Video: ಯುದ್ಧಾತಂಕ ಎದುರಾದ ಉಕ್ರೇನ್​​ನಿಂದ 242 ಭಾರತೀಯರನ್ನು ಕರೆತಂದ ಏರ್​ ಇಂಡಿಯಾ ವಿಮಾನ

| Updated By: Lakshmi Hegde

Updated on: Feb 23, 2022 | 10:26 AM

ಏರ್​ ಇಂಡಿಯಾ ಈ ಹಿಂದೆ ಉಕ್ರೇನ್​ಗೆ ಯಾವುದೇ ವಾಣಿಜ್ಯ ವಿಮಾನ ಕಾರ್ಯಾಚರಣೆ ನಡೆಸಿರಲಿಲ್ಲ. ಇದೀಗ ಏರ್​ ಇಂಡಿಯಾ ವಿಮಾನ ಸಂಚಾರ ಪ್ರಾರಂಭ ಮಾಡಿದ ಬೆನ್ನಲ್ಲೇ, ಭಾರತದ ಇತರ ವಿಮಾನ ಆಪರೇಟರ್​ಗಳೂ ಕೂಡ ಆಸಕ್ತಿ ತೋರಿಸುತ್ತಿದ್ದಾರೆ.

Video: ಯುದ್ಧಾತಂಕ ಎದುರಾದ ಉಕ್ರೇನ್​​ನಿಂದ 242 ಭಾರತೀಯರನ್ನು ಕರೆತಂದ ಏರ್​ ಇಂಡಿಯಾ ವಿಮಾನ
ಉಕ್ರೇನ್​​ನಿಂದ ಭಾರತಕ್ಕೆ ಬಂದವರು
Follow us on

ಮುಂಬೈ: ಉಕ್ರೇನ್​-ರಷ್ಯಾ ಗಡಿಯಲ್ಲಿ (Russia-Ukraine Border) ಉದ್ವಿಗ್ನತೆ ಮುಂದುವರಿದ ಬೆನ್ನಲ್ಲೇ ಭಾರತ ಉಕ್ರೇನ್​​​ನಿಂದ ಭಾರತೀಯರನ್ನು ಕರೆತರಲು ನಿನ್ನೆಯಿಂದ ಏರ್​ ಇಂಡಿಯಾ ವಿಮಾನ ಸಂಚಾರ ಶುರು ಮಾಡಿದೆ. ನಿನ್ನೆ (ಫೆ.22) ಈ ವಿಮಾನದಲ್ಲಿ ಉಕ್ರೇನ್​​ನಿಂದ 242 ಭಾರತೀಯರು ವಾಪಸ್​ ದೇಶಕ್ಕೆ ಬಂದಿದ್ದಾರೆ. ಉಕ್ರೇನ್​​ನಿಂದ ಬಂದ ಏರ್​ ಇಂಡಿಯಾ ವಿಮಾನ ನಿನ್ನೆ ರಾತ್ರಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport) ಲ್ಯಾಂಡ್ ಆಗಿದೆ. ಈ ಬಗ್ಗೆ ಏರ್ ಇಂಡಿಯಾ ಪ್ರಕಟಣೆ ಹೊರಡಿಸಿದ್ದು, ಉಕ್ರೇನ್​​ನಲ್ಲಿರುವ ಭಾರತೀಯರನ್ನು ವಾಪಸ್​ ಕರೆತರಲು ಮಂಗಳವಾರ ಮುಂಜಾನೆ 7.30ಕ್ಕೆ, ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನ ಹೊರಟಿತ್ತು. ಸುಮಾರು 242 ಪ್ರಯಾಣಿಕರನ್ನು ಒಳಗೊಂಡ ಈ ವಿಮಾನ ಕೈವ್​​ನಿಂದ ಸಂಜೆ 5.40ಕ್ಕೆ ಟೇಕ್​ ಆಫ್​ ಆಯಿತು. ರಾತ್ರಿ 10.15ರ ಹೊತ್ತಿಗೆ ದೆಹಲಿ ತಲುಪಿದೆ ಎಂದು ಮಾಹಿತಿ ನೀಡಿದೆ.

ಸದ್ಯ ಉಕ್ರೇನ್​​ನಲ್ಲಿರುವುದು ಭಾರತೀಯರಿಗೆ ಸುರಕ್ಷಿತವಲ್ಲ. ಹೀಗಾಗಿ ಇಲ್ಲಿರುವ ವಿದ್ಯಾರ್ಥಿಗಳೂ ಸೇರಿ ಎಲ್ಲರೂ ಶೀಘ್ರದಲ್ಲೇ ಭಾರತಕ್ಕೆ ಮರಳಿ ಎಂದು ಕೈವ್​​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೇಳಿತ್ತು. ಅದರಂತೆ ಏರ್​ ಇಂಡಿಯಾ ವಿಮಾನ ವ್ಯವಸ್ಥೆಯನ್ನೂ ಮಾಡಲಾಗಿದೆ. ಸದ್ಯ ಒಂದು ವಿಮಾನ ಭಾರತೀಯರನ್ನು ಕರೆತಂದಿದ್ದು, ಇನ್ನೊಂದು ಫ್ಲೈಟ್​ ಗುರುವಾರ ಹಾಗೂ ಮತ್ತೊಂದು ವಿಮಾನ ಶನಿವಾರ ಉಕ್ರೇನ್​ನಿಂದ ಭಾರತೀಯರನ್ನು ಕರೆ ತರಲಿದೆ.

ಏರ್​ ಇಂಡಿಯಾ ಈ ಹಿಂದೆ ಉಕ್ರೇನ್​ಗೆ ಯಾವುದೇ ವಾಣಿಜ್ಯ ವಿಮಾನ ಕಾರ್ಯಾಚರಣೆ ನಡೆಸಿರಲಿಲ್ಲ. ಇದೀಗ ಏರ್​ ಇಂಡಿಯಾ ವಿಮಾನ ಸಂಚಾರ ಪ್ರಾರಂಭ ಮಾಡಿದ ಬೆನ್ನಲ್ಲೇ, ಭಾರತದ ಇತರ ವಿಮಾನ ಆಪರೇಟರ್​ಗಳೂ ಕೂಡ ಆಸಕ್ತಿ ತೋರಿಸುತ್ತಿದ್ದಾರೆ. ಉಕ್ರೇನ್​​ನಲ್ಲಿರುವ ಭಾರತೀಯರ ಬೇಡಿಕೆಯನ್ನು ನೋಡಿಕೊಂಡು ಮುಂದುವರಿಯಲಾಗುವುದು ಎಂದು ಸಿವಿಲ್​ ಏವಿಯೇಶನ್​ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸದ್ಯ ಅಲ್ಲಿ ಯುದ್ಧ  ಭೀತಿ ಇರುವ ಕಾರಣ, ಭಾರತೀಯರನ್ನು ರಕ್ಷಿಸುವ ಅಗತ್ಯವಿದೆ. ಹೀಗಾಗಿ ಹೆಚ್ಚೆಚ್ಚು ವಿಮಾನಗಳ ಕಾರ್ಯಾಚರಣೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಖಾಸಗಿ ಏರ್​​ಲೈನ್ಸ್​​ಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಮುಸ್ಲಿಂ ಕುಟುಂಬ; ಇದು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕ

Published On - 8:53 am, Wed, 23 February 22