ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ 50 ಮಂದಿಗೆ ನಮಾಜ್ ಮಾಡಲು ಅವಕಾಶ: ದೆಹಲಿ ಹೈಕೋರ್ಟ್
Nizamuddin Markaz: ದೆಹಲಿ ವಕ್ಫ್ ಮಂಡಳಿಯ ವಕೀಲ ವಜೀಹ್ ಶಫೀಕ್ ಅವರು ಮಸೀದಿಯಲ್ಲಿ ರಂಜಾನ್ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಮಸೀದಿಯ ಮೊದಲ ಮಹಡಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ನಮಾಜ್ ಮಾಡಬಹುದು ಎಂದು ಹೇಳಿದೆ.
ದೆಹಲಿ: ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ದಿನಕ್ಕೆ 5 ಬಾರಿ 50 ಮಂದಿಗೆ ನಮಾಜ್ ಮಾಡಬಹುದು ಎಂದು ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ. ರಾಜ್ಯದ ರಾಜಧಾನಿ ದೆಹಲಿಯಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಏರುತ್ತಲೇ ಇರುವುದರಿಂದ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ಧಾರ್ಮಿಕ ಆಚರಣೆಗಳಿಗಾಗಿ ಜನರು ಗುಂಪು ಸೇರುವುದನ್ನು ನಿಷೇಧಿಸಿದೆ. ಅದೇ ವೇಳೆ ನಿಜಾಮುದ್ದೀನ್ ಮರ್ಕಜ್ ಮಸೀದಿಯನ್ನು ಪ್ರಾರ್ಥನೆಗಾಗಿ ತೆರೆಯಬಾರದು ಎಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ನಿಲುವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಕ್ತಾ ಗುಪ್ತಾ, ಮಸ್ಜಿದ್ ಬಂಗಲೇವಾಲಿಯಲ್ಲಿ ನಮಾಜ್ ಮಾಡಲು ಭಕ್ತರಿಗೆ ಅನುಮತಿ ನೀಡಬೇಕು. ಡಿಡಿಎಂಕೆ ವಿಧಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ನಮಾಜ್ ಮಾಡಬಹುದು ಎಂದು ಆದೇಶಿಸಿದ್ದಾರೆ.
ದೆಹಲಿ ವಕ್ಫ್ ಮಂಡಳಿಯ ವಕೀಲ ವಜೀಹ್ ಶಫೀಕ್ ಅವರು ಮಸೀದಿಯಲ್ಲಿ ರಂಜಾನ್ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಮಸೀದಿಯ ಮೊದಲ ಮಹಡಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ನಮಾಜ್ ಮಾಡಬಹುದು. ಕೊವಿಡ್ -19 ನಿಂದಾಗಿ ಈ ಪರಿಸ್ಥಿತಿ ಇಲ್ಲದೇ ಇರುತ್ತಿದ್ದರೆ ಎಲ್ಲ ಮಹಡಿಯಲ್ಲಿಯೂ ನಮಾಜ್ಗೆ ಅವಕಾಶ ನೀಡುತ್ತಿದ್ದೆವು ಎಂದು ನ್ಯಾಯಾಲಯ ಹೇಳಿದೆ. ಸ್ಥಳದ ಪಾವಿತ್ರ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಭಕ್ತರು ನಮಾಜ್ ಮಾಡಲಿ, ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಅದೇ ಹೊತ್ತಿಗೆ ಜನರ ಸುರಕ್ಷತೆಯೂ ಮುಖ್ಯ ಎಂದು ಹೇಳಿದೆ. ನಮಾಜ್ ಮಾಡಲು 50ಕ್ಕಿಂತ ಹೆಚ್ಚಿನ ಭಕ್ತರಿಗೆ ಅನುಮತಿ ನೀಡಬೇಕು ಎಂಬ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ .
Delhi High Court allows 50 people to offer prayers at Nizamuddin Markaz mosque five times a day, subject to guidelines issued by authorities concerned
— ANI (@ANI) April 15, 2021
ಏಪ್ರಿಲ್ 10ರಿಂದ ಯಾವುದೇ ಧಾರ್ಮಿಕ ಸಮಾರಂಭಗಳಿಗ ಜನ ಸೇರುವಂತಿಲ್ಲ ಎಂದು ಡಿಡಿಎಂಎ ಆದೇಶಿಸಿದೆ. ಆದ್ದರಿಂದ ರಂಜಾನ್ ತಿಂಗಳಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ಮಸೀದಿ ತೆರೆಯಲು ದೆಹಲಿ ವಕ್ಫ್ ಮಂಡಳಿಗೆ ಅನುಮತಿ ನೀಡಬಾರದು ಎಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ನ್ಯಾಯಾಲಯದಲ್ಲಿ ಮಂಗಳವಾರ ಹೇಳಿದ್ದರು. ಈ ಬಗ್ಗೆ ಗುರುವಾರ ಅಫಿಡವಿಟ್ ಸಲ್ಲಿಸಿ, ಪ್ರಸ್ತುತ ನಿರ್ಬಂಧವನ್ನು ಜಾರಿಗೆ ತರುವ ಮತ್ತು ಧಾರ್ಮಿಕ ಸಮಾರಂಭಗಳನ್ನು ನಡೆಸಲು ಅನುಮತಿ ಇದೆಯೇ ಎಂಬುದರ ಬಗ್ಗೆ ವಿವರಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ನಿರ್ದೇಶಿಸಿತ್ತು.
ಏತನ್ಮಧ್ಯೆ, ಅಧಿಕಾರಿಗಳು ಅಫಿಡವಿಟ್ನಲ್ಲಿ ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ. ಧಾರ್ಮಿಕ ಸ್ಥಳಗಳಾದ ದೇವಾಲಯ ಮತ್ತು ಚರ್ಚ್ ಗಳಲ್ಲಿಯೂ ಜನರು ಸೇರಬಹುದೇ ಬೇಡವೇ ಎಂಬುದರ ಬಗ್ಗೆ ಅಫಿಡವಿಟ್ನಲ್ಲಿ ಸ್ಪಷ್ಟವಾದ ನಿಲುವು ವ್ಯಕ್ತವಾಗಿಲ್ಲ ಎಂದು ನ್ಯಾಯಾಲಯ ಗುರುವಾರ ಹೇಳಿದೆ.
ಪೊಲೀಸರು ದೃಢೀಕರಿಸಿದ 200 ಜನರ ಪಟ್ಟಿಯಲ್ಲಿ ರಂಜಾನ್ ವೇಳೆ ಕೇವಲ 20 ಮಂದಿಗೆ ಮಾತ್ರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಬಹುದು ಎಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ತಿರಸ್ಕರಿಸಿತ್ತು.
ಸಾಮಾಜಿಕ ಅಂತರ ಮಾನದಂಡಗಳಿಗೆ ಅನುಸಾರವಾಗಿ ಪ್ರಾರ್ಥನಾ ಚಾಪೆಗಳನ್ನು ಇರಿಸಲು ಮತ್ತು ಪ್ರಾರ್ಥನೆ ಸಲ್ಲಿಸಲಿರುವ ಜಾಗಗಳಿಗೆ ಗುರುತು ಹಾಕುವುದಕ್ಕಾಗಿ ಅಧಿಕಾರಿಗಳು ಮತ್ತು ಮಸೀದಿ ನಿರ್ವಹಣೆಯ ಜನರು ಜಂಟಿಯಾಗಿ ಸೋಮವಾರ ಮಸೀದಿ ಸ್ಥಳವನ್ನು ಪರಿಶೀಲಿಸಿದ್ದಾರೆ. ಒಂದು ವರ್ಷದ ಹಿಂದೆ ತಬ್ಲಿಗಿ ಜಮಾತ್ ಸದಸ್ಯರಿಗೆ ಕೊವಿಡ್ ದೃಢಪಟ್ಟ ನಂತರ ಮರ್ಕಜ್ನಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು.
ಇದನ್ನೂ ಓದಿ: ಕೊವಿಡ್ ಕಾಲದಲ್ಲಿ ಕುಂಭ ಮೇಳ: ಈ ಹಿಂದೆಯೂ ಸೋಂಕು ಹರಡುವಿಕೆಗೆ ಕಾರಣವಾಗಿತ್ತು ಧಾರ್ಮಿಕ ಆಚರಣೆ
ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದ 36 ವಿದೇಶಿಯರು ಆರೋಪ ಮುಕ್ತ