ಜಮ್ಮು-ಕಾಶ್ಮೀರದಲ್ಲಿ ಉಗ್ರರ ಕ್ರೌರ್ಯ; ಸರಪಂಚರೊಬ್ಬರನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು
ಭಟ್ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ಜಮ್ಮು-ಕಾಶ್ಮೀರ ವಕ್ತಾರ ಆಲ್ತಫ್ ಠಾಕೂರ್, ಮಾನವೀಯತೆ ಮತ್ತು ಶಾಂತಿಗೆ ಈ ಉಗ್ರರು ಬಹುದೊಡ್ಡ ಶತ್ರುಗಳಾಗಿದ್ದಾರೆ ಎಂದು ಹೇಳಿದ್ದಾರೆ.
ಶ್ರೀನಗರದ ಹೊರವಲಯದಲ್ಲಿ ಸರಪಂಚರೊಬ್ಬರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಮೃತರನ್ನು ಸಮೀರ್ ಭಟ್ ಎಂದು ಗುರುತಿಸಲಾಗಿದ್ದು, ಇವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸರಪಂಚರಾಗಿದ್ದರು. ಇವರ ಹತ್ಯೆಯನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಖಂಡಿಸಿದ್ದಾರೆ. ನಿಷೇಧಿತ ಉಗ್ರ ಸಂಘಟನೆ ಲಷ್ಕರ್ ಇ ತೈಬಾದ ಅಂಗಸಂಸ್ಥೆಯಾಗಿರುವ ದಿ ರೆಸಿಸ್ಟನ್ಸ್ ಫ್ರಂಟ್ (TRF) ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ಸಮೀರ್ ಭಟ್ರಿಗೆ ಉಗ್ರರಿಂದ ಬೆದರಿಕೆಯಿದ್ದ ಕಾರಣ ಅವರನ್ನ ಹೊಟೆಲ್ವೊಂದರಲ್ಲಿ ಇಟ್ಟು, ಭದ್ರತೆಯನ್ನು ಒದಗಿಸಲಾಗಿತ್ತು. ಆದರೆ ಅನಿವಾರ್ಯ ಕೆಲಸಕ್ಕಾಗಿ ಬುಧವಾರ ಅವರು ಅಲ್ಲಿಂದ ಹೊರಬೀಳಬೇಕಾಯಿತು. ಅದೂ ಕೂಡ ತುಂಬ ಮುನ್ನೆಚ್ಚರಿಕೆಯಿಂದ, ಗೌಪ್ಯವಾಗಿಯೇ ಹೊರಬಿದ್ದಿದ್ದರು. ಆದರೂ ಕೂಡ ಭಯೋತ್ಪಾದಕರು ದಾಳಿ ಮಾಡಿದರು. ಶ್ರೀನಗರದ ಹೊರವಲಯದಲ್ಲಿರುವ ಖೋನ್ಮೋಹ್ ಎಂಬಲ್ಲಿ ಉಗ್ರರು ಅವರಿಗೆ ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಬದುಕುಳಿಯಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಸದ್ಯ ಸ್ಥಳದಲ್ಲಿ ಪೊಲೀಸರು ಸುತ್ತುವರಿದಿದ್ದಾರೆ. ಪರಿಶೀಲನೆ ನಡೆಸಲಾಗುತ್ತಿದೆ. ಭಟ್ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ಜಮ್ಮು-ಕಾಶ್ಮೀರ ವಕ್ತಾರ ಆಲ್ತಫ್ ಠಾಕೂರ್, ಮಾನವೀಯತೆ ಮತ್ತು ಶಾಂತಿಗೆ ಈ ಉಗ್ರರು ಬಹುದೊಡ್ಡ ಶತ್ರುಗಳಾಗಿದ್ದಾರೆ. ಮುಗ್ಧ ನಾಗರಿಕರನ್ನು ಕೊಲ್ಲುವುದು ತಮ್ಮ ಶೌರ್ಯ ಎಂದು ಭಾವಿಸಿದ್ದಾರೆ. ಆದರೆ ನಿಜಕ್ಕೂ ಅದು ಅವರ ಹೇಡಿತನದ ಪರಮಾವಧಿ ಎಂದು ಹೇಳಿದ್ದಾರೆ. ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ, ಇದು ನಿಜಕ್ಕೂ ದುರಂತ. ಸಮೀರ್ ಭಟ್ ಹತ್ಯೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅವರು ತುಂಬ ಒಳ್ಳೆಯ ಕೆಲಸಗಳನ್ನು ಮಾಡುವ ಇಚ್ಛೆ ಹೊಂದಿದ್ದರು. ಇದೇ ಕಾರಣಕ್ಕಾಗಿಯೇ ಉಗ್ರರಿಂದ ಹತ್ಯೆಗೀಡಾಗಿದ್ದಾರೆ ಎಂದು ನೋವು ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಪಿಡಿಪಿ ಪಕ್ಷ, ಅಪ್ನಿ ಪಾರ್ಟಿಗಳೂ ಸಮೀರ್ ಭಟ್ ಹತ್ಯೆಯನ್ನು ಖಂಡಿಸಿವೆ.
ಇದನ್ನೂ ಓದಿ: ಬಟ್ಟೆಯೊಳಗೆ 52 ಹಲ್ಲಿ ಮತ್ತು ಹಾವುಗಳನ್ನು ಅಡಗಿಸಿಟ್ಟುಕೊಂಡು ಗಡಿ ದಾಟುತ್ತಿದ್ದ ವ್ಯಕ್ತಿಯ ಬಂಧನ
Published On - 9:49 am, Thu, 10 March 22