ಈಶಾನ್ಯ ದೆಹಲಿಯ ಖಜೂರಿ ಖಾಸ್ನಲ್ಲಿ ನಡೆದಿದ್ದ ಗಲಭೆ ಪ್ರಕರಣದಲ್ಲಿ ಜೈಲು ಸೇರಿದ್ದ ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ಗೆ ದೆಹಲಿ ಹೈಕೋರ್ಟ್ ಇಂದು ಜಾಮೀನು ನೀಡಿದೆ. ಗಲಭೆಯಲ್ಲಿ ಭಾಗಿಯಾಗಿದ್ದ ಇತರ ವ್ಯಕ್ತಿಗಳನ್ನು ಗುರುತಿಸಬೇಕು ಎನ್ನುವ ಉದ್ದೇಶದಿಂದ ಖಾಲಿದ್ ಅವರನ್ನು ಜೈಲಿನಲ್ಲಿ ಬಂಧಿಸಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರ ಹಿಂದೆ ದೊಡ್ಡ ಪಿತೂರಿಯೇ ನಡೆದಿತ್ತು. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಕುರಿತಾಗಿ, ಪ್ರಚಾರವನ್ನು ಜಾಗತಿಕವಾಗಿ ಹರಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡಿದ ಸಂರ್ಭದಲ್ಲಿಯೇ ದೆಹಲಿ ಗಲಭೆಗೆ ಉತ್ತೇಜನ ನೀಡುವ ಪಿತೂರಿಯನ್ನು ಉಮರ್ ಖಾಲಿದ್ ನಡೆಸಿದ್ದರು ಎಂದು ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಿದ್ದರು.
ಎಫ್ಐಆರ್ ತಿಳಿಸಿರುವ ಪ್ರಕಾರ, ಕೋಮು ಹಿಂಸಾಚಾರವು ಪೂರ್ವ ನಿರ್ಧರಿತ ಪಿತೂರಿ. ಖಾಲಿದ್ ಎರಡು ಸ್ಥಳಗಳಲ್ಲಿ ಪ್ರಚೋದನಾಕಾರಿ ಭಾಷಣಗಳನ್ನು ನೀಡಿದ್ದರು. ಮತ್ತು ನಾಗರಿಕರಿಗೆ ಬೀದಿಗಳಲ್ಲಿ ಬಂದು ರಸ್ತೆಗಳನ್ನು ನಿರ್ಬಂಧಿಸುವಂತೆ ಮನವಿ ಮಾಡಿದ್ದರು ಎಂದು ಚಾರ್ಜ್ಶೀಟ್ನಲ್ಲಿ ಹೇಳಲಾಗಿತ್ತು.
ಫೆಬ್ರವರಿ ತಿಂಗಳಲ್ಲಿ ದೆಹಲಿಯಲ್ಲಿ ಗಲಭೆ ನಡೆದಿತ್ತು. ಈ ವೇಳೆ 53 ಜನರು ಮೃತಪಟ್ಟು ಅನೇಕರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಅಕ್ಟೋಬರ್ನಲ್ಲಿ ಖಾಲಿದ್ ಅವರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ದೆಹಲಿ ಗಲಭೆ: ಈ ವ್ಯಕ್ತಿಯಿಂದ ಜೆಎನ್ಯು ವಿದ್ಯಾರ್ಥಿಗೆ ಹೋಗಿತ್ತು ಒಂದು ಸೂಚನೆ..ಪೊಲೀಸರು ಬಿಚ್ಚಿಟ್ಟ ಸ್ಫೋಟಕ ಮಾಹಿತಿ