ಮುಂಬೈನ ಡಿ ಎನ್ ನಗರ ಪೊಲೀಸ್ ಸ್ಟೇಶನ್ ನಲ್ಲಿ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ರಾಜೇಂದ್ರ ಧೊಂಡು ಭೋಂಸ್ಲೆ (Rajendra Dhondu Bhosle) ಅವರಂಥ ಮಾನವೀಯ ಕಳಕಳಿಯುಳ್ಳ ಪೊಲೀಸ್ ಅಧಿಕಾರಿ (police official) ಸಿಕ್ಕೋದು ಬಹಳ ವಿರಳ. ನಾವು ಯಾಕೆ ಈ ಮಾತು ಹೇಳುತ್ತಿದ್ದೇವೆ ಅನ್ನೋದು ಈ ಕತೆಯನ್ನು ಪೂರ್ತಿ ಓದಿದ ಬಳಿಕ ನಿಮಗೆ ಗೊತ್ತಾಗುತ್ತದೆ. ಅವರು ಸೇವೆಯಿಂದ ಸೇವೆಯಿಂದ ನಿವೃತ್ತಿ ಹೊಂದಲು ಕೇವಲ 2 ವರ್ಷಗಳ ಅವಧಿ ಬಾಕಿಯಿದ್ದಾಗ 2008 ರಿಂದ 2015 ರವರೆಗೆ ಕಣ್ಮರೆಯಾಗಿದ್ದ 166 ಬಾಲಕಿಯರನ್ನು ಪತ್ತೆ ಹಚ್ಚುವ ಕೆಲಸ ಅವರಿಗೆ ಒಪ್ಪಿಸಲಾಗುತ್ತದೆ. ತಮ್ಮ ತಂಡದ ನೆರವಿನೊಂದಿಗೆ ಅವರು 165 ಸುಳಿವು ಮಾತ್ರ ಅವರಿಗೆ ಸಿಗುವುದೇ ಇಲ್ಲ.
ಆದರೆ ನಿಷ್ಠಾವಂತ ಪೋಲಿಸ್ ಅಧಿಕಾರಿಯಾಗಿದ್ದ ಭೋಂಸ್ಲೆ ಸೋಲೊಪ್ಪಿಕೊಳ್ಳುವುದಿಲ್ಲ. ಏತನ್ಮಧ್ಯೆ ಅವರು ಸೇವೆಯಿಂದ ನಿವೃತ್ತಿ ಹೊಂದುತ್ತಾರೆ. ನಿಮಗೆ ಆಶ್ಚರ್ಯವಾಗಬಹುದು. ಇಲಾಖೆ ಅವರನ್ನು ರಿಟೈರ್ ಮಾಡಿದರೂ ಭೋಂಸ್ಲೆ ಆ ಒಂದು ಬಾಲಕಿಯನ್ನು ಪತ್ತೆಮಾಡುವ ಜವಾಬ್ದಾರಿಯಿಂದ ನಿವೃತ್ತರಾಗುವುದಿಲ್ಲ. ಮೊದಲು ಬಾಲಕಿಯನ್ನು ಯೂನಿಫಾರ್ಮ್ ಧರಿಸಿ ಹುಡುಕುತ್ತಿದ್ದ ಅವರು ನಂತರ ಸಿವಿಲ್ ಡ್ರೆಸ್ ನಲ್ಲಿ ಹುಡುಕಾಟ ಮುಂದುವರಿಸುತ್ತಾರೆ.
ಅವರ ಮತ್ತು ಡಿ ಎನ್ ನಗರದ ಪೊಲೀಸ್ ಸ್ಟೇಶನ್ ಸಿಬ್ಬಂದಿಯ ಪ್ರಯತ್ನದಿಂದ ಜನವೆರಿ 22ಮ 2013 ರಂದು ನಾಪತ್ತೆಯಾಗಿದ್ದ ಮತ್ತು ಆಗ ಕೇವಲ 7 ವರ್ಷದ ಬಾಲಕಿ ಮೊನ್ನೆ ಗುರುವಾರ ಅಂದರೆ ಆಗಸ್ಟ್ 4 ರಂದು ತನ್ನ ಕುಟುಂಬದೊಂದಿಗೆ ಜೊತೆಗೂಡಿದ್ದಾಳೆ. ಆಗಿನ 7 ವರ್ಷದ ಬಾಲಕಿ ಈಗ 16 ಯುವತಿ. ತನ್ನ ಅಮ್ಮ ಮತ್ತು ಚಿಕ್ಕಪ್ಪನನ್ನು 9 ವರ್ಷಗಳ ನೋಡಿದರೂ ಆ ಹೆಣ್ಣುಮಗು ಅವರನ್ನು ಗುರುತು ಹಿಡಿಯುತ್ತದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಅವಳ ತಂದೆ ತೀರಿಕೊಂಡಿದ್ದಾರೆ.
