ಮುಂಬೈನಲ್ಲಿ ಪತ್ತೆಯಾಗುತ್ತಿರುವ ಹೊಸ ಕೊವಿಡ್ 19 ಕೇಸ್(Covid 19 Cases)ಗಳಲ್ಲಿ ಬಹುತೇಕ ಒಮಿಕ್ರಾನ್ ಪ್ರಕರಣಗಳೇ ಆಗಿವೆ ಎಂದು ಕೊವಿಡ್ 19 ಟೆಸ್ಟ್ ಸಮೀಕ್ಷೆ ಹೇಳಿದೆ. ಒಟ್ಟಾರೆ 280 ಮಾದರಿಗಳನ್ನು ಪರೀಕ್ಷಿಸಿದಾಗ ಅದರಲ್ಲಿಶೇ.89ರಷ್ಟು ಒಮಿಕ್ರಾನ್ ಸೋಂಕು ಪತ್ತೆಯಾಗಿತ್ತು. ಶೇ.8ರಷ್ಟು ಡೆಲ್ಟಾ ಉತ್ಪನ್ನಗಳು ಮತ್ತು ಶೇ.3ರಷ್ಟು ಡೆಲ್ಟಾ ರೂಪಾಂತರಿಗಳು ಮತ್ತು ಉಪವಿಧಗಳಾಗಿವೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ತಿಳಿಸಿದೆ.
ಇತ್ತೀಚಿಗೆ ಒಟ್ಟು 373 ಮಾದರಿಗಳನ್ನು ಟೆಸ್ಟ್ ಮಾಡಲಾಗಿತ್ತು. ಅದರಲ್ಲಿ 280 ಮಾದರಿಗಳು ಬೃಹನ್ ಮುಂಬೈ ಕಾರ್ಪೋರೇಶನ್ನವರದ್ದು. ಅದರಲ್ಲಿ ಶೇ.89ರಷ್ಟು ಅಂದರೆ ಸುಮಾರು 248 ಮಂದಿಯಲ್ಲಿ ಒಮಿಕ್ರಾನ್ (ಉಪವಿಧ) ಸೋಂಕು ಪತ್ತೆಯಾಗಿದೆ. ಶೇ.8ರಷ್ಟು ಅಂದರೆ 21 ಜನರಲ್ಲಿ ಡೆಲ್ಟಾ ಸೋಂಕಿನ ವಿಧ ಕಂಡುಬಂದಿದೆ. ಉಳಿದ 11 ರಲ್ಲಿ ಇಬ್ಬರಲ್ಲಿ ಡೆಲ್ಟಾ ರೂಪಾಂತರಿಯ ಉಪ-ಪ್ರಕಾರಗಳಿವೆ ಎಂದು ಮುನ್ಸಿಪಲ್ ಸಾರ್ವಜನಿಕ ಆರೋಗ್ಯ ವಿಭಾಗ ಮಾಹಿತಿ ನೀಡಿದೆ. ಹಾಗೇ, ಈ 280 ಜನರಲ್ಲಿ ಶೇ..34ರಷ್ಟು ಅಂದರೆ 96 ಸೋಂಕಿತರು 21-24ವರ್ಷದವರಾಗಿದ್ದಾರೆ. ಶೇ. 28ರಷ್ಟು ಅಥವಾ 79 ಮಂದಿ 41-60 ವರ್ಷದವರು. ಕೇವಲ 22 ಮಂದಿ ಮಾತ್ರ 20ಕ್ಕಿಂತಲೂ ಕೆಳಗಿನ ವಯಸ್ಸಿನವರು ಎಂದು ತಿಳಿಸಿದೆ.
ಇನ್ನೊಂದೆಡೆ ಈ 280 ಮಂದಿಯಲ್ಲಿ ಕೇವಲ 7 ಜನರು ಒಂದೇ ಡೋಸ್ ಕೊರೊನಾ ಲಸಿಕೆ ಪಡೆದವರು. ಅದರಲ್ಲಿ 6ಮಂದಿಗೆ ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದಿದೆ. ಅದರಲ್ಲೂ ಇಬ್ಬರು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ 174 ರೋಗಿಗಳು ಎರಡೂ ಡೋಸ್ ಕೊರೊನಾ ಲಸಿಕೆ ಪಡೆದವರೇ ಆಗಿದ್ದಾರೆ. ಹಾಗಿದ್ದಾಗ್ಯೂ 89 ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಕಾಯಿತು. ಅದರಲ್ಲಿ ಇಬ್ಬರು ಆಕ್ಸಿಜನ್ ಸಪೋರ್ಟ್ನಲ್ಲಿ ಚಿಕಿತ್ಸೆ ಪಡೆದಿದ್ದಾರೆ ಮತ್ತು 15 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು ಎಂದೂ ಸಮೀಕ್ಷೆ ವರದಿ ಹೇಳಿದೆ. ಇನ್ನುಳಿದ 99 ಮಂದಿ ಇದುವರೆಗೂ ಕೊವಿಡ್ 19 ಲಸಿಕೆ ತೆಗೆದುಕೊಂಡವರೇ ಅಲ್ಲ. ಅವರಲ್ಲಿ 76 ರೋಗಿಗಳು ಆಸ್ಪತ್ರೆಗೆ ದಾಖಲಾಗಬೇಕಾಯಿತು. 12 ರೋಗಿಗಳಿಗೆ ಆಕ್ಸಿಜನ್ ಸಪೋರ್ಟ್ ಬೇಕಾಯಿತು. 5ಮಂದಿ ಐಸಿಯುಗೆ ದಾಖಲಾಗಬೇಕಾಯಿತು ಎಂದೂ ತಿಳಿಸಿದ್ದಾರೆ.
ಮುಂಬೈನಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಅದನ್ನು ನಿಯಂತ್ರಿಸಲು ಬಿಎಂಸಿ ಹಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಸರಿಯಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೈಯನ್ನು ಸರಿಯಾಗಿ ಹ್ಯಾಂಡ್ವಾಶ್ನಿಂದ ತೊಳೆದುಕೊಳ್ಳಬೇಕು. ಗುಂಪುಗೂಡುವನ್ನು ಬಿಡಬೇಕು ಎಂಬಿತ್ಯಾದಿ ನಿಯಮಗಳನ್ನು ಜಾರಿಗೊಳಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ ಸೇರಿದ ತಂಗಿ ಪರ ಪ್ರಚಾರಕ್ಕೆ ಇಳಿದ ಸೋನು ಸೂದ್; ನೀವು ಮಾತು ತಪ್ಪಿದಿರಿ ಎಂದ ಫ್ಯಾನ್ಸ್