AAP Protests : ಸಚಿವರಾದ ಅತಿಶಿ, ಸೌರಭ್ ಭಾರದ್ವಾಜ್ ಬಂಧನ
ದೆಹಲಿ ಅಬಕಾರಿ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರುವಾರ ರಾತ್ರಿ (ಮಾ.21)ರಂದು ಇಡಿ ಬಂಧಿಸಿತ್ತು. ಇದೀಗ ಬಂಧನವನ್ನು ವಿರೋಧಿಸಿ ದೆಹಲಿಯಲ್ಲಿ ಎಎಪಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಸಚಿವರಾದ ಅತಿಶಿ, ಸೌರಭ್ ಭಾರದ್ವಾಜ್ ಬಂಧನ ಮಾಡಲಾಗಿದೆ.
ದೆಹಲಿ, ಮಾ22: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ (Delhi Excise Policy) ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಗುರುವಾರ ರಾತ್ರಿ (ಮಾ.21)ರಂದು ಇಡಿ ಬಂಧಿಸಿತ್ತು. ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಅವರನ್ನು ಇಡಿ ತನ್ನ ಕಸ್ಟಡಿಯಲ್ಲಿ ಇರಿಸಿಕೊಂಡಿದೆ. ಇದೀಗ ಬಂಧನವನ್ನು ವಿರೋಧಿಸಿ ದೆಹಲಿಯಲ್ಲಿ ಎಎಪಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಸಚಿವರಾದ ಅತಿಶಿ, ಸೌರಭ್ ಭಾರದ್ವಾಜ್ ಬಂಧನ ಮಾಡಲಾಗಿದೆ.
ಅರವಿಂದ್ ಕೇಜ್ರಿವಾಲ್ ಅವರ ಕುಟುಂಬ ಸದಸ್ಯರನ್ನು ಕೂಡ ಗೃಹಬಂಧನದಲ್ಲಿ ಇರಿಸಲಾಗಿದೆ. ಅರವಿಂದ್ ಕೇಜ್ರಿವಾಲ್ ಅವರ ತಾಯಿ ಆರೋಗ್ಯ ಕೂಡ ಸರಿಯಾಗಿಲ್ಲ, ಅವರನ್ನು ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಮರಳಿದ್ದಾರೆ. ಕುಟುಂಬದ ಸದಸ್ಯರಿಗೆ ಯಾರನ್ನೂ ಭೇಟಿಯಾಗಲು ಅವಕಾಶವಿಲ್ಲ. ಮತ್ತೊಂದು ಕಡೆ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ. ಪಕ್ಷದ ಕಾರ್ಯಕರ್ತರಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ವಾಧಿಕಾರ ರೀತಿಯಲ್ಲಿ ವರ್ತಿಸುತ್ತಿದೆ. ಇದು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಮಾಡುತ್ತಿರುವ ಪ್ಲಾನ್, ಜನರು ಎಲ್ಲೇ ಇದ್ದರೂ ಪ್ರತಿಭಟನೆ ಮಾಡುತ್ತಾರೆ, ಇದು ನಿಲ್ಲುವುದಿಲ್ಲ. ಕ್ರಾಂತಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಭಾರದ್ವಾಜ್ ಹೇಳಿದರು.
ಅವರ ಕುಟುಂಬ ಸದಸ್ಯರು, ವಕೀಲರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ನಾವು ನ್ಯಾಯಾಲಯವನ್ನು ಕೋರುತ್ತೇವೆ ಎಂದು ಭಾರದ್ವಾಜ್ ಹೇಳಿದರು. ಇನ್ನು ಈ ಬಗ್ಗೆ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಸಚಿವೆ ಅತಿಶಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ದೆಹಲಿ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ಮೊದಲಿ ನಮ್ಮ ಮುಖ್ಯಮಂತ್ರಿಯವರನ್ನು ಬಂಧಿಸಿದ್ದಾರೆ. ಇದೀಗ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಪ್ರತಿಭಟನೆಗಾರರನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.
ಬಂಧನದ ಬಗ್ಗೆ ದೆಹಲಿ ಪೊಲೀಸರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಎಎಪಿ ಕಚೇರಿ ಮತ್ತು ಸುತ್ತಮುತ್ತ ಸೆಕ್ಷನ್ 144 ಹೇರಲಾಗಿದ್ದು, ಪ್ರತಿಭಟನಾಕಾರರನ್ನು ಬಂಧಿಸಿ, ಎಎಪಿ ಕಚೇರಿ ಮುಂದೆ ಬಿಡಲಾಗಿದೆ. ಡೆಪ್ಯುಟಿ ಕಮಿಷನರ್ ಆಫ್ ಪೋಲೀಸ್ (ಕೇಂದ್ರ) ಹರ್ಷವರ್ಧನ್ ಅವರು ನ್ಯಾಯಾಲಯದ ಬಳಿ ಸಂಚಾರ ವ್ಯತ್ಯಯವನ್ನು ಮಾಡಲಾಗಿದೆ ಮತ್ತು ಡಿಡಿಯು ಮಾರ್ಗದಲ್ಲಿ ಜನರು ಪ್ರತಿಭಟನೆ ಮಾಡಲು ಅವಕಾಶವಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ತನ್ನ ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಅರವಿಂದ್ ಕೇಜ್ರಿವಾಲ್
ಕೇಜ್ರಿವಾಲ್ ಅವರನ್ನು ರೋಸ್ ಅವೆನ್ಯೂ ನ್ಯಾಯಾಲಯ ಮುಂದೆ ಹಾಜರು ಪಡಿಸುವ ಮುನ್ನ ರೋಸ್ ಅವೆನ್ಯೂ ನ್ಯಾಯಾಲಯದ ಬಳಿ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ಇದು ಪ್ರತಿಭಟನಾ ಸ್ಥಳವಲ್ಲ ಮತ್ತು ಹಲವಾರು ಪ್ರಮುಖ ಕಚೇರಿಗಳು ಪ್ರದೇಶದ ಸುತ್ತಲೂ ಇರುವುದರಿಂದ, ಸೆಕ್ಷನ್ 144 ಅನ್ನು ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:54 am, Fri, 22 March 24