ಅಚ್ಚರಿಯ ಸೀಟ್ ನಂಬರ್ 11ಎ: ಎರಡು ವಿಮಾನ ಅಪಘಾತದಲ್ಲಿ ಬದುಕುಳಿದವರು ಈ ಸೀಟ್ನಲ್ಲಿ ಕೂತವರೆಯೇ
Mystery of seat number 11A: ಸೀಟ್ ನಂ. 11ಎ ಬಗ್ಗೆ ಸಿನಿಮಾವೇ ತಯಾರಾಗಬಹುದು, ಆ ಮಟ್ಟಿಗೆ ಅಚ್ಚರಿಯ ದಾಖಲೆ ಇದರದ್ದು. ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕಿದ್ದ ಏಕೈಕ ವ್ಯಕ್ತಿ 11ಎ ಸೀಟ್ನಲ್ಲಿ ಕೂತಿದ್ದವರು. ಹಾಗೆಯೇ, 1998ರಲ್ಲಿ ಥಾಯ್ಲೆಂಡ್ನಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ಬದುಕಿದ ಒಬ್ಬ ವ್ಯಕ್ತಿಯೂ ಕೂಡ ಇದೇ 11ಎ ಸೀಟ್ನಲ್ಲಿ ಕೂತಿದ್ದರು.

ನವದೆಹಲಿ, ಜೂನ್ 15: ಮೊನ್ನೆಮೊನ್ನೆ ಅಹ್ಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತ (Air India flight crash incident) ದುರಂತ ಘಟನೆಯಲ್ಲಿ 260ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಆಘಾತದ ಸುದ್ದಿಯ ಜೊತೆಗೆ ಒಬ್ಬ ವ್ಯಕ್ತಿ ಪವಾಡಸದೃಶ ರೀತಿಯಲ್ಲಿ ಬದುಕಿದ ಘಟನೆಯೂ ಅಚ್ಚರಿ ಮೂಡಿಸಿತು. ವಿಶ್ವಾಸ್ ಕುಮಾರ್ ರಮೇಶ್ ಎನ್ನುವ ಬ್ರಿಟನ್ ನಿವಾಸಿ ವಿಶ್ವಾಸ್ ಕುಮಾರ್ ರಮೇಶ್ ಬದುಕುಳಿದವರು. ಅಪಘಾತಕ್ಕೊಳಗಾದ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನದ ಸೀಟ್ ನಂಬರ್ 11A ನಲ್ಲಿ (Seat No. 11A) ರಮೇಶ್ ಕೂತಿದ್ದರು. ಇಡೀ ವಿಮಾನದಲ್ಲಿದ್ದವರೆಲ್ಲಾ ಸುಟ್ಟು ಕರಕಲಾದರೂ ಇವರು ಅಲ್ಪಸ್ವಲ್ಪ ಗಾಯಗೊಂದಿಗೆ ಜೀವ ಉಳಿಸಿಕೊಂಡಿದ್ದರು. ಅದಕ್ಕೆ ಕಾರಣವಾಗಿದ್ದು ಸೀಟ್ ನಂಬರ್ 11ಎ.
ಥಾಯ್ಲೆಂಡ್ ವಿಮಾನ ಅಪಘಾತ ಮತ್ತು ಸೀಟ್ ನಂ. 11ಎ
ಇನ್ನೂ ಅಚ್ಚರಿಯ ಸಂಗತಿಯೊಂದು ಇಂಟರ್ನೆಟ್ನಲ್ಲಿ ಸಿಕ್ಕಿದೆ. 26-27 ವರ್ಷದ ಹಿಂದೆ, ಅಂದರೆ 1998ರ ಡಿಸೆಂಬರ್ನಲ್ಲಿ ಥಾಯ್ಲೆಂಡ್ನಲ್ಲಿ ಸಂಭವಿಸಿದ ವಿಮಾನಾಘಾತವೊಂದರಲ್ಲಿ ನೂರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಥಾಯ್ ಏರ್ವೇಸ್ ಫ್ಲೈಟ್ನಲ್ಲಿ ಬದುಕುಳಿದ ಕೆಲವೇ ಮಂದಿಯಲ್ಲಿ ಗಾಯಕ ರುವಾಂಗ್ಸಕ್ ಲೋಯಚುಸಕ್ (Ruangsak Loyachusak) ಒಬ್ಬರು. ಇವರು ಆ ವಿಮಾನದಲ್ಲಿ ಕೂತಿದ್ದು ಸೀಟ್ ನಂಬರ್ 11ಎನಲ್ಲೇ.
ಇದನ್ನೂ ಓದಿ: ಕೇರಳದಲ್ಲಿ ಬ್ರಿಟಿಷ್ ಫೈಟರ್ ಜೆಟ್ ತುರ್ತು ಭೂಸ್ಪರ್ಶ
ಈ ಬಗ್ಗೆ ರುವಾಂಗ್ಸಕ್ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದಿದ್ದಾರೆ: ‘ಭಾರತದಲ್ಲಿ ವಿಮಾನ ಅಪಘಾತದಲ್ಲಿ ಒಬ್ಬರು ಬದುಕುಳಿದಿದ್ದಾರೆ. ನಾನು ಕೂತಿದ್ದ 11ಎ ಸೀಟ್ನಲ್ಲೇ ಅವರೂ ಕೂತಿದ್ದರು’ ಎಂದು ಹೇಳಿದ ಅವರು, ಮೃತಪಟ್ಟ ಎಲ್ಲರಿಗೂ ಸಂತಾಪ ಹೇಳಿದ್ದಾರೆ.