ಬಾಲಕಿಯನ್ನು ಅಪಹರಿಸಿದ ಆರೋಪದಲ್ಲಿ ಡಿಎನ್ ನಗರ ಪೊಲೀಸರು 50-ವರ್ಷ-ವಯಸ್ಸಿನ ಹ್ಯಾರಿ ಜೋಸೆಫ್ ಡಿಸೋಜಾನನ್ನು ಬಂಧಿಸಿದ್ದಾರೆ. 37-ವರ್ಷ-ವಯಸ್ಸಿನ ಅವನ ಹೆಂಡತಿ ಸೋನಿಯನ್ನೂ ಈ ಪ್ರಕರಣದಲ್ಲಿ ಸಹ ಅರೋಪಿಯೆಂದು ಪರಿಗಣಿಸಲಾಗಿದೆ.
ಅಸಲಿಗೆ ನಡೆದಿದ್ದೇನು?
ಹ್ಯಾರಿ ಮತ್ತು ಸೋನಿಗೆ ಮಕ್ಕಳಿರಲಿಲ್ಲ ಮತ್ತು ಮಗುವನ್ನು ಪಡೆಯುವ ಉತ್ಕಟ ಅಸೆ ಅವರಲ್ಲಿತ್ತು. ಜನೆವರಿ 22, 2013 ರಂದು ಬಾಲಕಿ ಮತ್ತು ಅವಳ ಅಣ್ಣ ತಾವು ಓದುತ್ತಿದ್ದ ಮುನಿಸಿಪಲ್ ಶಾಲೆಯಿಂದ ಮನೆಗೆ ಹೋಗುವಾಗ ಪಾಕೆಟ್ ಮನೆಯ ವಿಷಯವಾಗಿ ಅವರಿಬ್ಬರ ನಡುವೆ ತಗಾದೆ ಶುರುವಾಗುತ್ತದೆ. ಮುನಿಸಿಕೊಳ್ಳುವ ಬಾಲಕಿ ಮನೆಗೆ ಹೋಗದೆ ರಸ್ತೆಯ ಮೇಲೆ ಅತ್ತಿಂದಿತ್ತ ಓಡಾಡುತ್ತಿದ್ದುದನ್ನು ಡಿಸೋಜಾ ನೋಡುತ್ತಾನೆ. ತನಗೆ ಮಕ್ಕಳಿಲ್ಲದ ಕೊರತೆಯನ್ನು ನೀಗಿಸಿಕೊಳ್ಳಲು ಇವಳೇ ಸೂಕ್ತಳಾದವಳು ಎಂದು ಭಾವಿಸುವ ಅವನು ಅವಳನ್ನು ಪುಸಲಾಯಿಸಿ, ಅಮಿಷಗಳನನ್ನೊಡ್ಡಿ ಮನೆಗೆ ಕರೆತರುತ್ತಾನೆ.
ಮಗಳು ಮನೆ ತಲುಪದೆ ಹೋದಾಗ ಬಾಲಕಿಯ ತಂದೆ ತಾಯಿ ಹತ್ತಿರದ ಡಿಎನ್ ಪೊಲೀಸ್ ಸ್ಟೇಶನ್ ನಲ್ಲಿ ದೂರು ದಾಖಲಿಸುತ್ತಾರೆ. ಅವಳನ್ನು ಪತ್ತೆ ಮಾಡುವ ಕೆಲಸ ಭೋಂಸ್ಲೆಯವರಿಗೆ ಒಪ್ಪಿಸಲಾಗುತ್ತದೆ.
ಪ್ರಕರಣಕ್ಕೆ ಕರ್ನಾಟಕ ಕನೆಕ್ಷನ್!
