ಅಹಮದ್​ನಗರದ 8,000 ಮಕ್ಕಳಲ್ಲಿ ಕೊವಿಡ್-19 ಸೋಂಕು, ಮಹಾರಾಷ್ಟ್ರಕ್ಕೆ ಈಗಲೇ ಕೊರನಾ ಸೋಂಕಿನ 3ನೇ ಅಲೆ ಅಪ್ಪಳಿಸಿದೆಯೇ?

ಅಹಮದ್​ನಗರದ 8,000 ಮಕ್ಕಳಲ್ಲಿ ಕೊವಿಡ್-19 ಸೋಂಕು, ಮಹಾರಾಷ್ಟ್ರಕ್ಕೆ ಈಗಲೇ ಕೊರನಾ ಸೋಂಕಿನ 3ನೇ ಅಲೆ ಅಪ್ಪಳಿಸಿದೆಯೇ?
ಪ್ರಾತಿನಿಧಿಕ ಚಿತ್ರ

ಅಹಮದ್​​ನಗರ ಜಿಲ್ಲೆಯಲ್ಲಿ ಸುಮಾರು 8,000 ಹೆಚ್ಚು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೋವಿಡ್-19 ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಂಚ ನಿರಾಳವಾಗಿದ್ದ ಜಿಲ್ಲಾಡಳಿತ ಇದೀಗ ಸೋಂಕಿನ 3ನೇ ಅಲೆ ತಡೆಯಲು ಮತ್ತೊಮ್ಮೆ ಸೊಂಟಕಟ್ಟಿ ನಿಂತಿದೆ.

Arun Belly

| Edited By: Ghanashyam D M | ಡಿ.ಎಂ.ಘನಶ್ಯಾಮ

May 31, 2021 | 5:03 PM

ನವದೆಹಲಿ: ಭಾರತದಲ್ಲಿ ಕೋವಿಡ್-19 ಸೋಂಕಿನ ಮೂರನೇ ಅಲೆ ಸೆಪ್ಟಂಬರ್-ಅಕ್ಟೋಬರ್​ನಲ್ಲಿ ಅಪ್ಪಳಿಸಲಿದೆ ಎಂದು ಹಲವಾರು ತಜ್ಞರು ಹೇಳಿದ್ದಾರೆ. ಆದರೆ, ಎರಡನೇ ಅಲೆಯಲ್ಲಿ ಅತಿ ಹೆಚ್ಚು ತೊಂದರೆಗೊಳಗಾದ ರಾಜ್ಯಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದಲ್ಲಿ ಅದು ಈಗಾಗಲೇ ಬಂದುಬಿಟ್ಟಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅಹಮದ್​​ನಗರ ಜಿಲ್ಲೆಯಲ್ಲಿ ಸುಮಾರು 8,000 ಹೆಚ್ಚು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೋವಿಡ್-19 ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಂಚ ನಿರಾಳವಾಗಿದ್ದ ಜಿಲ್ಲಾಡಳಿತ ಇದೀಗ ಸೋಂಕಿನ 3ನೇ ಅಲೆ ತಡೆಯಲು ಮತ್ತೊಮ್ಮೆ ಸೊಂಟಕಟ್ಟಿ ನಿಂತಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅಧಿಕಾರಿಯೊಬ್ಬರು, ‘8,000 ಕ್ಕಿಂತ ಹೆಚ್ಚು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಆದರೆ, ಸೋಂಕನ್ನು ನಿರ್ವಹಿಸಲು ನಮ್ಮ ಪಡೆ ಕಾರ್ಯನಿರತವಾಗಿದೆ’ ಅಂತ ಹೇಳಿದ್ದಾರೆ.

