Lakshadweep ಲಕ್ಷದ್ವೀಪದ ಆಡಳಿತಾಧಿಕಾರಿಯನ್ನು ವಾಪಸ್ ಕರೆಸಿಕೊಳ್ಳಿ; ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ಪಿಣರಾಯಿ ವಿಜಯನ್

Kerala Assembly: ಸುಧಾರಣೆಗಳ ಹೆಸರಿನಲ್ಲಿ ರೂಪಿಸಲಾದ ಕಾರ್ಯಸೂಚಿಯ ಅನುಷ್ಠಾನವು ತೆಂಗಿನ ಮರಗಳಿಗೆ ಕೇಸರಿ ಬಣ್ಣ ಬಳಿಯುವುದರೊಂದಿಗೆ ಪ್ರಾರಂಭವಾಯಿತು. ಇದು ಈಗ ದ್ವೀಪವಾಸಿಗಳ ಸಾಂಪ್ರದಾಯಿಕ ಆವಾಸಸ್ಥಾನ, ಜೀವನ ಮತ್ತು ನೈಸರ್ಗಿಕ ಸಂಬಂಧಗಳನ್ನು ನಾಶಮಾಡುವ ಮಟ್ಟಕ್ಕೆ ಬೆಳೆದಿದೆ ಎಂದು ನಿರ್ಣಯದಲ್ಲಿ ಆರೋಪಿಸಲಾಗಿದೆ

Lakshadweep ಲಕ್ಷದ್ವೀಪದ ಆಡಳಿತಾಧಿಕಾರಿಯನ್ನು ವಾಪಸ್ ಕರೆಸಿಕೊಳ್ಳಿ; ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್
Follow us
ರಶ್ಮಿ ಕಲ್ಲಕಟ್ಟ
|

Updated on:May 31, 2021 | 4:37 PM

ತಿರುವನಂತಪುರಂ: ಲಕ್ಷದ್ವೀಪದ ಜನರಿಗೆ ಬೆಂಬಲ ವ್ಯಕ್ತಪಡಿಸಿದ ಕೇರಳ ವಿಧಾನಸಭೆ ಸೋಮವಾರ ಸರ್ವಾನುಮತದಿಂದ ದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರನ್ನು ವಾಪಸ್ ಕರೆಸಿಕೊಳ್ಳಿ ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಿದ್ದು, ದ್ವೀಪವಾಸಿಗಳ ಜೀವನ ಮತ್ತು ಜೀವನೋಪಾಯವನ್ನು ರಕ್ಷಿಸಲು ಕೇಂದ್ರದ ತಕ್ಷಣದ ಹಸ್ತಕ್ಷೇಪವನ್ನು ಕೋರಿತು. ಇದರೊಂದಿಗೆ, ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕೇಂದ್ರಾಡಳಿತ ಪ್ರದೇಶದ ಜನರನ್ನು ಬೆಂಬಲಿಸುವ ನಿರ್ಣಯವನ್ನು ಮಂಡಿಸಿದ ದೇಶದ ಮೊದಲ ರಾಜ್ಯವಾಗಿದೆ ಕೇರಳ.

ಅರಬ್ಬೀ ಸಮುದ್ರದಲ್ಲಿ ನೆಲೆಗೊಂಡಿರುವ ದ್ವೀಪಸಮೂಹದ ಲಕ್ಷದ್ವೀಪವು ಪಟೇಲ್ ಜಾರಿಗೆ ತರುತ್ತಿರುವ ಇತ್ತೀಚಿನ ಕ್ರಮಗಳು ಮತ್ತು ಆಡಳಿತ ಸುಧಾರಣೆಗಳ ಬಗ್ಗೆ ಕೆಲವು ದಿನಗಳಿಂದ ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇರಳ ಮತ್ತು ಲಕ್ಷದ್ವೀಪಗಳ ನಡುವಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ನೆನಪಿಸುವ ಮತ್ತು ಅಲ್ಲಿನ ನೈಸರ್ಗಿಕ ಪ್ರಜಾಪ್ರಭುತ್ವವನ್ನು ನಾಶಮಾಡಲು ಯತ್ನಿಸುತ್ತಿದೆ ಎಂದು ಕೇಂದ್ರವನ್ನು ಟೀಕಿಸಿದ ಪಿಣರಾಯಿ, 15 ನೇ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ ಮೊದಲ ನಿರ್ಣಯ ಇದಾಗಿದೆ.

ಲಕ್ಷದ್ವೀಪದ ಭವಿಷ್ಯವು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದ ಅವರು, ಅದರ ವಿಶಿಷ್ಟ ಸಂಸ್ಕೃತಿ ಮತ್ತು ಸ್ಥಳೀಯ ಜೀವನಶೈಲಿಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.

ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಯಾರಾದರೂ ಲಕ್ಷದ್ವೀಪದ ಆಡಳಿತಾಧಿಕಾರಿಯ ಕ್ರಮಗಳ ವಿರುದ್ಧ ಬಲವಾದ ಭಿನ್ನಾಭಿಪ್ರಾಯವನ್ನು ದಾಖಲಿಸಬೇಕು ಎಂದು ಮುಖ್ಯಮಂತ್ರಿ ಒತ್ತಾಯಿಸಿದರು. ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಆಡಳಿತಾರೂಢ ಸಿಪಿಐ (ಎಂ) ನೇತೃತ್ವದ ಎಡ ಡೆಮಾಕ್ರಟಿಕ್ ಫ್ರಂಟ್ ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಸದಸ್ಯರು ಈ ನಿರ್ಣಯವನ್ನು ಸರ್ವಾನುಮತದಿಂದ ಬೆಂಬಲಿಸಿದರು.

ಲಕ್ಷದ್ವೀಪ ಜನರ ವಿಶಿಷ್ಟ ಜೀವನ ವಿಧಾನವನ್ನು ನಾಶಪಡಿಸುವ ಮೂಲಕ ಕೇಸರಿಕರಣ, ಸಾಂಸ್ಥಿಕ ಹಿತಾಸಕ್ತಿಗಳನ್ನು ಹೇರಲು ಪ್ರಯತ್ನಿಸಲಾಗುತ್ತಿದೆ ಎಂದು ನಿರ್ಣಯದಲ್ಲಿ ಹೇಳಿದೆ.

ಸುಧಾರಣೆಗಳ ಹೆಸರಿನಲ್ಲಿ ರೂಪಿಸಲಾದ ಕಾರ್ಯಸೂಚಿಯ ಅನುಷ್ಠಾನವು ತೆಂಗಿನ ಮರಗಳಿಗೆ ಕೇಸರಿ ಬಣ್ಣ ಬಳಿಯುವುದರೊಂದಿಗೆ ಪ್ರಾರಂಭವಾಯಿತು. ಇದು ಈಗ ದ್ವೀಪವಾಸಿಗಳ ಸಾಂಪ್ರದಾಯಿಕ ಆವಾಸಸ್ಥಾನ, ಜೀವನ ಮತ್ತು ನೈಸರ್ಗಿಕ ಸಂಬಂಧಗಳನ್ನು ನಾಶಮಾಡುವ ಮಟ್ಟಕ್ಕೆ ಬೆಳೆದಿದೆ ಎಂದು ನಿರ್ಣಯದಲ್ಲಿ ಆರೋಪಿಸಲಾಗಿದೆ. ಅಪರಾಧ ಪ್ರಮಾಣ ಅಸಾಧಾರಣವಾಗಿ ಕಡಿಮೆ ಇರುವ ದ್ವೀಪದಲ್ಲಿ ಗೂಂಡಾ ಕಾಯ್ದೆಯನ್ನು ತರಲು ಕ್ರಮ ಕೈಗೊಳ್ಳಲಾಗಿದೆ.

ಮೀನುಗಾರಿಕೆಯ ಸಾಂಪ್ರದಾಯಿಕ ಜೀವನೋಪಾಯವನ್ನು ನಾಶಮಾಡುವ ಉದ್ದೇಶವನ್ನು ಅಧಿಕಾರಿಗಳು ಹೊಂದಿದ್ದಾರೆ. ಮೀನುಗಾರರ ದೋಣಿಗಳು ಮತ್ತು ಬಲೆಗಳನ್ನು ಇರಿಸಲಾಗಿರುವ ಡೇರೆಗಳನ್ನು ನಾಶಪಡಿಸಲಾಗಿದೆ.

ಪ್ರದೇಶದ ಜನರ ನೈಸರ್ಗಿಕ ಆಹಾರದ ಭಾಗವಾಗಿರುವ ಗೋಮಾಂಸವನ್ನು ಹೊರಗಿಡುವ ಪ್ರಯತ್ನದ ಮೂಲಕ, ಗೋಹತ್ಯೆಯನ್ನು ನಿಷೇಧಿಸುವ ಸಂಘ ಪರಿವಾರದ ಕಾರ್ಯಸೂಚಿಯನ್ನು ಹಿಂಬಾಗಿಲಿನ ಮೂಲಕ ಜಾರಿಗೆ ತರಲಾಗುತ್ತಿದೆ.  ಹೀಗಾಗಿ, ಇಂಚಿಂಚು ಪ್ರದೇಶದ ಜನರ ಸ್ಥಳೀಯ ಜೀವನ ಮತ್ತು ಸಂಸ್ಕೃತಿಯನ್ನು ಸರ್ವನಾಶಗೊಳಿಸುವಲ್ಲಿ ಆಡಳಿತಾಧಿಕಾರಿ ಮುಂದಾಗಿದ್ದಾರೆ ಎಂದು ಪಿಣರಾಯಿ ಆರೋಪಿಸಿದರು.