ಬಾಲಕಿ ನಾಪತ್ತೆಯಾದ ಸಂಗತಿ ಮಾಧ್ಯಮಗಳಲ್ಲೂ ಚರ್ಚೆಯಾಗತೊಡಿದಾಗ ಮತ್ತು ಪೊಲೀಸರು ಅಂಧೇರಿ ಮತ್ತು ಸುತ್ತಮುತ್ತಲ ಪ್ರದೇಶಗಳ ಗೋಡೆಗಳ ಮೇಲೆ ಅವಳ ಪೋಸ್ಟರ್ ಅಂಟಿಸಿ ಕರಪತ್ರಗಳನ್ನು ಹಂಚಿದಾಗ ಭೀತಿಗೊಳಗಾಗುವ ಡಿಸೋಜಾ ಹುಡುಗಿಯನ್ನು ತನ್ನ ಹುಟ್ಟೂರು ಕರ್ನಾಟಕದ ರಾಯಚೂರಿಗೆ ಕಳಿಸಿ ಹಾಸ್ಟೆಲ್ ಒಂದಕ್ಕೆ ಅವಳನ್ನು ಸೇರಿಸುತ್ತಾನೆ. ಇದೆಲ್ಲ ನಡೆದಿದ್ದು 2013 ರಲ್ಲಿ.
ಡಿಸೋಜಾ-ಸೋನಿಗೆ 2016ರಲ್ಲಿ ತಮ್ಮದೇ ಮಗು ಹುಟ್ಟಿಬಿಡುತ್ತದೆ!
2016 ರಲ್ಲಿ ಡಿಸೋಜಾ ಮತ್ತು ಸೋನಿಗೆ ಮಗು ಹುಟ್ಟಿದಾಗ ಅವರು ರಾಯಚೂರಿನಲ್ಲಿ ಬಿಟ್ಟಿದ್ದ ಬಾಲಕಿಯನ್ನು ವಾಪಸ್ಸು ಕರೆತರುತ್ತಾರೆ. ಅಷ್ಟೊತ್ತಿಗಾಗಲೇ ಪೊಲೀಸರ ಹುಡುಕಾಟ ನಿಂತುಹೋಗಿರುತ್ತದೆ ಮತ್ತು ಜನ ಕೂಡ ವಿಷಯವನ್ನು ಮರೆತು ಬಿಟ್ಟಿರುತ್ತಾರೆ. ಆದರೆ ಎರಡು ಮಕ್ಕಳ ಪೋಷಣೆ ಕಷ್ಟವಾಗತೊಡಗಿದ್ದರಿಂದ ಡಿಸೋಜಾ ಹದಿ ಹರೆಯದ ಬಾಲಕಿಯನ್ನು ಬೇಬಿಸಿಟ್ಟರ್ (ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದು) ಕೆಲಸಕ್ಕೆ ಕಳಿಸುತ್ತಾನೆ.
ಗಮ್ಮತ್ತಿನ ಸಂಗತಿಯೆಂದರೆ ಡಿಸೋಜಾ ಮತ್ತು ಬಾಲಕಿಯ ಕುಟುಂಬ ಮನೆಗಳನ್ನು ಬದಲಾಯಿಸಿ ಎರಡೂ ಕುಟುಂಬಗಳು ಅಂಧೇರಿಯ (ವೆಸ್ಟ್) ಗಿಲ್ಬರ್ಟ್ ಹಿಲ್ ಪ್ರದೇಶದಲ್ಲಿ ಬಾಡಿಗೆ ಮನೆಗಳಲ್ಲಿ ವಾಸ ಮಾಡಲಾರಂಭಿಸುತ್ತವೆ. ಎರಡು ಮನೆಗಳ ನಡುವಿನ ಅಂತರ ಕೇವಲ 500 ಮೀಟರ್ ಮಾತ್ರ ಇತ್ತು ಎಂದು ಡಿ ಎನ್ ನಗರ ಪೋಲಿಸ್ ಠಾಣೆಯ ಸೀನಿಯರ್ ಇನ್ಸ್ಪೆಕ್ಟರ್ ಮಿಲಿಂದ್ ಕುರ್ಡೆ ಹೇಳುತ್ತಾರೆ.
