ಒಂದೇ ಕ್ಷಣದಲ್ಲಿ ಸಾವು ಕಣ್ಣೆದುರು ಬಂದು ಹೋದರೆ..! ಇಂಥದ್ದೊಂದು ಅನುಭವವನ್ನು ಉತ್ತರಾಖಂಡ್ನಲ್ಲಿ ಸುಮಾರು 14ಕ್ಕೂ ಹೆಚ್ಚು ಮಂದಿ ಒಂದೇ ಸಲಕ್ಕೆ ಪಡೆದಿದ್ದಾರೆ. ಸ್ವಲ್ಪೇಸ್ವಲ್ಪದರಲ್ಲಿ ಬಹುದೊಡ್ಡ ದುರಂತದಿಂದ ಪಾರಾಗಿದ್ದಾರೆ. ಅದರ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು, ನೋಡಿದರೆ ಭಯ ಹುಟ್ಟದೆ ಇರದು. ಉತ್ತರಾಖಂಡ್ ರಾಜ್ಯದ ನೈನಿತಾಲ್ ಎಂಬಲ್ಲಿ ಬಹುದೊಡ್ಡ ಗುಡ್ಡದ ಬದಿಯಲ್ಲಿರುವ ಚಿಕ್ಕದಾದ ಡಾಂಬರು ರಸ್ತೆಯಲ್ಲಿ ಬಸ್ ಹೋಗುತ್ತಿತ್ತು. ಇದರಲ್ಲಿ 14ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಅದು ಕಾಡು ಹೆಚ್ಚಾಗಿರುವ ಪ್ರದೇಶ..ನೋಡನೋಡುತ್ತಿದ್ದಂತೆ ಬಸ್ನ ಎದುರೇ ಗುಡ್ಡೆ ಕುಸಿದು ಬಿದ್ದಿದೆ. ಬೆಟ್ಟದ ಮೇಲಿಂದ ಕಲ್ಲು, ಮರಗಳೆಲ್ಲ ಉದುರುದುರಿ ಬುಡಸಮೇತ ಕಿತ್ತು ರಸ್ತೆಗೆ ಉರುಳಿವೆ. ಬಸ್ ಚೂರೇಚೂರು ಅಂತರ ಹಿಂದೆ ಇದ್ದಿದ್ದರಿಂದ ಬಚಾವ್ ಆಗಿದೆ.
ಮೊದಲು ಸಣ್ಣ ಪ್ರಮಾಣದಲ್ಲಿ ಮಣ್ಣು ಉದುರಿ ರಸ್ತೆಗೆ ಬಿತ್ತು. ನೋಡನೋಡುತ್ತಿದ್ದಂತೆ ಇಡೀ ಗುಡ್ಡ ಕುಸಿತವಾಗಿದ್ದನ್ನು ನೀವು ಕೆಳಗಿನ ವಿಡಿಯೋದಲ್ಲಿ ನೋಡಬಹುದು. ಬಸ್ ಚಾಲಕ ತಡಮಾಡದೆ ವಾಹವನ್ನು ಹಿಮ್ಮುಖವಾಗಿ ಚಲಾಯಿಸಿದ್ದಾನೆ. ಆದರೆ ಅದರಲ್ಲಿದ್ದ ಪ್ರಯಾಣಿಕರು ಚಲಿಸುತ್ತಿದ್ದ ಬಸ್ನಿಂದ ಕೆಳಗಿಳಿದು, ತಮ್ಮ ಬ್ಯಾಗ್ ಹಿಡಿದು ಪ್ರಾಣಭಯದಿಂದ ಓಡಿಹೋಗಿದ್ದಾರೆ. ಕೆಲವರಂತೂ ಬಸ್ ಕಿಟಿಕಿಯಿಂದಲೇ ಹಾರಿ, ಓಡಿದ್ದಾರೆ.