ಮಕ್ಕಳಲ್ಲಿ ಸೋಂಕು ಪತ್ತೆಯಾಗುತ್ತಿರುವುದರಿಂದ ಮಹಾರಾಷ್ಟ್ರದಲ್ಲಿ ಮೂರನೇ ಅಲೆ ದಾಳಿಯಿಟ್ಟುಬಿಟ್ಟಿದೆಯೇ ಎಂಬ ಅನುಮಾನ ಅಧಿಕಾರಿಗಳನ್ನು ಕಾಡುತ್ತಿದೆ. ತಜ್ಞರ ಪ್ರಕಾರ ಈ ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಮೂರನೇ ಅಲೆ ಆಗಸ್ಟ್-ಸೆಪ್ಟೆಂಬರ್​ನಲ್ಲಿ ದಾಂಗುಡಿಯಿಡಲಿದೆ. ಆದರೆ,ಮೊದಲ ಅಲೆ ತಗ್ಗಿದಾಗ ಎರಡನೇ ಅಲೆ ಬಗ್ಗೆ ನಿರ್ಲಕ್ಷ್ಯವಹಿಸಿದ್ದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮೂರನೇ ಅಲೆಯ ದಾಲಿಯನ್ನು ಎದುರಿಸಲು ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸಾಂಗ್ಲಿ ಜಿಲ್ಲೆಯ ಶಾಸಕ ಸಂಗ್ರಾಮ್ ಜಗತಾಪ್ ಅವರು ಅದನ್ನೇ ಹೇಳಿದ್ದಾರೆ.

‘ಎರಡನೇ ಅಪ್ಪಳಿಸುವ ಮೊದಲು ನಾವು ಯಾಮಾರಿದ್ದೆವು. ಸೋಂಕಿತರ ಸಂಖ್ಯೆ ಮಿತಿಮೀರಿದಾಗ ಬೆಡ್​ ಮತ್ತು ಆಕ್ಸಿಜನ್ ಸಿಲಿಂಡರ್​ಗಳ ತೀವ್ರ ಅಭಾವ ಎದುರಿಸಬೇಕಾಯಿತು. ನಾವೀಗ ಪಾಠ ಕಲಿತಿದ್ದೇವೆ ಮತ್ತು ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಜಿಲ್ಲೆಯಲ್ಲಿ ಸ್ಥಾಪಿಸಿದ್ದ ಕೋವಿಡ್​ ಆರೈಕೆ ಕೇಂದ್ರಗಳನ್ನು ಸೋಂಕಿತರ ಸಂಖ್ಯೆ ಪೂರ್ತಿ ಕಡಿಮೆಯಾದರೂ ಮುಚ್ಚುವುದಿಲ್ಲ. ಅವು ಪುನಃ ಬೇಕಾಗಬಹುದು ಅಂತ ಅಂದುಕೊಂಡಿದ್ದೇವೆ,’ ಎಂದು ಜಗತಾಪ್ ಹೇಳಿದ್ದಾರೆ.

ಮೂರನೇ ಅಲೆ ಬಂದಾಗ ಮಕ್ಕಳು ಹೆಚ್ಚು ತೊಂದರೆಗೊಳಗಾಗಲಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಅವರು ಹಾಗೆ ಹೇಳುವ ಹಿಂದೆ ಕಾರಣವಿದೆ. ಮಾರನೇ ಅಲೆ ಅಪ್ಪಳಿಸುವ ಮೊದಲು ಮಧ್ಯವಯಸ್ಕರು, ಹಿರಿಯರಲ್ಲಿ ಅನೇಕರು ಲಸಿಕೆ ಹಾಕಿಸಿಕೊಂಡಿರುತ್ತಾರೆ. ಲಸಿಕೆ ಹಾಕಿಸಿಕೊಂಡಿರದಿದ್ದರೂ ರೋಗ ನಿರೋಧಕ ಶಕ್ತಿ ಬೆಳೆದಿರುವ ಸಾಧ್ಯತೆ ಇರುತ್ತದೆ. ಹಾಗಾಗಿ, ಕೊರೋನಾ ವೈರಸ್ ಲಸಿಕೆ ಹಾಕಿಸಿಕೊಂಡಿರದ ಮಕ್ಕಳ ಮೇಲೆ ಆಕ್ರಮಣ ಮಾಡಲಿದೆ ಅನ್ನುವುದು ಅವರ ಅಭಿಪ್ರಾಯ. ಆದರೆ, ಈ ವಾದದಲ್ಲಿ ಹುರುಳಿಲ್ಲ ಅಂತ ವಾದಿಸುವ ತಜ್ಞರೂ ಇದ್ದಾರೆ. ಇಂಥ ಉಹಾಪೋಹಗಳಿಗೆ ಕಿವಿಗೊಡಬೇಡಿ, ಯಾಕೆಂದರೆ, ಮೂರನೇ ಅಲೆಯಲ್ಲಿ ಮಕ್ಕಳೇ ಜಾಸ್ತಿ ಸೋಂಕಿಗಿಡಾಗುತ್ತಾರೆ ಎನ್ನುವುದು ಆಧಾರರಹಿತವಾದ ಅಭಿಪ್ರಾಯ ಅಂತ ಅವರು ಹೇಳುತ್ತಾರೆ.