ಇದು ಬೋಯಿಂಗ್, ಅದು ಏರ್ಬಸ್
ಅಪಘಾತಗೊಂಡ ಏರ್ ಇಂಡಿಯಾ ವಿಮಾನವು ಬೋಯಿಂಗ್ 787-8 ಡ್ರೀಮ್ಲೈನರ್ ಆಗಿದೆ. ಥಾಯ್ ಏರ್ವೇಸ್ನ ವಿಮಾನವು ಏರ್ಬಸ್ ಕಂಪನಿಯ ಎ310-204 ಆಗಿತ್ತು. ಥಾಯ್ಲೆಂಡ್ನ ಸುರಾಟ್ ಥಾಣಿ ಏರ್ಪೋರ್ಟ್ನಲ್ಲಿ ಲ್ಯಾಂಡಿಂಗ್ ಆಗುವ ಅಪಘಾತವಾಗಿತ್ತು. 146 ಮಂದಿ ಪ್ರಯಾಣಿಕರಲ್ಲಿ 101 ಮಂದಿ ಅಸುನೀಗಿದ್ದರು. ಪೈಲಟ್ ತಂಡದ ತಪ್ಪಿನಿಂದ ಆ ಅಪಘಾತವಾಗಿತ್ತು.
ಮಾನಸಿಕ ಆಘಾತದಲ್ಲಿ ರುವಾಂಗಸಕ್
ಅಂದು ಬದುಕುಳಿದಿದ್ದ ರುವಾಂಗಸಕ್ ಲೋಯಚಸುಕ್ ಅವರಿಗೆ ಆಗ 20 ವರ್ಷ ವಯಸ್ಸಾಗಿತ್ತು. ಈಗ ಅವರಿಗೆ 47 ವರ್ಷ ವಯಸ್ಸು. ಅಪಘಾತವಾಗಿ ಹಲವು ವರ್ಷ ಅವರು ಆ ಘಟನೆಯ ಆಘಾತದಿಂದ ಹೊರಬರಲು ಆಗಿರಲಿಲ್ಲವಂತೆ. ಹತ್ತು ವರ್ಷ ಅವರು ಮತ್ತೆ ವಿಮಾನವನ್ನೇ ಏರಿರಲಿಲ್ಲ. ಈಗ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 11ಎ ಸೀಟ್ನಲ್ಲಿದ್ದ ವ್ಯಕ್ತಿ ಬದುಕುಳಿದಿರುವ ಸುದ್ದಿ ಕೇಳಿ ಅವರಿಗೆ ಹಳೆಯ ನೆನಪೆಲ್ಲಾ ಬಂದು ಮೈ ನಡುಗಿದಂತಾಯಿತಂತೆ.
ಇದನ್ನೂ ಓದಿ: ವಿಮಾನ ದುರಂತ: 3 ದಿನ ಬಳಿಕ ವಿಜಯ್ ರೂಪಾನಿ ಗುರುತು ಪತ್ತೆ, ಅಂತ್ಯಕ್ರಿಯೆ ವೇಳಾಪಟ್ಟಿ ಪ್ರಕಟ
ಏರ್ ಇಂಡಿಯಾ ಫ್ಲೈಟ್ ಅಪಘಾತದಲ್ಲಿ ಬದುಕಿದ ವಿಶ್ವಾಸ್ ಕುಮಾರ್ ರಮೇಶ್ ಅವರು ತಾನು ಜೀವಂತವಾಗಿ ಹೇಗೆ ಉಳಿದೆ ಎನ್ನುವುದೇ ಅಚ್ಚರಿ ಆಗಿದೆ ಎನ್ನುತ್ತಾರೆ.
ಏರ್ಪೋರ್ಟ್ ಬಿಟ್ಟ ಕೆಲವೇ ಕ್ಷಣಗಳಲ್ಲಿ ವಿಮಾನವು ನೆಲಕ್ಕೆ ಅಪ್ಪಳಿಸಿದೆ. ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಗುದ್ದಿದ ರಭಸಕ್ಕೆ ರಮೇಶ್ ಅವರು ತಮ್ಮ 11ಎ ಸೀಟು ಹೊರಗೆ ಬಿದ್ದಿದ್ದಾರೆ. ವಿಮಾನದ ಇತರರೆಲ್ಲರೂ ಬೆಂಕಿಗೆ ಸುಟ್ಟು ಬೂದಿಯಾಗಿದ್ದರು. 11ಎ ಸೀಟು ಎಮರ್ಜೆನ್ಸಿ ಡೋರ್ನ ಬದಿಯಲ್ಲೇ ಇತ್ತು. ಹೀಗಾಗಿ, ಬಚಾವಾಗಲು ಅವಕಾಶವಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 8:57 pm, Sun, 15 June 25