ಡಿಸೋಜಾ ನಿಶ್ಚಿಂತೆಯಿಂದ ಇದ್ದ
ಬಾಲಕಿ ದೊಡ್ಡವಳಾಗಿದ್ದರಿಂದ ಅವಳನ್ನು ಯಾರೂ ಗುರುತು ಹಿಡಿಯಲಾರರು, ಅಲ್ಲದೆ ಗೋಡೆಯ ಮೇಲಿದ್ದ ಬಾಲಕಿಯ ಪೋಸ್ಟರ್ ಗಳು ಯಾವತ್ತೋ ಹರಿದುಹೋಗಿದ್ದರಿಂದ ಡಿಸೋಜಾ ಮತ್ತು ಅವನ ಹೆಂಡತಿ ನಿಶ್ಚಿಂತೆಯಿಂದ ಇದ್ದರು. ಅದೂ ಅಲ್ಲದೆ ತಾವು ವಾಸವಾಗಿದ್ದ ಓಣಿಯಲ್ಲಿ ಅವಳು ಯಾರ ಜೊತೆಯೂ ಮಾತಾಡಕೂಡದೆಂದು ಡಿಸೋಜಾ ತಾಕೀತು ಕೂಡ ಮಾಡಿದ್ದ.
ಬಾಲಕಿ ಸಿಕ್ಕ ಬಳಿಕ ಅವಳ ಚಿಕ್ಕಪ್ಪ ಹೇಳುವ ಪ್ರಕಾರ ಸೋನಿ ಬಾಲಕಿಗೆ ಹೊಡೆಯುತ್ತಿದ್ದಳಂತೆ ಮತ್ತು ಡಿಸೋಜಾ ಕುಡಿದ ಮತ್ತಿನಲ್ಲಿ ಅವಳನ್ನು ಅಪಹರಿಸಿದ ವಿಷಯ ಬಾಯಿ ಬಿಡುತ್ತಿದ್ದನಂತೆ. ಅವರು ತನ್ನ ನಿಜವಾದ ತಂದೆ ತಾಯಿಗಳು ಅಲ್ಲವೆಂದು ಬಾಲಕಿಗೆ ಅರ್ಥವಾಗತೊಡಗಿತ್ತು. ಆದರೆ ಅಲ್ಲಿಂದ ತಪ್ಪಿಸಿಕೊಂಡು ಹೋಗವಷ್ಟು ಧೈರ್ಯ ಅವಳಲ್ಲಿರಲಿಲ್ಲ.
ಭೋಂಸ್ಲೆ ಸುಮ್ಮನೆ ಕುಳಿತಿರಲಿಲ್ಲ
ಏತನ್ಮಧ್ಯೆ, ಭೋಂಸ್ಲೆ ಬಾಲಕಿಯ ಹುಡುಕಾಟ ಮುಂದುವರಿಸಿದ್ದರು. ಮಾರ್ಚ್ 8, 2015 ರಂದು ಇಂಡಿಯನ್ ಎಕ್ಸ್ಪ್ರೆಸ್ ‘ಗರ್ಲ್ ನಂ. 166’ ಶೀರ್ಷಿಕೆ ಅಡಿಯಲ್ಲಿ ಬಾಲಕಿಯನ್ನು ಪತ್ತೆ ಹಚ್ಚಲು ಭೋಂಸ್ಲೆ ಮಾಡುತ್ತಿದ್ದ ಪ್ರಯತ್ನಗಳ ಬಗ್ಗೆ ವಿಸ್ತೃತ ವರದಿಯೊಂದನ್ನು ಪ್ರಕಟಿಸಿತ್ತು. ಭೋಂಸ್ಲೆ ಅವರಿಗೆ ಬಾಲಕಿಯನ್ನು ಹುಡುಕುವುದೇ ಬದುಕಿನ ಗುರಿಯಾಗಿತ್ತು.
