ ಇದ್ದರು. ಅದರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ವೈದ್ಯಕೀಯ ಶಿಕ್ಷಣ ಭಾರತಕ್ಕಿಂತ ಉಕ್ರೇನ್​​ನಲ್ಲಿ ಕಡಿಮೆ ಖರ್ಚಿನಲ್ಲಿ ಮುಗಿಯುತ್ತದೆ ಎಂಬ ಕಾರಣಕ್ಕೆ ಅನೇಕರು ಆ ದೇಶ ಸೇರಿಕೊಂಡಿದ್ದರು. ಆದರೆ ರಷ್ಯಾ ಆಕ್ರಮಣ ಮಾಡಿದ ಬಳಿಕ ಸಂಕಷ್ಟಕ್ಕೀಡಾಗಿದ್ದರು. ಹಾಸ್ಟೆಲ್​ಗಳ ಬಂಕರ್​ಗಳಲ್ಲಿ ಉಳಿದುಕೊಂಡು ತಮ್ಮನ್ನು ರಕ್ಷಿಸಿಕೊಂಡಿದ್ದರು. ಆಹಾರ, ನೀರು, ಶೌಚಗೃಹ ಇಲ್ಲದೆ ಪರದಾಡಿಬಿಟ್ಟಿದ್ದರು. ಅಷ್ಟೆಲ್ಲದರ ಮಧ್ಯೆ ಭಾರತ ಸರ್ಕಾರ ಅಲ್ಲಿರುವ ಸುಮಾರು 22,500 ಜನರನ್ನು ಆಪರೇಶನ್ ಗಂಗಾ ಎಂಬ ಕಾರ್ಯಾಚರಣೆ ಮೂಲಕ ಭಾರತಕ್ಕೆ ವಾಪಸ್​ ಕರೆತಂದಿದೆ. ಇದರಲ್ಲಿ ಭಾರತೀಯ ವಾಯುಸೇನೆ ಪಾಲ್ಗೊಂಡಿದ್ದು ವಿಶೇಷ.

ಹಾಗೇ ಇಂದು ರಾಜ್ಯಸಭೆಯಲ್ಲಿ ಮೀನಾಕ್ಷಿ ಲೇಖಿ ಈ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನ್​ ವಶಪಡಿಸಿಕೊಂಡಾಗ ಅಲ್ಲಿಂದ ಭಾರತೀಯರನ್ನು, ನಿರಾಶ್ರಿತರನ್ನು ವಾಪಸ್​ ಕರೆದುಕೊಂಡುಬಂದ ಬಗ್ಗೆಯೂ ಮಾತುಗಳನ್ನಾಡಿದ್ದಾರೆ. ಕಳೆದ ಆಗಸ್ಟ್​​ನಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡರು. ಆಗ ಕೇಂದ್ರ ಸರ್ಕಾರ ಆಪರೇಶನ್​ ದೇವಿ ಶಕ್ತಿ ಕಾರ್ಯಾಚರಣೆ ಮೂಲಕ ಸುಮಾರು 699 ಜನರನ್ನು ಸ್ಥಳಾಂತರ ಮಾಡಿತು. ಅದರಲ್ಲಿ 448 ಮಂದಿ ಭಾರತದವರಾಗಿದ್ದರೆ, 206 ಅಫ್ಘಾನಿಸ್ತಾನದವರೇ ಆದ ಅಲ್ಪಸಂಖ್ಯಾತರು. ಅಂದರೆ ಹಿಂದು, ಸಿಖ್​ ಸಮುದಾಯದವರು. ಸುಮಾರು 15 ಮಂದಿ ನೇಪಾಳ, ಉಗಾಂಡಾ ಮತ್ತು ಲೆಬನನ್​ ನಾಗರಿಕರಾಗಿದ್ದರು. 2021ರ ಆಗಸ್ಟ್​ 16-25ರವರೆಗೆ ಒಟ್ಟು ಏಳು ವಿಮಾನಗಳು ಕಾರ್ಯಾಚರಣೆ ನಡೆಸಿವೆ. ಹಾಗೇ ಡಿಸೆಂಬರ್​ 10ರಂದು ಕೊನೇ ಫ್ಲೈಟ್ ಅಫ್ಘಾನ್​​ನಿಂದ ಭಾರತಕ್ಕೆ ಬಂದಿದೆ ಎಂದೂ ಹೇಳಿದರು.

ಇದನ್ನೂ ಓದಿ: ಸೋಲಾಗುತ್ತದೆ ಎಂದು ಗೊತ್ತಿದ್ದರೂ ರಾಹುಲ್ ಇಲ್ಲಿಗೆ ಬರುವ ಧೈರ್ಯ ತೋರಿಸಿರುವುದು ಮೆಚ್ಚಬೇಕಾದದ್ದೇ: ಅರುಣ್ ಸಿಂಗ್