ಒಂದೇ ಬೆಡ್ನಲ್ಲಿ ಇಬ್ಬರಿಗೆ ಚಿಕಿತ್ಸೆ, ಆಸ್ಪತ್ರೆ ಹೊರಗೆ ಹೆಣಗಳು; ಕೊರೊನಾದಿಂದ ಪರಿಸ್ಥಿತಿ ಭೀಕರ
Covid-19 Death In Delhi: ತಮ್ಮ ಅಜ್ಜನಿಗೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಕೊಡಿಸಲು ಆಗುತ್ತಿಲ್ಲ ಎಂಬ ಪ್ರಶಾಂತ್ ಮೆಹ್ತಾ ಅವರ ಚಿಂತೆ ಬೇಗನೇ ಕಳೆದುಹೋಯಿತು. ಏಕೆಂದರೆ ಆಸ್ಪತ್ರೆಗೆ ಸೇರಿದ ಐದಾರು ಗಂಟೆಗಳಲ್ಲೇ ಅವರ ಅಜ್ಜನ ಇಹಲೋಕ ತ್ಯಜಿಸಿದರು.
ದೆಹಲಿ: ಹಾಸಿಗೆಗಳ ಕೊರತೆ, ಆಮ್ಲಜನಕದ ಕೊರತೆ.. ಒಂದೇ ಹಾಸಿಗೆಯಲ್ಲಿ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಮಲಗಿರುವ ಇಬ್ಬರು ಕೊರೊನಾ ಸೋಂಕಿತರು. ಇದು ದೆಹಲಿಯ ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯ ಕರುಣಾಜನಕ ಪರಿಸ್ಥಿತಿ. ಕೊವಿಡ್ ಸೋಂಕಿತರಿಗಾಗಿಯೇ ಸುಮಾರು 1500 ಹಾಸಿಗೆ ವ್ಯವಸ್ಥೆಯಿರುವ ದೆಹಲಿಯ ಸರ್ಕಾರಿ ಆಸ್ಪತ್ರೆ ಇದೀಗ ಕೊರೊನಾ ಸೋಂಕಿತರಿಂದ ತುಂಬಿ ತುಳುಕುತ್ತಿದೆ.
‘ನನಗೆ ಗೊತ್ತು, ನಮ್ಮ ಆಸ್ಪತ್ರೆಯಲ್ಲಿ ಮಿತಿಮೀರಿದ, ಹಿಡಿಯಲಾರದಷ್ಟು ಕೊರೊನಾ ಸೋಂಕಿತರು ತುಂಬಲಿದ್ದಾರೆ. ಈಗಲೇ ಹಾಸಿಗೆಯೂ ಸೇರಿ ನಮ್ಮಲ್ಲಿರುವ ಎಲ್ಲಾ ವ್ಯವಸ್ಥೆಗಳ ಸಾಮರ್ಥ್ಯ ಭರ್ತಿಯಾಗಿದೆ’ ಎಂದು ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸುರೇಶ್ ಕುಮಾರ್ ಹೇಳುತ್ತಾರೆ. ಈ ಕುರಿತು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮೊದಲು ನಮ್ಮಲ್ಲಿ 54 ಹಾಸಿಗೆಗಳಿದ್ದವು. ಸದ್ಯ ದಾಖಲಾಗಿರುವ ಕೊವಿಡ್ ಸೋಂಕಿತರ ಪೈಕಿ 300 ಸೋಂಕಿತರ ಸ್ಥಿತಿ ಗಂಭೀರವಾಗಿದೆ. ಬೆಡ್ಗಳ ಕೊರತೆಯಿಂದ ಕೊವಿಡ್ ಇಲ್ಲದ ರೋಗಿಗಳೂ ಕೊವಿಡ್ ಸೋಂಕಿತರ ಜತೆ ಬೆಡ್ ಹಂಚಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಇಂದು ಒಂದೇ ದಿನ ಗಂಭೀರ ಆರೋಗ್ಯ ಸಮಸ್ಯೆಗಳಿರುವ 158 ರೋಗಿಗಳು ನಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸುರೇಶ್ ಕುಮಾರ್ ಬೇಸರದಿಂದ ವಿವರಿಸುತ್ತಾರೆ.
