ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದ 36 ವಿದೇಶಿಯರು ಆರೋಪ ಮುಕ್ತ
ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಳ್ಳುವ ಮೂಲಕ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎಂದು ಆರೋಪ ಹೊತ್ತಿದ್ದ 36 ವಿದೇಶಿಯರನ್ನು ದೆಹಲಿ ನ್ಯಾಯಾಲಯ ಆರೋಪಮುಕ್ತಗೊಳಿಸಿದೆ.

ನವದೆಹಲಿ: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಳ್ಳುವ ಮೂಲಕ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎಂದು ಆರೋಪ ಹೊತ್ತಿದ್ದ 36 ವಿದೇಶಿಯರನ್ನು ದೆಹಲಿ ನ್ಯಾಯಾಲಯ ಆರೋಪಮುಕ್ತಗೊಳಿಸಿದೆ.
ನಿಜಾಮುದ್ದೀನ್ ಪ್ರದೇಶ ಕೋವಿಡ್ ಹಾಟ್ಸ್ಪಾಟ್ ಆಗುವ ಮೂಲಕ ಜಮಾತ್ ಮಾರ್ಚ್ ತಿಂಗಳಲ್ಲಿ ಸುದ್ದಿಯಾಗಿತ್ತು. ಜಮಾತ್ನಲ್ಲಿ ಹಲವಾರು ಮಂದಿ ವಿದೇಶಿಯರು ಭಾಗಿಯಾಗಿದ್ದರು. ಜಮಾತ್ನಲ್ಲಿ ಭಾಗಿಯಾಗುವ ಮೂಲಕ ಇವರು ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ. ವೀಸಾ ನಿಯಮ ಉಲ್ಲಂಘನೆ ಮಾಡಿ ಮಿಷನರಿ ಕಾರ್ಯಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ದೆಹಲಿ ಪೊಲೀಸರು 955 ಮಂದಿ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದರು.
ಈ ಪೈಕಿ ಬಹುತೇಕ ತಬ್ಲಿಘಿ ಜಮಾತ್ ಸದಸ್ಯರು ಅನುಮತಿ ಪಡೆದು ಅವರವರ ದೇಶಗಳಿಗೆ ತೆರಳಿದ್ದರು. 44 ಮಂದಿ ದೆಹಲಿಯಲ್ಲಿ ವಿಚಾರಣೆ ಎದುರಿಸಲು ನಿರ್ಧರಿಸಿದ್ದರು. ಇವರಲ್ಲಿ ಎಂಟು ಮಂದಿಯನ್ನು ಬಿಡುಗಡೆ ಮಾಡಿದ್ದ ನ್ಯಾಯಾಲಯವು ಇವರ ವಿರುದ್ಧ ಯಾವುದೇ ಪ್ರಮುಖ ಸಾಕ್ಷ್ಯಗಳಿಲ್ಲ ಎಂದು ಹೇಳಿತ್ತು.
ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಿದೇಶಿಯರ ಕಾಯ್ದೆಯ ಸೆಕ್ಷನ್ 14 ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್ 270 ಮತ್ತು 271ರ ಅಡಿಯಲ್ಲಿ ಇವರನ್ನು ಬಿಡುಗಡೆ ಮಾಡಿತ್ತು. ಆದಾಗ್ಯೂ ಇವರ ಮೇಲೆ ಸಾಂಕ್ರಾಮಿಕ ರೋಗ ಕಾಯ್ದೆ, ವಿಪತ್ತು ನಿರ್ವಹಣೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ ಅಡಿಯಲ್ಲಿ ದೋಷಾರೋಪ ಇತ್ತು.
36 ವಿದೇಶಿಯರನ್ನು ಆರೋಪ ಮುಕ್ತಗೊಳಿಸಿ ಆದೇಶ ನೀಡಿದ ಚೀಫ್ ಮೆಟ್ರೊಪಾಲಿನ್ ಮೆಜಿಸ್ಟ್ರೇಟ್ ಗುರ್ ಮೋಹಿನಾ ಕೌರ್, ಸಂಪೂರ್ಣ ಚಾರ್ಜ್‌ಶೀಟ್ ಮತ್ತು ಅದಕ್ಕೆ ಲಗತ್ತಿಸಲಾದ ದಾಖಲೆಗಳು ಸಂಬಂಧಿತ ಅವಧಿಯಲ್ಲಿ ಇವರು ಮರ್ಕಜ್ನಲ್ಲಿ ಭಾಗವಹಿಸಿರುವುದಾಗಿ ತೋರಿಸುವುದಿಲ್ಲ. ಆರೋಪದಲ್ಲಿ ಹೇಳಿದಂತೆ ಇವರು ತಬ್ಲೀಗಿ ಕೆಲಸದಲ್ಲಿ ಭಾಗಿಯಾಗಿದ್ದಾರೆ ಎಂದು ತೋರಿಸಲು ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದ್ದಾರೆ.
ರಿಜಿಸ್ಟರ್ಗಳ ಪ್ರತಿಯನ್ನು ವಶಪಡಿಸಿಕೊಳ್ಳುವುದಾಗಲೀ, ರೆಕಾರ್ಡ್ನಲ್ಲಿರಿಸುವುದಾಗಲೀ ಮಾಡಿಲ್ಲ. ಮರ್ಕಜ್ನಿಂದ ಆಸ್ಪತ್ರೆಗೆ ಅಥವಾ ಕ್ವಾರಂಟೈನ್ ಕೇಂದ್ರಕ್ಕೆ ಕಳಿಸಿದ ಪಟ್ಟಿಯಲ್ಲಿ ಈ ಮಾಹಿತಿ ಇಲ್ಲ ಅಥವಾ ಮರ್ಕಜ್ನಲ್ಲಿ ಭಾಗಿಯಾದವರ ಪಟ್ಟಿಯೂ ಇಲ್ಲ. ಆರೋಪಗಳ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರವಾಸಿ ವೀಸಾ ಕಾಯ್ದೆ ಉಲ್ಲಂಘನೆ, ಐವರು ವಿದೇಶಿ ತಬ್ಲಿಘಿಗಳಿಗೆ ಶಿಕ್ಷೆ
Published On - 8:06 pm, Tue, 15 December 20