AAI Recruitment 2026: ಕೇಂದ್ರ ಸರ್ಕಾರಿ ಉದ್ಯೋಗವಕಾಶ; 389 ಹುದ್ದೆಗಳಿಗೆ ಅರ್ಜಿ ಆಹ್ವಾನ, 1.80 ಲಕ್ಷದವರೆಗೆ ವೇತನ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) 389 ಮ್ಯಾನೇಜರ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶ. ಆಕರ್ಷಕ ವೇತನ ಶ್ರೇಣಿ ಹೊಂದಿರುವ ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 7 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವಿವರವಾದ ಅರ್ಹತೆ, ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆಗಾಗಿ ಸಂಪೂರ್ಣ ಅಧಿಸೂಚನೆಯನ್ನು ಓದಿ.

AAI Recruitment 2026: ಕೇಂದ್ರ ಸರ್ಕಾರಿ ಉದ್ಯೋಗವಕಾಶ; 389 ಹುದ್ದೆಗಳಿಗೆ ಅರ್ಜಿ ಆಹ್ವಾನ, 1.80 ಲಕ್ಷದವರೆಗೆ ವೇತನ
ಕೇಂದ್ರ ಸರ್ಕಾರಿ ಉದ್ಯೋಗವಕಾಶ
Image Credit source: Getty Images

Updated on: Aug 12, 2026 | 4:36 PM

ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಭರ್ಜರಿ ಉದ್ಯೋಗಾವಕಾಶ ನೀಡಿದೆ. AAI ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಮ್ಯಾನೇಜರ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಒಟ್ಟು 389 ಹುದ್ದೆಗಳನ್ನು ನಿಯಮಿತವಾಗಿ ಭರ್ತಿ ಮಾಡಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2026ರ ಸೆಪ್ಟೆಂಬರ್ 7ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆ ಆಗಸ್ಟ್ 8ರಿಂದ ಆರಂಭವಾಗಿದೆ.

ಯಾವ ಹುದ್ದೆಗಳಿಗೆ ನೇಮಕಾತಿ?

ಈ ನೇಮಕಾತಿಯಲ್ಲಿ ಮುಖ್ಯವಾಗಿ ಮ್ಯಾನೇಜರ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಒಟ್ಟು 389 ಹುದ್ದೆಗಳು ಖಾಲಿ ಇದ್ದು, ವಾಸ್ತುಶಿಲ್ಪ, ಹಣಕಾಸು, ಅಗ್ನಿಶಾಮಕ ಸೇವೆ, ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಕಾರ್ಪೊರೇಟ್ ಪ್ಲಾನಿಂಗ್, ನಿರ್ವಹಣಾ ಸೇವೆಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉದ್ಯೋಗಾವಕಾಶಗಳಿವೆ.

ಶೈಕ್ಷಣಿಕ ಅರ್ಹತೆ ಏನು?

ಹುದ್ದೆಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆ ಬದಲಾಗುತ್ತದೆ. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ, ಐಟಿಐ, ಬಿಇ/ಬಿಟೆಕ್, ಎಂಬಿಎ, ಎಂಸಿಎ ಮುಂತಾದ ವಿದ್ಯಾರ್ಹತೆಗಳನ್ನು ಹೊಂದಿರಬೇಕು. ಕೆಲವು ಹುದ್ದೆಗಳಿಗೆ ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವವೂ ಅಗತ್ಯವಿದೆ. ಹೀಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ತಮ್ಮ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ ಮತ್ತು ಅನುಭವದ ಮಾನದಂಡಗಳನ್ನು ಪರಿಶೀಲಿಸಬೇಕು.

ವಯೋಮಿತಿ ಎಷ್ಟು?

ಅಭ್ಯರ್ಥಿಗಳ ವಯಸ್ಸನ್ನು 2026ರ ಸೆಪ್ಟೆಂಬರ್ 7ರ ಆಧಾರದ ಮೇಲೆ ಪರಿಗಣಿಸಲಾಗುತ್ತದೆ. ಮ್ಯಾನೇಜರ್ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 32 ವರ್ಷ ಹಾಗೂ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಗರಿಷ್ಠ 27 ವರ್ಷ ನಿಗದಿಪಡಿಸಲಾಗಿದೆ. ಸರ್ಕಾರಿ ನಿಯಮಗಳ ಪ್ರಕಾರ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ (ನಾನ್-ಕ್ರೀಮಿ ಲೇಯರ್) ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಲಭ್ಯವಿದೆ.