2021ರ ಮೊದಲ ಮೂರು ತಿಂಗಳಲ್ಲಿ ಕೊರೊನಾ ತಡೆ ಮಾರ್ಗದರ್ಶಿ ಸೂತ್ರಗಳನ್ನು ನಿಧಾನವಾಗಿ ಸಡಿಲಿಸಲಾಯಿತು. ಈ ಸಡಿಲಿಸುವಿಕೆಯೇ ಇಂದಿನ ಗಂಭೀರ ಸ್ಥಿತಿಗೆ ಕಾರಣ. ಜನರು ಮೊದಲಿನಂತೆಯೇ ಎಗ್ಗಿಲ್ಲದೇ ತಿರುಗಾಟ ಆರಂಭಿಸಿದರು. ಕೊರೊನಾ ತಡೆ ನಿಯಮಗಳನ್ನು ಮರೆತುಬಿಟ್ಟರು. ಸಾರ್ವಜನಿಕರ ಈ ವರ್ತನೆಯೇ ಕೊರೊನಾ ಹೆಚ್ಚಲು ಕಾರಣವಾಯಿತು ಎನ್ನುತ್ತಾರೆ ಸುರೇಶ್ ಕುಮಾರ್. ಅವರ ಮಾತಿನ ಮಧ್ಯೆಯೇ ಕಿಟಕಿಯಿಂದ ದೃಷ್ಟಿ ಹಾಯಿಸಿದರೆ ಮೃತಪಟ್ಟ ರೋಗಿಗಳ ಸಂಬಂದಿಕರು ಶವ ಪಡೆಯಲು ಸುಡು ಬಿಸಿಲಿನಲ್ಲಿ ಕಾಯುತ್ತಿರುವ ದೃಶ್ಯ ಎಂಥವರ ಕರುಳನ್ನೂ ಹಿಂಡುತ್ತದೆ.
ಆಸ್ಪತ್ರೆ ಆವರಣದಲ್ಲಿ ಮಾಧ್ಯಮ ಪ್ರತಿನಿಧಿ ಜೊತೆಗೆ ಮಾತನಾಡಿದ ಪ್ರಶಾಂತ್ ಮೆಹ್ರಾ ಅವರ ಮಾತು ಎಂಥವರ ಮನಸ್ಸನ್ನೂ ಕಲಕದೆ ಇರಲಾರದು. ಪ್ರಶಾಂತ್ ಮೆಹ್ರಾ ತಮ್ಮ 90 ವರ್ಷದ ವೃದ್ಧ ಅಜ್ಜನನ್ನು ಆಸ್ಪತ್ರೆಗೆ ಸೇರಿಸಬೇಕಿತ್ತು. ಎಷ್ಟೇ ಪ್ರಯತ್ನಿಸಿದರೂ ಆಸ್ಪತ್ರೆಗೆ ದಾಖಲು ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ, ಮಧ್ಯವರ್ತಿಯೊಬ್ಬರ ಮೂಲಕ ತಮ್ಮ ಅಜ್ಜನನ್ನು ಆಸ್ಪತ್ರೆಗೆ ಸೇರಿಸಿದರು. ಆದರೂ ಆಸ್ಪತ್ರೆಯಲ್ಲಿ ಅಷ್ಟು ಬೇಗ ಚಿಕಿತ್ಸೆ ದೊರೆಯಲಿಲ್ಲ. ತಮ್ಮ ಅಜ್ಜನಿಗೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಕೊಡಿಸಲು ಆಗುತ್ತಿಲ್ಲ ಎಂಬ ಪ್ರಶಾಂತ್ ಮೆಹ್ತಾ ಅವರ ಚಿಂತೆ ಬೇಗನೇ ಕಳೆದುಹೋಯಿತು. ಏಕೆಂದರೆ ಐದಾರು ಗಂಟೆಗಳಲ್ಲೇ ಅವರ ಅಜ್ಜ ಪ್ರಾಣಬಿಟ್ಟರು.
ಕೊರೊನಾ ಸೋಂಕಿನಿಂದ ದೇಶದ ವೈದ್ಯಕೀಯ ವ್ಯವಸ್ಥೆಯ ಹುಳುಕುಗಳು ಮತ್ತೊಮ್ಮೆ ಬಯಲಾಗುತ್ತಿವೆ. ತಿದ್ದಿಕೊಳ್ಳಲು ಬಹಳ ಸಮಯವಿಲ್ಲ. ದೆಹಲಿಯಲ್ಲಿ ಇಂದು 16,699 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇಂದು ಒಂದೇ ದಿನ ಕೊರೊನಾದಿಂದ 112 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಪರೀಕ್ಷೆಯ ಪಾಸಿಟಿವ್ ರೇಟ್ ಶೇ 20.22ರಷ್ಟಿದ್ದು ದೇಶದ ರಾಜಧಾನಿ ಒಂದರಲ್ಲೇ 54,309 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ: Maski By Election: ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪ್ರಚಾರ ಮಾಡಿದ ಗ್ರಾಮಗಳಲ್ಲಿ ಕೊರೊನಾ ಟೆಸ್ಟ್ಗೆ ಸೂಚನೆ
KSET Exam Date 2021: ಮುಂದೂಡಿದ್ದ ಕೆಸೆಟ್ ಪರೀಕ್ಷಾ ದಿನಾಂಕ ಪ್ರಕಟ
(Lok Nayak Jai Prakash Narayan Hospital Gasping for air, two men wearing oxygen masks share a bed in a government hospital in Delhi )