‘ಕಳೆದ ವಾರವಷ್ಟೇ ಅವರು (ಭೋಂಸ್ಲೆ) ನಮ್ಮ ಮನೆಗೆ ಬಂದಿದ್ದರು. ನಾವೆಲ್ಲ ಮಗುವನ್ನು ನೆನಪಿಸಿಕೊಂಡು ಅತ್ತಿದ್ದೆವು. ನಾವಂತೂ ಅವಳು ಸಿಗುವ ಭರವಸೆಯನ್ನೇ ಬಿಟ್ಟಿದ್ದೆವು. ಆದರೆ ಭೋಂಸ್ಲೆ ಸಾಹೇಬ್ ಮಾತ್ರ ಅವಳನ್ನು ಹುಡುಕಿಯೇ ತೀರುತ್ತೇನೆ ಅಂತ ಹೇಳಿದರು,’ ಎಂದು ಬಾಲಕಿಯ ಚಿಕ್ಕಪ್ಪ ಹೇಳಿದ್ದಾರೆ.
‘ಅಸಲಿಗೆ ಬಾಲಕಿಯ ಪತ್ತೆಗೆ ನೆರವಾಗಿದ್ದು ಅವಳು ಬೇಬಿಸಿಟ್ಟರ್ ಆಗಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ ಮಹಿಳೆಯಿಂದ. 7 ತಿಂಗಳ ಹಿಂದೆ ಅಲ್ಲಿ ಕೆಲಸಕ್ಕೆ ಸೇರಿದ್ದ ಬಾಲಕಿಯ ಕತೆಯನ್ನು ಮನೆ ಕೆಲಸದಾಕೆ ಪ್ರತಿದಿನ ಇಷ್ಟಿಷ್ಟು ಕೇಳಿ ತಿಳಿದುಕೊಳ್ಳುತ್ತಿದ್ದಳು. ಇಂಟರ್ನೆಟ್ ಬಳಸುವುದು ಗೊತ್ತಿದ್ದ ಆಕೆ ಕೊನೆಗೊಂದು ದಿನ ಬಾಲಕಿಯ ಹೆಸರನ್ನು ಗೂಗಲ್ ನಲ್ಲಿ ಹಾಕಿ ಸರ್ಚ್ ಮಾಡಿದಾಗ ಅವಳ ಬಗ್ಗೆ ನಡೆದ ಅಭಿಯಾನ, ಭೋಂಸ್ಲೆ ನಡೆಸುತ್ತಿದ್ದ ಪ್ರಯತ್ನ ಮತ್ತು ಲೇಖನಗಳು ಸಿಕ್ಕಿವೆ,’ ಎಂದು ಬಾಲಕಿಯ ಚಿಕ್ಕಪ್ಪ ಹೇಳಿದ್ದಾರೆ.
ರಫೀಕ್ ನಂಬರ್ ಸಿಕ್ಕಿತು!
ಅವರು ಹೇಳುವ ಪ್ರಕಾರ, ಮನೆ ಕೆಲಸದಾಕೆ ಫೋಟೋಗಳನ್ನು ತೋರಿಸಿದಾಗ ಅವಳು ಎಲ್ಲರನ್ನು ಗೊತ್ತು ಹಿಡಿದಿದ್ದಾಳೆ. ತಾನು ಮೊದಲು ಪಕ್ಕದ ಏರಿಯಾದಲ್ಲಿ ವಾಸವಾಗಿದ್ದ ವಿಷಯ ಕೂಡ ಅವಳಿಗೆ ನೆನಪಾಗಿದೆ. ಅವರಿಬ್ಬರು ಸೇರಿ ಮಿಸ್ಸಿಂಗ್ ಪೋಸ್ಟರ್ ನಲ್ಲಿದ್ದ 5 ನಂಬರ್ ಗಳನ್ನು ಸಹ ಪತ್ತೆ ಮಾಡಿದ್ದಾರೆ. ಅವುಗಳಲ್ಲಿ 4 ನಂಬರ್ ನಿಷ್ಕ್ರಿಯಗೊಂಡಿದ್ದರೆ, 5ನೇ ನಂಬರ್ ಬಾಲಕಿ ತಂದೆತಾಯಿ ಮೊದಲು ವಾಸವಾಗಿದ್ದ ಮನೆಯ ನೆರೆಯವರದ್ದಾಗಿತ್ತು. ಅವರ ಹೆಸರು ರಫೀಕ್.