ತಿಂಗಳಿಗೆ 1.80 ಲಕ್ಷದವರೆಗೆ ವೇತನ:

AAIನಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆಕರ್ಷಕ ವೇತನದ ಜೊತೆಗೆ ನಿಯಮಾನುಸಾರ ವಿವಿಧ ಸರ್ಕಾರಿ ಸೌಲಭ್ಯಗಳು ದೊರೆಯಲಿವೆ. ಮ್ಯಾನೇಜರ್ ಹುದ್ದೆಗೆ 60,000ರಿಂದ 1,80,000ರೂ. ಹಾಗೂ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ 40,000ರಿಂದ 1,40,000 ರೂ. ವೇತನ ಶ್ರೇಣಿ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಹುದ್ದೆಗೆ ಅನುಗುಣವಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿವಿಧ ಹಂತಗಳಿರುತ್ತವೆ. ಸಾಮಾನ್ಯವಾಗಿ ಮೊದಲ ಹಂತವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳಿರುವುದಿಲ್ಲ. CBT ಬಳಿಕ ಅರ್ಜಿ ಪರಿಶೀಲನೆ, ಮುಂದಿನ ಹಂತದ ಪರೀಕ್ಷೆಗಳು ಮತ್ತು ಹುದ್ದೆಗೆ ಅನುಗುಣವಾಗಿ ಸಂದರ್ಶನ ನಡೆಯಲಿದೆ. ಪೋಸ್ಟ್ ಕೋಡ್ 1ರಿಂದ 11ರವರೆಗಿನ ಹುದ್ದೆಗಳಿಗೆ ಸಂದರ್ಶನವೂ ಆಯ್ಕೆ ಪ್ರಕ್ರಿಯೆಯ ಭಾಗವಾಗಿದೆ.

ಅಗ್ನಿಶಾಮಕ ಸೇವೆಗಳ ಹುದ್ದೆಗೆ ವಿಶೇಷ ಪರೀಕ್ಷೆ:

ಅಗ್ನಿಶಾಮಕ ಸೇವೆಗಳ ಮ್ಯಾನೇಜರ್ ಹುದ್ದೆಗೆ CBT ಬಳಿಕ ದೈಹಿಕ ಮಾಪನ ಪರೀಕ್ಷೆ, ಚಾಲನಾ ಪರೀಕ್ಷೆ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆ ನಡೆಸಲಾಗುತ್ತದೆ. ಈ ಹಂತಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ನಂತರ ಸಂದರ್ಶನಕ್ಕೆ ಕರೆಯಲಾಗುತ್ತದೆ. ಆದ್ದರಿಂದ ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಶೈಕ್ಷಣಿಕ ಅರ್ಹತೆಯ ಜೊತೆಗೆ ದೈಹಿಕ ಮಾನದಂಡಗಳನ್ನೂ ಪೂರೈಸಬೇಕಾಗುತ್ತದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು AAIನ ಅಧಿಕೃತ ನೇಮಕಾತಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಭರ್ತಿ ಮಾಡುವಾಗ ಶೈಕ್ಷಣಿಕ ಅರ್ಹತೆ, ವಯಸ್ಸು, ಕೆಲಸದ ಅನುಭವ ಸೇರಿದಂತೆ ಎಲ್ಲ ವಿವರಗಳನ್ನು ಸರಿಯಾಗಿ ನಮೂದಿಸಬೇಕು. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ಬಳಿಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ತಮ್ಮ ಹುದ್ದೆಗೆ ನಿಗದಿಪಡಿಸಿರುವ ಅರ್ಹತೆಗಳನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ.

ಪ್ರಮುಖ ದಿನಾಂಕಗಳು:

AAI ನೇಮಕಾತಿಗೆ ಆಗಸ್ಟ್ 8, 2026ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 7, 2026 ಕೊನೆಯ ದಿನಾಂಕವಾಗಿದೆ. ಒಟ್ಟು 389 ಹುದ್ದೆಗಳಿಗೆ ನಡೆಯುತ್ತಿರುವ ಈ ನೇಮಕಾತಿಯಲ್ಲಿ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಅರ್ಜಿ ಸಲ್ಲಿಸುವುದು ಉತ್ತಮ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us