ವಿವಿಧ ಸರ್ಕಾರಿ ಇಲಾಖೆಗಳ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಲು ಆಡಳಿತಾಧಿಕಾರಿಗೆ ವಿಶೇಷ ಅಧಿಕಾರವನ್ನು ನೀಡುವ ಕೇಂದ್ರದ ಕಾರ್ಯವನ್ನು ಟೀಕಿಸಿದ ವಿಜಯನ್, ತಮ್ಮ ಆಯ್ಕೆಯ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ದ್ವೀಪದ ನೈಸರ್ಗಿಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದಕ್ಕೆ ಇದು ಕಾರಣವಾಗಿದೆ ಎಂದು ಹೇಳಿದರು.

ಲಕ್ಷದ್ವೀಪದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಸಂಘ ಪರಿವಾರ್ ಕಾರ್ಯಸೂಚಿಯ ಪ್ರಯೋಗಾಲಯವಾಗಿ ನೋಡಬೇಕು. ಅವರು ದೇಶದ ಜನರ ಸಂಸ್ಕೃತಿ, ಭಾಷೆ, ಜೀವನಶೈಲಿ ಮತ್ತು ಆಹಾರ ಪದ್ಧತಿಗಳನ್ನು ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ  ಎಂದು ಮುಖ್ಯಮಂತ್ರಿ ವಿಜಯನ್ ಆರೋಪಿಸಿದರು.

ಒಂದು ಪ್ರದೇಶದ ಜನರನ್ನು “ಕಾರ್ಪೊರೇಟ್ ಹಿತಾಸಕ್ತಿಗಳು ಮತ್ತು ಹಿಂದುತ್ವ ರಾಜಕಾರಣಕ್ಕೆ” ಗುಲಾಮರನ್ನಾಗಿ ಮಾಡುವ ಈ ಪ್ರಯತ್ನದ ವಿರುದ್ಧ ಬಲವಾದ ಪ್ರತಿರೋಧವನ್ನು ಎತ್ತಬೇಕು ಎಂದು ಅವರು ಹೇಳಿದರು. ಕೇಂದ್ರಾಡಳಿತ ಪ್ರದೇಶದ ವಿಶಿಷ್ಟ ಲಕ್ಷಣಗಳು ಮತ್ತು ಸ್ಥಳೀಯ ಜನರು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಹೇಳಿದ ಪಿಣರಾಯಿ, ಇದಕ್ಕೆ ಸವಾಲು ಒಡ್ಡಿದ ಆಡಳಿತಾಧಿಕಾರಿಯನ್ನು ಜವಾಬ್ದಾರಿಗಳಿಂದ ತೆಗೆದುಹಾಕಬೇಕು ಎಂದು ಹೇಳಿದರು.

ಪ್ರತಿಪಕ್ಷ ಕಾಂಗ್ರೆಸ್ ಮುಖಂಡ ವಿ.ಡಿ. ಸತೀಶನ್ ಈ ನಿರ್ಣಯವನ್ನು ಬೆಂಬಲಿಸಿದರು. ಸುಧಾರಣೆಗಳ ಹೆಸರಲ್ಲಿ ಪಟೇಲ್ ಜಾರಿಗೆ ತರುವ ಕಾರ್ಯಸೂಚಿಯನ್ನು ಅರಬ್ಬೀ ಸಮುದ್ರಕ್ಕೆ ಎಸೆಯಬೇಕು ಎಂದು ಹೇಳಿದರು.

ಇದನ್ನೂ ಓದಿ: Save Lakshadweep ಲಕ್ಷದ್ವೀಪದಲ್ಲಿ ಬೀಫ್ ನಿಷೇಧ, ಗೂಂಡಾ ಕಾಯ್ದೆ, ಮದ್ಯ ಮಾರಾಟಕ್ಕೆ ಅನುಮತಿ: ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ನಿರ್ಧಾರಕ್ಕೆ ಜನರ ಆಕ್ರೋಶ

Explainer: ಏನಾಗುತ್ತಿದೆ ಲಕ್ಷದ್ವೀಪದಲ್ಲಿ, ಹೊಸ ಆಡಳಿತಾಧಿಕಾರಿಯ ನಿಯಮಗಳಿಗೆ ಯಾಕಿಷ್ಟು ವಿರೋಧ?

Published On - 4:27 pm, Mon, 31 May 21