ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ (Bhagwant Mann) ಇಂದು ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹುಟ್ಟೂರಾದ ಖಟ್ಕರ್ ಕಲಾನ್ನಲ್ಲಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಅದ್ದೂರಿಯಾಗಿ ನಡೆಯಲಿದ್ದು, ದೆಹಲಿ ಮುಖ್ಯಮಂತ್ರಿ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿ ಪಕ್ಷದ ವಿವಿಧ ಪ್ರಮುಖ ಮುಖಂಡರು ಪಾಲ್ಗೊಳ್ಳುವರು. ಪಂಜಾಬ್ ಸಿಎಂ ಆಗಿ ಕೇವಲ ನಾನೊಬ್ಬನೇ ಪ್ರಮಾಣ ವಚನ ಸ್ವೀಕಾರ ಮಾಡುವುದಿಲ್ಲ, ಈ ರಾಜ್ಯದ 3 ಕೋಟಿ ಜನರೂ ನನ್ನೊಂದಿಗೆ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡುತ್ತಾರೆ ಎಂದು ಹೇಳಿದ್ದ ಭಗವಂತ್ ಮಾನ್, ಇಂದಿನ ಸಮಾರಂಭದಲ್ಲಿ ಭಾಗವಹಿಸುವಂತೆ ಜನರಿಗೂ ಆಮಂತ್ರಣ ನೀಡಿದ್ದಾರೆ. ಮಹಿಳೆಯರು ಹಳದಿ ಬಣ್ಣದ ದುಪ್ಪಟ್ಟಾ ಧರಿಸಿ ಬನ್ನಿ, ಪುರುಷರು ಹಳದಿ ಬಣ್ಣದ ಟೋಪಿ ಧರಿಸಿ ಬನ್ನಿ. ಈ ಬಸಂತಿ ಬಣ್ಣಕ್ಕೆ ಸಿಖ್ ಸಮುದಾಯದಲ್ಲಿ ಅತ್ಯಂತ ಪ್ರಾಮುಖ್ಯತೆ ಇದೆ ಎಂದು ಹೇಳಿದ್ದಾರೆ. ಅದರಂತೆ ಈ ಸಮಾರಂದಲ್ಲಿ ಸುಮಾರು 3 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದೂ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಪಂಜಾಬ್ನ 117 ಕ್ಷೇತ್ರಗಳಲ್ಲಿ 92 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಸಂಗ್ರೂರ್ ಜಿಲ್ಲೆಯ ಮಾನ್ ಧುರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್ನ ದಲ್ವೀರ್ ಸಿಂಗ್ ಗೋಲ್ಡಿ ವಿರುದ್ಧ ಸುಮಾರು 58,206 ಮತಗಳ ಅಂತರದಿಂದ ಗೆದ್ದಿದ್ದಾರೆ. ಗೆಲ್ಲುತ್ತಿದ್ದಂತೆ ತಾವು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವುದಿಲ್ಲ ಎಂದು ಘೋಷಿಸಿಬಿಟ್ಟಿದ್ದರು. ಅಷ್ಟೇ ಅಲ್ಲ, ತನ್ನ ಜೊತೆ ಈ ರಾಜ್ಯದ ಮೂರು ಕೋಟಿ ಜನರೂ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅವರೂ ಈ ರಾಜ್ಯದ ಮುಖ್ಯಮಂತ್ರಿಗಳೇ ಆಗುತ್ತಾರೆ ಎಂದು ವಿಡಿಯೋ ಸಂದೇಶ ನೀಡಿದ್ದರು.
ಭಗವಂತ್ ಮಾನ್ ಇಂದು ಪಂಜಾಬ್ನ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಆ ಸಮಾರಂಭದ ನಿಮಿತ್ತ ಖಟ್ಕರ್ ಕಲಾನ್ ಹಳದಿಮಯವಾಗಲಿದೆ. ಇಲ್ಲಿ ಬಸಂತಿ ಅಥವಾ ಹಳದಿ ಬಣ್ಣ ಸ್ವಾತಂತ್ರ್ಯ ಹೋರಾಟದೊಂದಿಗೆ ಗುರುತಿಸಿಕೊಂಡ ಬಣ್ಣ, ಸ್ವಾತಂತ್ರ್ಯ ಹೋರಾಟಗಾರರು ಇದೇ ಬಣ್ಣವನ್ನು ಸಂಕೇತವಾಗಿ ಬಳಸುತ್ತಿದ್ದರು. ಮಾನ್ ಕೂಡ ಸದಾ ಹಳದಿ ಬಣ್ಣದ ಪೇಟವನ್ನೇ ಧರಿಸುತ್ತಾರೆ. ನವನ್‌ಶಹರ್ ಜಿಲ್ಲೆಯ ಖಟ್ಕರ್ ಕಲಾನ್ ಹಳ್ಳಿಯಲ್ಲಿ ನಡೆಯಲಿರುವ ಸಮಾರಂಭಕ್ಕೆ 40 ಎಕರೆ ಸ್ಥಳದಲ್ಲಿ ಸಜ್ಜುಗೊಳಿಸಲಾಗಿದೆ. ವೇದಿಕೆ ಮುಂಭಾಗ ಹಳದಿ, ನೀಲಿ ಮಿಶ್ರಿತ ಪೆಂಡಾಲ್ ಹಾಕಲಾಗಿದೆ. 50 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಕುರ್ಚಿ ಮತ್ತು ನೆಲ ಸೇರಿ ಸುಮಾರು 4 ಲಕ್ಷ ಜನರು ಕುಳಿತುಕೊಳ್ಳಬಹುದಾದಷ್ಟು ದೊಡ್ಡ ಜಾಗ ನಿರ್ಮಾಣವಾಗಿದೆ.
ಸುಮಾರು 40 ಎಕರೆ ಜಾಗದಲ್ಲಿ ರೈತರ ಗೋಧಿ ಬೆಳೆಯನ್ನು ನಾಶ ಮಾಡಿ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ಎಕರೆಗೆ 46 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ. ಸಮಾರಂಭಕ್ಕೆ 25 ಸಾವಿರಗಳಷ್ಟು ವಾಹನಗಳು ಆಗಮಿಸುವ ನಿರೀಕ್ಷೆ ಇರುವುದರಿಂದ ಇಷ್ಟು ದೊಡ್ಡ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಆಪ್ ಪಕ್ಷ ಯಾವುದೇ ವಿವಿಐಪಿಗಳನ್ನೂ ಸಮಾರಂಭಕ್ಕೆ ಆಹ್ವಾನಿಸಿಲ್ಲ. ಈ ಸಮಾರಂಭಕ್ಕೆ ರಂಗ್ ದೆ ಬಸಂತಿ ಹಾಡಿನ ಥೀಮ್ ನೀಡಲಾಗಿದೆ. 10 ಸಾವಿರಕ್ಕೂ ಅಧಿಕ ರಕ್ಷಣಾ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲ ಶಾಲಾ-ಕಾಲೇಜುಗಳಿಗೂ ಜಿಲ್ಲಾಡಳಿತ ರಜೆ ನೀಡಿದೆ.
ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಯಶಸ್ಸು: ‘ಏನ್ ಬೇಕಾದ್ರೂ ಆಗಬಹುದು’ ಅಂತ ಮತ್ತೆ ಹೇಳಿದ ಅನುಪಮ್ ಖೇರ್
Published On - 9:35 am, Wed, 16 March 22