ನೈನಿತಾಲ್ನಲ್ಲಿ ಈ ಘಟನೆ ನಡೆದದ್ದು ಶುಕ್ರವಾರ ಎಂದು ಹೇಳಲಾಗಿದೆ. ಯಾರದ್ದೂ ಜೀವ ಹಾನಿಯಾಗಿಲ್ಲ. ಅದೃಷ್ಟವಶಾತ್ ಯಾರಿಗೂ ಗಾಯವೂ ಆಗಿಲ್ಲ. ಆ ಗುಡ್ಡ ದೊಡ್ಡದಾಗಿದ್ದು, ಅದರ ಕೆಳಗೇ ಬಸ್ ನಿಂತಿದೆ. ಒಂದು ಬದಿ ಮಾತ್ರ ಕುಸಿತವಾಗಿದೆ. ಹಾಗೊಮ್ಮೆ ಇಡೀ ಗುಡ್ಡ ಕುಸಿದಿದ್ದರೆ ಬಸ್ ಮಣ್ಣಿನಡಿ ಸಿಲುಕಿ, ಪ್ರಯಾಣಿಕರನ್ನು ಉಳಿಸುವುದೂ ದೊಡ್ಡ ಸಾಹಸವೇ ಆಗುತ್ತಿತ್ತು ಎಂದು ಹೇಳಲಾಗಿದೆ. ಅತಿಯಾದ ಮಳೆಯಿಂದ ಇಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಸದ್ಯ ಈ ರಸ್ತೆ ಬ್ಲಾಕ್ ಆಗಿದೆ.
ಇಲ್ಲಿದೆ ನೋಡಿ ಭಯಾನಕ ವಿಡಿಯೋ:
#WATCH | Uttarakhand: A bus carrying 14 passengers narrowly escaped a landslide in Nainital on Friday. No casualties have been reported. pic.twitter.com/eyj1pBQmNw
— ANI (@ANI) August 21, 2021
ಅತಿಯಾದ ಮಳೆಯ ಎಚ್ಚರಿಕೆ
ಉತ್ತರಾಖಂಡ್ನಲ್ಲಿ ಎರಡು ದಿನಗಳ ಕಾಲ ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ಶುಕ್ರವಾರ (ಆಗಸ್ಟ್ 20) ನೀಡಿದೆ. ಇದರೊಂದಿಗೆ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (SDRF) ಕೂಡ ಸಜ್ಜಾಗಿದ್ದು, ಎಲ್ಲ ರೀತಿಯ ರಕ್ಷಣಾ ವ್ಯವಸ್ಥೆಗೆ ಬೇಕದ ಸಿದ್ಧತೆ ಮಾಡಿಕೊಂಡಿದೆ. ಇನ್ನು ಉತ್ತರಾಖಂಡ್ನ ಕೆಲವು ಪ್ರದೇಶಗಳಲ್ಲಿ ಗುಡುಗು-ಮಿಂಚು ಸಹಿತ ಭರ್ಜರಿ ಮಳೆಯಾಗುವ ಎಚ್ಚರಿಕೆಯನ್ನೂ ಐಎಂಡಿ ನೀಡಿದೆ.
ಇದನ್ನೂ ಓದಿ: Pro Kabaddi League: ಹರಾಜಿಗೂ ಮುನ್ನ ತಮ್ಮ ನಾಯಕರನ್ನು ಕೈಬಿಟ್ಟ 9 ತಂಡಗಳು! ಬೆಂಗಳೂರಿನಲ್ಲೇ ಉಳಿದ ಪವನ್ ಶೆರಾವತ್
Raksha Bandhan: ‘ಡಾಲಿ’ ಧನಂಜಯ ಜೊತೆ ಮಂಗಳಮುಖಿಯರ ರಕ್ಷಾ ಬಂಧನ ಹಬ್ಬದ ಸಂಭ್ರಮ
Published On - 3:11 pm, Sat, 21 August 21