ಅವರಿಬ್ಬರು ಸೇರಿ ರಫೀಕ್ ನಂಬರ್ ಗೆ ಪೋನ್ ಮಾಡಿದಾಗ ಕಳೆದ 9 ವರ್ಷಗಳಲ್ಲಿ ಬಾಲಕಿಯ ಬಗ್ಗೆ ನೂರಾರು ಕರೆಗಳನ್ನು ಸ್ವೀಕರಿಸಿದ್ದ ಅವರು ಬಾಲಕಿಯ ಮಾತನ್ನು ನಂಬದೆ, ಖಚಿತಪಡಿಸಿಕೊಳ್ಳಲು ಫೋಟೋ ಕಳಿಸು ಅಂದಿದ್ದಾರೆ.
ನನ್ನ ಮಗಳೇ ಅದು !
ಗುರುವಾರ ಬೆಳಗ್ಗೆ ಅವರಿಬ್ಬರು ಸೇರಿ ರಫೀಕ್ ಗೆ ವಿಡಿಯೋ ಕಾಲ್ ಮಾಡಿದ್ದಾರೆ. ರಫೀಕ್, ಅವರ ಸ್ಕ್ರೀನ್ ಶಾಟ್ ತೆಗೆದು ಬಾಲಕಿಯ ತಾಯಿ ಮತ್ತು ಚಿಕ್ಕಪ್ಪನ ಫೋನ್ ಗಳಿಗೆ ಕಳಿಸಿದ್ದಾರೆ. ಫೋಟೋ ನೋಡಿದ ಕೂಡಲೇ ತಾಯಿ ಇದೇ ನನ್ನ ಮಗಳು ಅಂತ ಜೋರಾಗಿ ಅಳಲಾರಂಭಿಸಿದಳು, ಎಂದು ಚಿಕ್ಕಪ್ಪ ಹೇಳಿದ್ದಾರೆ.
ಬಾಲಕಿ ಕೆಲಸ ಮಾಡುತ್ತಿದ್ದ ಜುಹು ಸೊಸೈಟಿಯಿಂದ ಅವಳ ಫ್ಯಾಮಿಲಿ ಎಲ್ಲ ವಿವರಗಳನ್ನು ತೆಗೆದುಕೊಂಡು ಡಿ ಎನ್ ನಗರ ಪೊಲೀಸ್ ಸ್ಟೇಶನ್ ಗೆ ನೀಡಿದ್ದಾರೆ.
ನಂತರ ಬಾಲಕಿಯ ಕುಟುಂಬ ಪೊಲೀಸ್ ತಂಡದೊಂದಿಗೆ ಅವಳು ಕೆಲಸ ಮಾಡುತ್ತಿದ್ದ ಸೊಸೈಟಿಗೆ ಹೋಗಿದ್ದಾರೆ. ಬಾಲಕಿ ಸಹ ತಾನು ನೋಡಿಕೊಳ್ಳುತ್ತಿದ್ದ ಮಗುವನ್ನು ವಾಕ್ ಮಾಡಿಸುವ ನೆಪದಲ್ಲಿ ಕೆಳಗೆ ಕರೆದುಕೊಂಡು ಬಂದಿದ್ದಾಳೆ.
9 ವರ್ಷ ಬಳಿಕ ಮಗು ಸಿಕ್ಕಿತು!
ಆಗ ಸಮಯ ಸಾಯಂಕಾಲದ 8.20. ಬಾಲಕಿ ತನ್ನಮ್ಮನ ಗುರುತು ಹಿಡಿದು ಓಡುತ್ತಾ ಹೋಗಿ ಆಕೆಯ ತೆಕ್ಕೆಗೆ ಬಿದ್ದು ಜೋರಾಗಿ ಅಳಲಾರಂಭಿಸಿದ್ದಾಳೆ. ತಾಯಿಯೂ ಅಷ್ಟೇ, 9 ವರ್ಷಗಳ ನಂತರ ಸಿಕ್ಕ ಮಗಳನ್ನು ಜೋರಾಗಿ ತಬ್ಬಿಕೊಂಡು ಮುಖಕ್ಕೆ ಮುದ್ದಿಡುತ್ತಾ ಅವಳ ತಲೆ ನೇವರಿಸುತ್ತಾ ಅಳತೊಡಗಿದ್ದಾರೆ.
ಅವರನ್ನು ನೋಡುತ್ತಿದ್ದ ಪೊಲೀಸರ ಕಣ್ಣುಗಳಿಂದಲೂ ನೀರು ಹರಿಯಲಾರಂಭಿಸಿತ್ತು.
ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತಾಡಿರುವ ಭೋಂಸ್ಲೆ ಅವರು, ‘ನನಗೆ ಕಾಲ್ ಮಾಡಿ ವಿಷಯ ತಿಳಿಸಿದಾಗ ಮೊದಲಿಗೆ ನಾನು ನಂಬಲೇ ಇಲ್ಲ. ಕೂಡಲೇ ನಾನು ಡಿ ಎನ್ ನಗರ್ ಪೊಲೀಸ್ ಠಾಣೆಯ ಸೀನಿಯರ್ ಇನ್ಸ್ಪೆಕ್ಟರ್ ಅವರಿಗೆ ಕಾಲ್ ಮಾಡಿ ವಿಷಯ ಖಚಿತ ಪಡಿಸಿಕೊಂಡೆ. ಅಮೇಲೆ, ನಾನು ಸೇವೆಯಲ್ಲಿದ್ದುಕೊಂಡು ಬಾಲಕಿಯನ್ನು ಹುಡುಕುತ್ತಿದ್ದಾಗ ಸೀನಿಯರ್ ಇನ್ಸ್ಪೆಕ್ಟರ್ ಆಗಿದ್ದ ವಿ ಡಿ ಭೋಯ್ಟೆ ಅವರಿಗೆ ಫೋನ್ ಮಾಡಿದೆ. ಅವರು ನನಗೆ ನೀನು ಶಕ್ತಿಮೀರಿ ಪ್ರಯತ್ನ ಮಾಡಿದೆ, ಶೇಕಡಾ 99ರಷ್ಟು ಪ್ರಯತ್ನಗಳು ನಿನ್ನವು, ಶೇಕಡಾ 1 ದೇವರ ಆಶೀರ್ವಾದ ಎಂದರು,’ ಅಂತ ಹೇಳಿದ್ದಾರೆ.
ಮಾನವೀಯತೆ ರಿಟೈರ್ ಆಗುವುದಿಲ್ಲ!
ತಾವು ನಡೆಸಿದ ಹುಡುಕಾಟ ಬಗ್ಗೆ ಅವರು, ‘ಒಬ್ಬ ಪೊಲೀಸ್ ಆಗಿ ನೀವು ರಿಟೈರ್ ಆಗಬಹುದು. ಆದರೆ ನಮ್ಮಲ್ಲಿರುವ ಮಾನವೀಯತೆ ವೃತ್ತಿಯೊಂದಿಗೆ ನಿವೃತ್ತಿ ಹೊಂದುವಂಥದಲ್ಲ. ನಾವು ಬದುಕಿರುವವರೆಗೆ ಅದು ನಮ್ಮೊಳಗೆ ಜೀವಂತವಾಗಿರುತ್ತದೆ. ಮಗಳನ್ನು ಕಳೆದುಕೊಳ್ಳುವ ದುಃಖವನ್ನು ನಾವು ಆರ್ಥಮಾಡಿಕೊಳ್ಳಬೇಕು. ಆ ದುಃಖವನ್ನು ನಾವು ಅರ್ಥಮಾಡಿಕೊಳ್ಳದೆ ಹೋದರೆ ನಾವು ಮನುಷ್ಯರೇ ಅಲ್ಲ,’ ಎಂದಿದ್ದಾರೆ.
ಡಿಸೋಜಾ ಮತ್ತು ಅವರ ಪತ್ನಿಯ ವಿರುದ್ಧ ಪೊಲೀಸರು ಅಪಹರಣ, ಅಪಹರಣ ಮರೆಮಾಚುವಿಕೆ, ಮಾನವ ಕಳ್ಳಸಾಗಣೆ, ಅಕ್ರಮ ಬಂಧನ ಸೇರಿದಂತೆ ಇತರ ಕೆಲ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿಸೋಜಾನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆದರೆ ಅವರ ಆರು ವರ್ಷದ ಮಗಳನ್ನು ನೋಡಿಕೊಳ್ಳಲು ಬೇರೆ ಯಾರೂ ಇಲ್ಲದ ಕಾರಣ ಸೋನಿಯನ್ನು ಇಲ್ಲಿಯವರೆಗೆ ಬಂಧಿಸಿಲ್ಲ ಎಂದು ಕುರ್ಡೆ ಹೇಳಿದರು.