ಹಿರಿಯ ವಕೀಲ ಸೌರಭ್ ಕಿರ್ಪಲ್ರನ್ನು ದೆಹಲಿ ಹೈಕೋರ್ಟ್ನ ನ್ಯಾಯಾಧೀಶರನ್ನಾಗಿ ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಸೌರಬ್ ಕಿರ್ಪಲ್ ತಾವೊಬ್ಬರು ಸಲಿಂಗಕಾಮಿ ಎಂದು ಸ್ವಯಂ ಆಗಿಯೇ ಘೋಷಿಸಿಕೊಂಡವರು. ಇದೀಗ ಇವರು ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರೆ, ದೇಶದಲ್ಲಿಯೇ ಮೊದಲ ಬಾರಿಗೆ ಒಬ್ಬರು ಎಲ್ಜಿಬಿಟಿ ಸಮುದಾಯಕ್ಕೆ ಸೇರಿದ ನ್ಯಾಯಾಧೀಶರನ್ನು ನೇಮಕ ಮಾಡಿದಂತೆ ಆಗುತ್ತದೆ.
ನವೆಂಬರ್ 11ರಂದು, ಸಿಜೆಐ ಎನ್.ವಿ.ರಮಣ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ನಡೆಸಿದ ಸಭೆಯಲ್ಲಿ ಸೌರಭ್ ಕಿರ್ಪಲ್ ಮತ್ತು ಇನ್ನಿಬ್ಬರು ನ್ಯಾಯಾಧೀಶರಾದ ಯುಯು ಲಲಿತ್ ಮತ್ತು ಎಎಂ ಖಾನ್ವಿಲ್ಕರ್ ಅವರ ಹೆಸರನ್ನು ಅಂತಿಮಗೊಳಿಸಿ, ದೆಹಲಿ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಶಿಫಾರಸ್ಸು ಮಾಡಲಾಗಿದೆ. ಕಿರ್ಪಲ್ರನ್ನು ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡುವ ಸಂಬಂಧ ಸುಪ್ರೀಂಕೋರ್ಟ್ ಕೊಲಿಜಿಯಂ ವಿಳಂಬ ಮಾಡುತ್ತಲೇ ಬಂದಿತ್ತು. ಇತ್ತೀಚೆಗಷ್ಟೇ ಕಿರ್ಪಲ್ರಿಗೆ ಹಿರಿಯ ವಕೀಲ ಎಂದು ಬಡ್ತಿ ನೀಡಲಾಗಿತ್ತು.
2017ರಲ್ಲಿ, ಸೌರಭ್ ಕಿರ್ಪಲ್ರನ್ನು ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಬೇಕು ಎಂದು ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ದೆಹಲಿ ಹೈಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು. ಆದರೆ ಅವರ ಪದೋನ್ನತಿ ಪರಿಗಣನೆಯನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ಮೂರು ಬಾರಿ ಮುಂದೂಡಿತ್ತು. ಅದಾದ ಬಳಿಕ ಈ ಬಾರಿಯ ಮಾರ್ಚ್ ತಿಂಗಳಲ್ಲಿ, ಸೌರಬ್ ಕಿರ್ಪಲ್ರಿಗೆ ದೆಹಲಿ ಕೋರ್ಟ್ನ ನ್ಯಾಯಮೂರ್ತಿಯನ್ನಾಗಿ ಪದೋನ್ನತಿ ನೀಡುವ ಸಂಬಂಧ ನಿಮ್ಮ ಒಲವು ಏನೆಂಬುದನ್ನು ಸ್ಪಷ್ಟಪಡಿಸಿ ಎಂದು ಆಗ ಸಿಜೆಐ ಆಗಿದ್ದ ಎಸ್. ಎ.ಬಾಬ್ಡೆ ಕೇಂದ್ರ ಸರ್ಕಾರವನ್ನು ಕೇಳಿದ್ದರು. ಆಗಲೂ ಸಹ ಅವರ ಪದೋನ್ನತಿಗೆ ನಿರಾಕರಣೆಯೇ ಸಿಕ್ಕಿತ್ತು.
Published On - 12:39 pm, Tue, 16 November 21