ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟವರಲ್ಲಿ ಇನ್ನೂ 6 ಮಂದಿಯ ಮೃತದೇಹದ ಗುರುತು ಪತ್ತೆ; ಹುಟ್ಟೂರಿಗೆ ಕಳಿಸಲು ಸಿದ್ಧತೆ
ಸದ್ಯ 10 ಸೇನಾ ನಾಯಕರ ಮೃತದೇಹ ದೆಹಲಿಯ ಕಂಟೋನ್ಮೆಂಟ್ನ ಆಸ್ಪತ್ರೆಯ ಶವಾಗಾರದಲ್ಲಿ ಇದೆ. ಅದರಲ್ಲಿ ಇದೀಗ 6 ಸೇನಾನಾಯಕರ ಗುರುತು ಪತ್ತೆಯಾಗಿದ್ದು, ಹೆಸರುಗಳು ಹೀಗಿವೆ..
ಚೆನ್ನೈ:ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತರಾದವರ ಗುರುತು ಪತ್ತೆ ಹಚ್ಚುವ ಕಾರ್ಯ ಇನ್ನೂ ನಡೆಯುತ್ತಿದ್ದು, ಸದ್ಯ ಆರು ಮಂದಿಯ ಗುರುತು ಪತ್ತೆಯಾಗಿದೆ. ಹೆಲಿಕಾಪ್ಟರ್ ಬೆಂಕಿ ಹೊತ್ತು ಉರಿದ ಹಿನ್ನೆಲೆಯಲ್ಲಿ ಮೃತದೇಹಗಳೆಲ್ಲ ಸಂಪೂರ್ಣವಾಗಿ ಸುಟ್ಟು ಹೋಗಿವೆ. ಹೀಗಾಗಿ ಯಾವ ಮೃತದೇಹ ಯಾರದ್ದು ಎಂದು ಗೊತ್ತಾಗುತ್ತಿಲ್ಲ. ಕುಟುಂಬಗಳಿಗೆ ಪಾರ್ಥಿವ ಶರೀರ ಹಸ್ತಾಂತರಕ್ಕೂ ಮೊದಲು ಅದರ ಗುರುತು ಪತ್ತೆ ಹಚ್ಚಬೇಕಾಗಿದೆ. ಇದೀಗ ಗುರುತು ಪತ್ತೆಯಾದ ಮೃತದೇಹಗಳನ್ನು ಅಂತ್ಯಕ್ರಿಯೆಗಾಗಿ ಕಳಿಸಲಾಗಿದೆ.
ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿ 13 ಸೇನಾಧಿಕಾರಿಗಳು ಮೃತಪಟ್ಟಿದ್ದಾರೆ. ಸದ್ಯ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ರಾವತ್ ರಕ್ಷಣಾ ಸಲಹೆಗಾರರಾಗಿದ್ದ ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್ ಅವರ ಅಂತ್ಯಕ್ರಿಯೆ ನಿನ್ನೆ ದೆಹಲಿಯ ಬ್ರಾರ್ ಸ್ಕ್ವೇರ್ ಚಿತಾಗಾರದಲ್ಲಿ, ಸಕಲ ಮಿಲಿಟರಿ ಗೌರವಗಳೊಂದಿಗೆ ನೆರವೇರಿದೆ.
ಸದ್ಯ 10 ಸೇನಾ ನಾಯಕರ ಮೃತದೇಹ ದೆಹಲಿಯ ಕಂಟೋನ್ಮೆಂಟ್ನ ಆಸ್ಪತ್ರೆಯ ಶವಾಗಾರದಲ್ಲಿ ಇದೆ. ಅದರಲ್ಲಿ ಇದೀಗ ಪತ್ತೆಯಾಗಿದ್ದು, ವಿಂಗ್ ಕಮಾಂಡರ್ ಚೌಹಾಣ್, ಜ್ಯೂನಿಯರ್ ವಾರಂಟ್ ಆಫೀಸರ್ ಪ್ರದೀಪ್, ಸ್ಕ್ವಾಡ್ರನ್ ಲೀಡರ್ ಕುಲದೀಪ್, ಜ್ಯೂನಿಯರ್ ವಾರಂಟ್ ಆಫೀಸರ್ ದಾಸ್, ಲ್ಯಾನ್ಸ್ ನಾಯಕ್ ಬಿ.ಸಾಯಿ ತೇಜಾ ಮತ್ತು ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅವರದ್ದು. ಅದರಲ್ಲಿ ಚೌಹಾಣ್ ಮೃತದೇಹ ಬೆಳಗ್ಗೆ 9.45ಕ್ಕೆ ಆಗ್ರಾ ತಲುಪಲಿದೆ. ಪ್ರದೀಪ್ ಅವರ ಪಾರ್ಥಿವ ಶರೀರ ಬೆಳಗ್ಗೆ 11 ಗಂಟೆ ಹೊತ್ತಿಗೆ ಸುಲುರ್, ಕುಲದೀಪ್ ಮೃತದೇಹ ಬೆಳಗ್ಗೆ 11.45ಕ್ಕೆ ಪಿಲಾನಿ, ದಾಸ್ ಮೃತಶರೀರ ಮಧ್ಯಾಹ್ನ 1ಗಂಟೆಗೆ ಭುವನೇಶ್ವರಕ್ಕೆ, ಬಿ.ಸಾಯಿ ತೇಜ ಮೃತದೇಹ ಮಧ್ಯಾಹ್ನ 12.30ಕ್ಕೆ ಬೆಂಗಳೂರು ಮತ್ತು ವಿವೇಕ್ ಕುಮಾರ್ ಅವರ ಪಾರ್ಥಿವ ಶರೀರ ಬೆಳಗ್ಗೆ 11.30ಕ್ಕೆ ಗಗ್ಗಲ್ಗೆ ತಲುಪಲಿದೆ. ಇವರೆಲ್ಲರ ಮೃತದೇಹಗಳನ್ನೂ ಆಯಾ ಸ್ಥಳಗಳಿಗೆ ವಾಯುಮಾರ್ಗದ ಮೂಲಕ ಸ್ಥಳಾಂತರ ಮಾಡಲಾಗುವುದು ಎಂದು ಸೇನಾ ಮೂಲಗಳು ಹೇಳಿವೆ. ಹಾಗೇ, ಅವರ ಹುಟ್ಟೂರಲ್ಲಿ ಸಕಲ ಸೇನಾ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.