ದೆಹಲಿ: ಬಾಲಾಕೋಟ್ ವಾಯುದಾಳಿಯ ಹೀರೊ ಅಭಿನಂದನ್ ವರ್ಧಮಾನ್ ಅವರಿಗೆ ವಾಯುಪಡೆಯು ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಿದೆ. ರಷ್ಯಾ ನಿರ್ಮಿತ ಮಿಗ್-21 ಯುದ್ಧವಿಮಾನದಿಂದ ಅಮೆರಿಕ ನಿರ್ಮಿತ ಎಫ್-16 ಯುದ್ಧವಿಮಾನ ಹೊಡೆದುರುಳಿಸಿದ ವಿಶ್ವದ ಮೊದಲ ಮೊದಲ ಪೈಲಟ್ ಎಂಬ ಶ್ರೇಯಕ್ಕೂ ಅಭಿನಂದನ್ ಪಾತ್ರರಾಗಿದ್ದಾರೆ. 2019ರ ಫೆಬ್ರುವರಿ ತಿಂಗಳಲ್ಲಿ ನಡೆದಿದ್ದ ವಾಯುದಾಳಿಯಲ್ಲಿ ನಿರ್ವಹಿಸಿದ ಪಾತ್ರಕ್ಕಾಗಿ ಅಭಿನಂದನ್ ಅವರಿಗೆ ಈ ಹಿಂದೆ ಶೌರ್ಯಚಕ್ರ ನೀಡಿ ಗೌರವಿಸಲಾಗಿತ್ತು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಭಿನಂದನ್ ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ್ದರು. ಆದರೆ ಅವರಿದ್ದ ಮಿಗ್-21 ಹಾನಿಗೀಡಾದ ಕಾರಣ ಪ್ಯಾರಾಚೂಟ್ ಸಹಾಯದಿಂದ ಕೆಳಗೆ ಜಿಗಿದು, ಜನರಿಗೆ ಸಿಕ್ಕಿಬಿದ್ದಿದ್ದರು. ನಂತರ ಪಾಕ್ ಯೋಧರು ಅವರನ್ನು ಬೇರೆಡೆಗೆ ಕರೆದೊಯ್ದಿದ್ದರು.
ಬಂಧನದ ಅವಧಿಯಲ್ಲಿಯೂ ಅವರು ಆತ್ಮಗೌರವ ಕಾಪಾಡಿಕೊಂಡ ರೀತಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ತಲೆ ಎತ್ತಿಯೇ ಗರ್ವದಿಂದ ಎಲ್ಲೆಡೆ ನಡೆಯುತ್ತಿದ್ದ ವೈಖರಿಯನ್ನೂ ಜನರು ಮೆಚ್ಚಿಕೊಂಡಿದ್ದರು.
ಅಭಿನಂದನ್ ಅವರಿದ್ದ ವಾಯುಪಡೆಯ 51ನೇ ಸ್ಕ್ವಾರ್ಡನ್ಗೂ ಭಾರತ ಸರ್ಕಾರದಿಂದ ವಿಶೇಷ ಮಾನ್ಯತೆ ಸಿಕ್ಕಿತ್ತು. ಪಾಕಿಸ್ತಾನ ವಾಯುಪಡೆಯು ಫೆಬ್ರುವರಿ 27, 2019ರಂದು ಭಾರತದ ಮೇಲೆ ದಾಳಿ ನಡೆಸಲು ಮಾಡಿದ ಪ್ರಯತ್ನವನ್ನು ಹಿಮ್ಮೆಟ್ಟಿಸುವಲ್ಲಿ ಈ ತುಕಡಿಯ ಕಾರ್ಯಕ್ಷಮತೆ ಪರಿಣಾಮಕಾರಿಯಾಗಿತ್ತು. ಕೇಂದ್ರೀಯ ಮೀಸಲು ಪೊಲೀಸ್ ಸಿಬ್ಬಂದಿ ಇದ್ದ ಬಸ್ ಒಂದರ ಮೇಲೆ ಉಗ್ರರು ನಡೆಸಿದ ಬಾಂಬ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತವು ಬಾಲಾಕೋಟ್ನಲ್ಲಿದ್ದ ಉಗ್ರಗಾಮಿ ಶಿಬಿರಗಳ ಮೇಲೆ ದಾಳಿ ನಡೆಸಿತ್ತು.
ಇದನ್ನೂ ಓದಿ: Balakot Lessons: ಅಂದು ಪಾಕ್ ಯುದ್ಧವಿಮಾನಗಳು ಭಾರತದತ್ತ ಬಾರದಿದ್ದರೆ ಈಗ ಲಡಾಖ್ ಸಂಘರ್ಷ ಇಷ್ಟು ಬೇಗ ಕೊನೆಯಾಗುತ್ತಿತ್ತೇ?
ಇದನ್ನೂ ಓದಿ: ಬಾಲಾಕೋಟ್‌ನಲ್ಲಿ ಭಾರತ ಸೇನಾ ದಾಳಿ ನಡೆಸಿದ್ದು ನಿಜ; ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅಧಿಕೃತವಾಗಿ ಒಪ್ಪಿಕೊಂಡ ಪಾಕ್