ಆದರೆ, ಮಹಾರಾಷ್ಟ್ರ ಸರ್ಕಾರ ಈ ಬಾರಿ ಯಾವುದೇ ಚಾನ್ಸ್ ತೆಗೆದುಕೊಳ್ಳಲು ತಯಾರಿಲ್ಲ, ರಾಜ್ಯದಾದ್ಯಂತ ಮಕ್ಕಳ ಆರೋಗ್ಯ ವ್ಯವಸ್ಥೆಯನ್ನು, ಕೇಂದ್ರಗಳನ್ನು ಸುಧಾರಿಸುವ ಮತ್ತು ಬಲಪಡಿಸುವ ಕೆಲಸಗಳು ಅಲ್ಲಿ ಜಾರಿಯಲ್ಲಿವೆ. ರವಿವಾರದಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆತಂಕವನ್ನು ತೋಡಿಕೊಂಡಿದ್ದಾರೆ.

‘ಮೂರನೇ ಅಲೆ ಯಾವಾಗ ಬರಲಿದೆ ಅಂತ ನಿಖರವಾಗಿ ಹೇಳಲಾಗದು. ಅದರೆ, ಅದನ್ನು ಎದುರಿಸಲು ನಾವು ಸಿದ್ಧತೆಗಳನ್ನು ಮಾಡಿಕೊಂಡಿರಬೇಕು. ಎಲ್ಲಾ ಜಿಲ್ಲಾಡಳಿತಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಸರ್ಕಾರವೂ ಕಾರ್ಯಸನ್ನದ್ಧವಾಗಿದೆ. ಜನ ಲಸಿಕೆಗಳನ್ನು ಹಾಕಿಸಿಕೊಳ್ಳುತ್ತಿದ್ದರೂ ಎಚ್ಚರ ತಪ್ಪಬಾರದು,’ ಎಂದು ಠಾಕ್ರೆ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣ ಇಳಿಮುಖಗೊಂಡು ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ಏಪ್ರಿಲ್ ಮಧ್ಯಭಾಗದಿಂದ ಆರಂಭವಾದ ಲಾಕ್​ಡೌನ್​ ಅನ್ನು ಸಡಿಲಿಸುವ ಗೋಜಿಗೆ ಠಾಕ್ರೆ ಸರ್ಕಾರ ಹೋಗದೆ ಅದನ್ನು ಜೂನ್ 15ರವರೆಗೆ ವಿಸ್ತರಿಸಿದೆ. ಪ್ರಕರಣಗಳು ಹೆಚ್ಚಿರುವ ಕಡೆಗಳಲ್ಲಿ ಮತ್ತಷ್ಟು ಬಿಗಿಕ್ರಮಗಳನ್ನು ತೆಗೆದುಕೊಳ್ಳಲಾಗುವದು ಮತ್ತು ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿರುವ ಪ್ರದೇಶಗಳಲ್ಲಿ ಹಂತ ಹಂತವಾಗಿ ಲಾಕ್​ಡೌನ್ ಡಿಲಿಸಲಾಗವುದು ಎಂದು ಸರ್ಕಾರ ಹೊರಡಿಸಿರುವ ಪ್ರಕಟಣೆ ಹೇಳುತ್ತದೆ

ಇದನ್ನೂ ಓದಿ: Covid Warriors: ಇನ್ಮುಂದೆ ನಗರ ಮತ್ತು ಸ್ಥಳೀಯ ಸಂಸ್ಥೆಗಳು, ಜಿ.ಪಂ, ತಾ.ಪಂ ಸದಸ್ಯರು ಮತ್ತು ಗ್ರಾ.ಪಂ. ಸದಸ್ಯರೂ ಕೊವಿಡ್ ವಾರಿಯರ್ಸ್​

Follow us on

Related Stories

Most Read Stories

Click on your DTH Provider to Add TV9 Kannada